September 23, 2026

ಕರಾವಳಿ-ಮಲೆನಾಡು ಸಮಸ್ಯೆಗಳ ಪರಿಹಾರಕ್ಕೆ ರಾಜಕೀಯ ಪಕ್ಷಗಳ ಒಗ್ಗಟ್ಟಿನ ಹೋರಾಟ ಅಗತ್ಯ: ಚಂದ್ರಕಾಂತ ಕೊಚರೇಕರ

ಶಿರಸಿ / ಉತ್ತರ ಕನ್ನಡ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು, ಜನಪ್ರತಿನಿಧಿಗಳು ಹಾಗೂ ಎಲ್ಲಾ ರಾಜಕೀಯ ಪಕ್ಷಗಳು ಈಗಲಾದರೂ ಎಚ್ಚೆತ್ತು ಕರಾವಳಿ ಮತ್ತು ಮಲೆನಾಡು ಭಾಗದ ಜ್ವಲಂತ ಸಮಸ್ಯೆಗಳನ್ನು ಪ್ರಾಮಾಣಿಕವಾಗಿ ಬಗೆಹರಿಸಲು ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಅರಣ್ಯ ಭೂಮಿ ಹಕ್ಕು ಹೋರಾಟ ಸಂಘಟನೆಗಳ ರಾಜ್ಯ ಸಮಿತಿಯ ಅಧ್ಯಕ್ಷ ಚಂದ್ರಕಾಂತ ಕೊಚರೇಕರ ಆಗ್ರಹಿಸಿದ್ದಾರೆ.

ಕಾಯ್ದೆಗಳ ವೈಫಲ್ಯ ಹಾಗೂ ಆಡಳಿತಾತ್ಮಕ ನಿರ್ಲಕ್ಷ್ಯ: ಶೇಕಡಾ 82ರಷ್ಟು ಅರಣ್ಯ ಭೂಮಿ ಹೊಂದಿರುವ ಉತ್ತರ ಕನ್ನಡ ಹಾಗೂ ಶಿವಮೊಗ್ಗ ಸೇರಿದಂತೆ ಮಲೆನಾಡು-ಕರಾವಳಿ ಭಾಗದ ಜನರು ತಲೆತಲಾಂತರದಿಂದ ವಸತಿ ಮತ್ತು ಜೀವನೋಪಾಯಕ್ಕಾಗಿ ಅರಣ್ಯವನ್ನೇ ಅವಲಂಬಿಸಿದ್ದಾರೆ. 1980ರ ಅರಣ್ಯ ಸಂರಕ್ಷಣಾ ಕಾಯ್ದೆ ಹಾಗೂ ತದನಂತರ ಬಂದ ಅರಣ್ಯ ಹಕ್ಕು ಕಾಯ್ದೆಯಡಿ ಒತ್ತುವರಿ ಸಕ್ರಮಗೊಳಿಸಲು ಅವಕಾಶಗಳಿದ್ದರೂ ಅರ್ಹರಿಗೆ ಇದರ ಲಾಭ ಸಿಕ್ಕಿಲ್ಲ. ಸ್ಥಳ ಮಹಜರು ಹಾಗೂ ಸಾಂದರ್ಭಿಕ ಸಾಕ್ಷ್ಯಗಳನ್ನು ಪರಿಗಣಿಸಿ ಭೂ ಹಕ್ಕು ನೀಡುವಂತೆ ರಾಜ್ಯ ಮುಖ್ಯ ಕಾರ್ಯದರ್ಶಿಗಳು ನೀಡಿದ್ದ ಆದೇಶವೂ ಅನುಷ್ಠಾನಗೊಂಡಿಲ್ಲ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅನಧಿಕೃತ ಮನೆ ತೆರಿಗೆ ಸುತ್ತೋಲೆಗೆ ಆಕ್ರೋಶ: ಪಂಚಾಯತ್ ರಾಜ್ ತಿದ್ದುಪಡಿ ಅಧಿನಿಯಮ 2025ರ ಪ್ರಕರಣ 199(ಸಿ) ಜಾರಿಯಲ್ಲಿದ್ದಾಗ ಮೌನ ವಹಿಸಿದ್ದ ಆಡಳಿತ ವ್ಯವಸ್ಥೆ, ಇದೀಗ ಅರಣ್ಯ, ಸರ್ಕಾರಿ ಹಾಗೂ ಗಾವಠಾಣಾ ಭೂಮಿಯಲ್ಲಿರುವ ಮನೆಗಳನ್ನು ತೆರಿಗೆ ಪಟ್ಟಿಯಿಂದ ಕೈಬಿಡಲು ಸುತ್ತೋಲೆ ಹೊರಡಿಸಿರುವುದು ಜಡ್ಡುಗಟ್ಟಿದ ಆಡಳಿತಕ್ಕೆ ಸಾಕ್ಷಿಯಾಗಿದೆ.

ಸರ್ವಪಕ್ಷ ನಿಯೋಗ: 2005ರ ಪೂರ್ವದ ಅರಣ್ಯ ಭೂಮಿ ಸಾಗುವಳಿದಾರರಿಗೆ ಭೂಮಿಯ ಅಧಿಭೋಗದ ಹಕ್ಕು ಕೊಡಿಸಲು ಹಾಗೂ ಜನವಸತಿ ಪ್ರದೇಶಗಳನ್ನು ಪರಿಸರ ಸೂಕ್ಷ್ಮ ವ್ಯಾಪ್ತಿಯಿಂದ ಹೊರಗಿಡಲು ಅಗತ್ಯ ತಿದ್ದುಪಡಿ ತರಲು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸರ್ವಪಕ್ಷ ನಿಯೋಗವನ್ನು ಕೇಂದ್ರ ಸರ್ಕಾರಕ್ಕೆ ಕರೆದೊಯ್ಯಬೇಕು.

ಕಾಯ್ದೆಗೆ ತಿದ್ದುಪಡಿ: ಪಂಚಾಯತ್ ರಾಜ್ ತಿದ್ದುಪಡಿ ಅಧಿನಿಯಮ 2025ರ ಪ್ರಕರಣ 199ಸಿ(1)ಕ್ಕೆ ತಕ್ಷಣವೇ ಅಗತ್ಯ ತಿದ್ದುಪಡಿ ತಂದು, ಸಾರ್ವಜನಿಕರ ವಾಸದ ಭದ್ರತೆ ಹಾಗೂ ಪಂಚಾಯತ್‌ಗಳ ಆದಾಯವನ್ನು ಸಮತೋಲನಗೊಳಿಸಲು ಸರ್ಕಾರ ಮಧ್ಯಪ್ರವೇಶಿಸಬೇಕು.

    About The Author

    error: Content is protected !!