November 22, 2026

ಆಂಗ್ಲ ಭಾಷೆಯ ನಾಮಫಲಕ ಅಳವಡಿಕೆಗೆ ಕರವೇ ಆಕ್ರೋಶ; ನಗರಸಭೆ ವಿರುದ್ಧ ಕಿಡಿ

ಶೇ.60 ಕನ್ನಡ ಕಡ್ಡಾಯ ನಿಯಮ ಉಲ್ಲಂಘನೆ ಆರೋಪ; ದಂಡ ವಿಧಿಸಿ ಫಲಕ ಬದಲಾಯಿಸದಿದ್ದರೆ ಉಗ್ರ ಪ್ರತಿಭಟನೆ ಎಚ್ಚರಿಕೆ

ಮಡಿಕೇರಿ (ಕೊಡಗು): ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ವೃತ್ತದ ಚರ್ಚ್ ಸೈಡ್ ಹೋಟೆಲ್ ಸಮೀಪ ‘ಇವಿ ಚಾರ್ಜಿಂಗ್ ಸ್ಟೇಷನ್’ ಎಂಬ ನಾಮಫಲಕವನ್ನು ಸಂಪೂರ್ಣವಾಗಿ ಆಂಗ್ಲ ಭಾಷೆಯಲ್ಲಿ ಅಳವಡಿಸಿ ಕನ್ನಡವನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿರುವ ಎಚ್. ಶಿವರಾಮೇಗೌಡ ಬಣದ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಪದಾಧಿಕಾರಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಕರವೇ ಕೊಡಗು ಜಿಲ್ಲಾಧ್ಯಕ್ಷ ಬಿ.ಎ. ದಿನೇಶ್ ಶೆಟ್ಟಿ ಹಾಗೂ ಮಡಿಕೇರಿ ತಾಲೂಕು ಅಧ್ಯಕ್ಷ ಅರುಣ್ ಕುಮಾರ್ ನಗರಸಭೆ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು. “ನಾಮಫಲಕಗಳಲ್ಲಿ ಶೇಕಡ 60ರಷ್ಟು ಕನ್ನಡ ಭಾಷೆ ಕಡ್ಡಾಯವಾಗಿ ಇರಬೇಕು ಎಂದು ರಾಜ್ಯ ಸರ್ಕಾರ ಸ್ಪಷ್ಟ ಆದೇಶ ಹೊರಡಿಸಿದೆ. ಆದರೆ ಇಲ್ಲಿ ಆಂಗ್ಲ ಭಾಷೆಯೇ ರಾರಾಜಿಸುತ್ತಿದ್ದು, ನಗರಸಭೆ ಅಧಿಕಾರಿಗಳು ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪರವಾನಗಿ ರದ್ದತಿಗೆ ಒತ್ತಾಯ: “ಸರ್ಕಾರದ ನಿಯಮ ಉಲ್ಲಂಘಿಸಿ ಆಂಗ್ಲ ಭಾಷೆಯ ನಾಮಫಲಕ ಅಳವಡಿಸಿರುವ ಸಂಬಂಧಪಟ್ಟ ಮಳಿಗೆ ಮಾಲೀಕರಿಗೆ ನಗರಸಭೆಯಿಂದ ದೊಡ್ಡ ಮೊತ್ತದ ದಂಡ ವಿಧಿಸಿ, ಪರವಾನಗಿಯನ್ನು ರದ್ದುಗೊಳಿಸಬೇಕು. ಜೊತೆಗೆ ಕೂಡಲೇ ಕನ್ನಡ ನಾಮಫಲಕ ಅಳವಡಿಸಲು ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ಕರವೇ ವತಿಯಿಂದ ಮಡಿಕೇರಿ ನಗರಸಭೆ ಕಚೇರಿ ಎದುರು ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು” ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಕರವೇ ಕೊಡಗು ಜಿಲ್ಲಾಧ್ಯಕ್ಷ ಬಿ.ಎ. ದಿನೇಶ್ ಶೆಟ್ಟಿ, ಮಡಿಕೇರಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಕೆ. ಚಂದ್ರು, ಮಡಿಕೇರಿ ತಾಲೂಕು ಅಧ್ಯಕ್ಷ ಅರುಣ್ ಕುಮಾರ್, ತಾಲೂಕು ಗೌರವಾಧ್ಯಕ್ಷ ನಾಗರಾಜ್, ಮಹಿಳಾ ತಾಲೂಕು ಉಪಾಧ್ಯಕ್ಷೆ ತನುಜಾವತಿ, ಲತಾ ಹಾಗೂ ತಾಜ್ ನಿಶಾ ಸೇರಿದಂತೆ ಹಲವು ಪದಾಧಿಕಾರಿಗಳು ಉಪಸ್ಥಿತರಿದ್ದರು.

– ವರದಿ: ಪ್ರಿತುನ್ ಪೂವಣ್ಣ, ಮಡಿಕೇರಿ

About The Author

error: Content is protected !!