October 22, 2026

ಚೆಟ್ಟಳ್ಳಿಯಲ್ಲಿ ಅಂತರರಾಷ್ಟ್ರೀಯ ಕಾಫಿ ದಿನಾಚರಣೆ: ಶಾಲಾ ಮಕ್ಕಳಿಗೆ, ಸಾರ್ವಜನಿಕರಿಗೆ ಕಾಫಿ ವಿತರಿಸಿ ಶುಭಾಶಯ

ಮಡಿಕೇರಿ: ವಿಶ್ವದಾದ್ಯಂತ ಲಕ್ಷಾಂತರ ಕುಟುಂಬಗಳ ಜೀವನೋಪಾಯದ ಪ್ರಮುಖ ಆಧಾರವಾಗಿರುವ ಕಾಫಿಯ ಮಹತ್ವ ಹಾಗೂ ಬೆಳೆಗಾರರ ಕೊಡುಗೆಯನ್ನು ಸಾರ್ವಜನಿಕರಿಗೆ ಪರಿಚಯಿಸುವ ಉದ್ದೇಶದಿಂದ, ಕಾಫಿ ಮಂಡಳಿಯ ಚೆಟ್ಟಳ್ಳಿಯ ಕಾಫಿ ಸಂಶೋಧನಾ ಉಪಕೇಂದ್ರದ ವತಿಯಿಂದ ಅಂತರರಾಷ್ಟ್ರೀಯ ಕಾಫಿ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ದಿನಾಚರಣೆಯ ಅಂಗವಾಗಿ ಕಂಡಕೆರೆಯ ಸರ್ಕಾರಿ ಶಾಲೆಯ ಮಕ್ಕಳಿಗೆ, ಚೆಟ್ಟಳ್ಳಿ ಪಟ್ಟಣದ ಸಾರ್ವಜನಿಕರಿಗೆ ಹಾಗೂ ಉಪಕೇಂದ್ರದ ಆವರಣದಲ್ಲಿದ್ದವರಿಗೆ ಉಚಿತವಾಗಿ ಕಾಫಿ ವಿತರಿಸಿ ಜಾಗೃತಿ ಮೂಡಿಸಲಾಯಿತು.

ಜಾಗತಿಕ ವಹಿವಾಟಿನಲ್ಲಿ ಕಾಫಿ: ಕಾಫಿ ಮಂಡಳಿಯ ಜಂಟಿ ನಿರ್ದೇಶಕ ಹಾಗೂ ಉಪಕೇಂದ್ರದ ಮುಖ್ಯಸ್ಥ ಡಾ. ಬಾಬು ಮಾತನಾಡಿ, “ವಿಶ್ವದಲ್ಲಿ ಪೆಟ್ರೋಲಿಯಂ ನಂತರ ಅತಿ ಹೆಚ್ಚು ವಹಿವಾಟು ನಡೆಯುವ ಪ್ರಮುಖ ವಾಣಿಜ್ಯ ಉತ್ಪನ್ನವೇ ಕಾಫಿ. ಜಗತ್ತಿನ ಸುಮಾರು 80 ದೇಶಗಳ ಆರ್ಥಿಕತೆ ಕಾಫಿ ಕ್ಷೇತ್ರವನ್ನು ಅವಲಂಬಿಸಿದ್ದು, 50ಕ್ಕೂ ಹೆಚ್ಚು ದೇಶಗಳು ಸಂಪೂರ್ಣವಾಗಿ ಇದರ ಮೇಲೆಯೇ ಆರ್ಥಿಕವಾಗಿ ಅವಲಂಬಿತವಾಗಿವೆ” ಎಂದು ತಿಳಿಸಿದರು.

ಭಾರತದ ಸಾಧನೆ: ಭಾರತವು ವಿಶ್ವದಲ್ಲಿ ಕಾಫಿ ಉತ್ಪಾದನೆಯಲ್ಲಿ 7ನೇ ಸ್ಥಾನ ಹಾಗೂ ರಫ್ತಿನಲ್ಲಿ 5ನೇ ಸ್ಥಾನದಲ್ಲಿದೆ. ಕಾಫಿ ಕ್ಷೇತ್ರಕ್ಕಾಗಿ ಪ್ರತ್ಯೇಕ ಸಂಶೋಧನಾ ಸಂಸ್ಥೆಯನ್ನು ಹೊಂದಿರುವ ಕೆಲವೇ ದೇಶಗಳಲ್ಲಿ ಭಾರತವೂ ಒಂದಾಗಿದೆ ಎಂಬುದು ಹೆಮ್ಮೆಯ ವಿಷಯ.

ಸಂಶೋಧನೆ ಮತ್ತು ಆಧುನಿಕ ತಂತ್ರಜ್ಞಾನದ ಮೂಲಕ ಕಾಫಿ ಬೆಳೆಗಾರರಿಗೆ ನೆರವಾಗುವುದರ ಜೊತೆಗೆ, ಕ್ಷೇತ್ರದ ಪ್ರತಿಯೊಬ್ಬ ಪಾಲುದಾರರ ಹಿತಾಸಕ್ತಿ ಕಾಯುವ ಅಗತ್ಯವಿದೆ ಎಂದು ಈ ವೇಳೆ ಅಭಿಪ್ರಾಯಪಡಲಾಯಿತು.

(ವರದಿ: ಪ್ರಿತುನ್ ಪೂವಣ್ಣ)

About The Author

error: Content is protected !!