ಮಡಿಕೇರಿ: ಇಂದಿನ ಮಕ್ಕಳಿಗೆ ಶಿಕ್ಷಣ ಹಾಗೂ ಕೌಶಲ್ಯ ತರಬೇತಿಯ ಜೊತೆಗೆ ಮಾನವೀಯ ಮೌಲ್ಯಗಳು, ಕುಟುಂಬ ಸಂಬಂಧಗಳು ಮತ್ತು ಹಿರಿಯರನ್ನು ಗೌರವಿಸುವ ಸಂಸ್ಕೃತಿಯನ್ನು ಕಲಿಸುವ ಅಗತ್ಯವಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ ಶುಭ ಅವರು ಅಭಿಪ್ರಾಯಪಟ್ಟರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸೇರಿದಂತೆ ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ನಗರದ ಶಿಶು ಕಲ್ಯಾಣ ಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ‘ವಿಶ್ವ ಹಿರಿಯ ನಾಗರಿಕರ ದಿನಾಚರಣೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಈ ಬಾರಿಯ ದಿನಾಚರಣೆಯನ್ನು ‘ದೀರ್ಘಾಯುಷ್ಯದ ಯುಗ: ಸುದೀರ್ಘ ಜೀವನಕ್ಕಾಗಿ ಜೀವನ ಕ್ರಮಗಳ ಮರು ಚಿಂತನೆ’ ಎಂಬ ಘೋಷವಾಕ್ಯದೊಂದಿಗೆ ಆಚರಿಸಲಾಯಿತು.
ಆರೈಕೆ ಮತ್ತು ತಾಳ್ಮೆ ಅಗತ್ಯ: ಬಾಲ್ಯದಲ್ಲಿ ಮಗು ಸ್ವಾವಲಂಬಿಯಾಗುವವರೆಗೆ ಪೋಷಕರ ಆರೈಕೆ ಎಷ್ಟು ಅಗತ್ಯವೋ, ವೃದ್ಧಾಪ್ಯದಲ್ಲಿರುವ ತಂದೆ-ತಾಯಿಗೂ ಮಕ್ಕಳ ಸಹಕಾರ, ಪ್ರೀತಿ ಮತ್ತು ತಾಳ್ಮೆ ಅಷ್ಟೇ ಮುಖ್ಯ.
ನೈತಿಕ ಮೌಲ್ಯಗಳಿಗೆ ಆದ್ಯತೆ ನೀಡಿ: ತಂತ್ರಜ್ಞಾನ ಯುಗದಲ್ಲಿ ಮಾನವೀಯತೆ ಮತ್ತು ಪರಸ್ಪರ ಕಾಳಜಿ ಕಡಿಮೆಯಾಗುತ್ತಿರುವುದು ಆತಂಕಕಾರಿ. ಮಕ್ಕಳಿಗೆ ಬರಿ ರ್ಯಾಂಕ್, ಅಂಕಗಳ ಗುರಿ ನೀಡದೆ ನೈತಿಕ ಹಾಗೂ ಜೀವನ ಮೌಲ್ಯಗಳನ್ನು ಕಲಿಸಬೇಕು.

ಅವಿಭಕ್ತ ಕುಟುಂಬ ಮೌಲ್ಯಗಳ ಪುನರುಜ್ಜೀವನ: ಹಿಂದೆ ಅವಿಭಕ್ತ ಕುಟುಂಬಗಳಲ್ಲಿ ಬೆಳೆಯುತ್ತಿದ್ದ ಮಕ್ಕಳಿಗೆ ಸಂಬಂಧಗಳ ಅರಿವಿರುತ್ತಿತ್ತು. ಆದರೆ ಇಂದು ಸಂಬಂಧಗಳು ಬರೀ ‘ಆಂಟಿ’, ‘ಅಂಕಲ್’ ಎಂಬ ಪದಗಳಿಗೆ ಸೀಮಿತವಾಗುತ್ತಿವೆ. ಭಾರತೀಯ ಪರಂಪರೆಯ ಕುಟುಂಬ ಮೌಲ್ಯಗಳನ್ನು ಉಳಿಸಿ ಬೆಳೆಸಬೇಕಿದೆ.
ಕಾನೂನು ನೆರವು: 2007ರ ಹಿರಿಯ ನಾಗರಿಕರ ಪಾಲನೆ ಮತ್ತು ಕಲ್ಯಾಣ ಕಾಯ್ದೆಯಡಿ ಅಗತ್ಯವಿದ್ದಲ್ಲಿ ಹಿರಿಯರು ನಿರ್ವಹಣಾ ನೆರವು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಉಚಿತ ಕಾನೂನು ಸಹಾಯ ಪಡೆಯಬಹುದು ಎಂದು ನ್ಯಾಯಾಧೀಶರು ತಿಳಿಸಿದರು.
ಕೊಡಗಿನ ಹಿರಿಯರನ್ನು ಗೌರವಿಸುವ ಉತ್ತಮ ಸಂಪ್ರದಾಯಗಳನ್ನು ಮುಂಬರುವ ಪೀಳಿಗೆಗೂ ತಲುಪಿಸಿ ಮುಂದುವರಿಸಬೇಕೆಂದು ಅವರು ಕರೆ ನೀಡಿದರು.
(ವರದಿ: ಪ್ರಿತುನ್ ಪೂವಣ್ಣ)
About The Author


More Stories
ಮಡಿಕೇರಿ ದಸರಾ: ಕೆಎಸ್ಆರ್ಟಿಸಿಯಿಂದ ಇದೇ ಮೊದಲ ಬಾರಿಗೆ ವಿಶೇಷ ಪ್ಯಾಕೇಜ್ ಟೂರ್
‘ಸಮಸ್ತ’ ಆ್ಯಪ್ ತಾಂತ್ರಿಕ ದೋಷ ಖಂಡಿಸಿ ಆಶಾ ಕಾರ್ಯಕರ್ತೆಯರ ಪ್ರತಿಭಟನೆ
ಮಡಿಕೇರಿ ಮತ್ತು ಗೋಣಿಕೊಪ್ಪ ದಸರಾ: ಕಾನೂನು ಸುವ್ಯವಸ್ಥೆ ಪಾಲನೆಗೆ ಜಿಲ್ಲಾಧಿಕಾರಿ ಖಡಕ್ ಸೂಚನೆ