ಗುಂಡ್ಲುಪೇಟೆ: ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳ ಭವ್ಯ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಿದ ಜೆಎಸ್ಎಸ್ ಶಿಕ್ಷಣ ಸಂಸ್ಥೆಯ ಕಾರ್ಯ ಶ್ಲಾಘನೀಯವಾದದ್ದು ಎಂದು ಟಿ.ನರಸೀಪುರ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ಹಾಗೂ ಕಾಲೇಜಿನ ಹಿರಿಯ ವಿದ್ಯಾರ್ಥಿ ಎಸ್.ಸಿ. ಶಿವಮೂರ್ತಿ ತಿಳಿಸಿದರು.
ಪಟ್ಟಣದ ಜೆಎಸ್ಎಸ್ ಕಾಲೇಜಿನಲ್ಲಿ ಆಯೋಜಿಸಿದ್ದ ಹಿರಿಯ ವಿದ್ಯಾರ್ಥಿಗಳ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, “ಇಲ್ಲಿ ಶಿಕ್ಷಣ ಪಡೆದ ಸಾವಿರಾರು ವಿದ್ಯಾರ್ಥಿಗಳು ಇಂದು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ. ನಾನು ೧೯೯೧-೯೪ರಲ್ಲಿ ಪದವಿ ಶಿಕ್ಷಣ ಪಡೆದು ಉತ್ತಮ ಬದುಕು ರೂಪಿಸಿಕೊಳ್ಳಲು ಈ ಕಾಲೇಜು ಕಾರಣ. ಇಲ್ಲಿ ಕೇವಲ ಶಿಕ್ಷಣವಷ್ಟೇ ಅಲ್ಲದೆ ಸಂಸ್ಕಾರ ಮತ್ತು ಬದುಕುವ ಕಲೆಯನ್ನು ಕಲಿಸಲಾಗುತ್ತದೆ. ಸುತ್ತೂರು ಮಠ ನೀಡಿದ ಕೊಡುಗೆಯಿಂದಾಗಿ ನನ್ನಂತಹ ಸಾವಿರಾರು ವಿದ್ಯಾರ್ಥಿಗಳು ಸಮಾಜದಲ್ಲಿ ಸಾಧನೆ ಮಾಡಲು ಸಾಧ್ಯವಾಗಿದೆ” ಎಂದರು.
ಮುಖ್ಯ ಅತಿಥಿಯಾಗಿದ್ದ ಬೆಂಗಳೂರಿನ ಚಾರ್ಟರ್ಡ್ ಅಕೌಂಟೆಂಟ್ ಹಾಗೂ ಹಿರಿಯ ವಿದ್ಯಾರ್ಥಿ ನಿತಿನ್ ಮಹದೇವಪ್ಪ ಮಾತನಾಡಿ, “ಮನೆಯನ್ನು, ದೇಶವನ್ನು ಮತ್ತು ಬದುಕನ್ನು ಬದಲಿಸುವ ಶಕ್ತಿ ಶಿಕ್ಷಣಕ್ಕಿದೆ. ಹಿಂದೆ ಸಾರಿಗೆ ವ್ಯವಸ್ಥೆ ಇಲ್ಲದೆ ಎತ್ತಿನ ಗಾಡಿಗಳನ್ನೇ ನೆಚ್ಚಿಕೊಂಡು ಕಷ್ಟಪಟ್ಟು ಶಿಕ್ಷಣ ಪಡೆದಿದ್ದೆ. ಜೆಎಸ್ಎಸ್ ಸಂಸ್ಥೆ ಇಲ್ಲದಿದ್ದರೆ ನಾನು ಶಿಕ್ಷಣ ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಹಿರಿಯ ವಿದ್ಯಾರ್ಥಿಗಳ ಅನುಭವ ಕಿರಿಯರಿಗೆ ಮಾರ್ಗದರ್ಶನವಾಗಬೇಕು” ಎಂದು ಹೇಳಿದರು.
ನಿವೃತ್ತ ಉಪನ್ಯಾಸಕ ಎಚ್.ಪಿ. ಬಸವರಾಜಪ್ಪ ಮಾತನಾಡಿ, “ಇದೇ ಕಾಲೇಜಿನಲ್ಲಿ ವ್ಯಾಸಂಗ ಮಾಡಿ, ಉಪನ್ಯಾಸಕನಾಗಿ ಸೇವೆ ಸಲ್ಲಿಸಿ ನಿವೃತ್ತನಾದ ಭಾಗ್ಯ ನನ್ನದು. ಸಂಸ್ಥೆಯಲ್ಲಿ ೩೫ ವರ್ಷಗಳ ಕಾಲ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿದ್ದು ಪೂಜ್ಯರ ಕೃಪಾಶೀರ್ವಾದ” ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲೆ ಡಾ. ಮಹದೇವಮ್ಮ ಪಿ. ಮಾತನಾಡಿ, “ಹಿರಿಯ ವಿದ್ಯಾರ್ಥಿಗಳು ಕಾಲೇಜಿನ ಮುಕುಟವಿದ್ದಂತೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಹಿರಿಯ ವಿದ್ಯಾರ್ಥಿಗಳು ಕಾಲೇಜಿನೊಂದಿಗೆ ನಿಕಟ ಸಂಪರ್ಕವಿಟ್ಟುಕೊಂಡು ಇಂದಿನ ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬಬೇಕು” ಎಂದು ಕೋರಿದರು.
ಸಾಧಕರಿಗೆ ಸನ್ಮಾನ: ಇದೇ ಸಂದರ್ಭದಲ್ಲಿ ಭೂಗೋಳಶಾಸ್ತ್ರ ವಿಷಯದಲ್ಲಿ ಚಿನ್ನದ ಪದಕ ಪಡೆದ ಕು. ನೀಲಾ ಹಾಗೂ ಚಲನಚಿತ್ರ ನೃತ್ಯ ಸಂಯೋಜಕಿ ಕು. ಪದ್ಮಾವತಿ ಅವರನ್ನು ಸನ್ಮಾನಿಸಲಾಯಿತು. ಹಿರಿಯ ವಿದ್ಯಾರ್ಥಿಗಳಾದ ಜ್ಯೋತಿ ಪ್ರಕಾಶ್, ಹಸಗೂಲಿ ಪ್ರಸಾದ್, ವೀರನಪುರ ಗುರುಪ್ರಸಾದ್, ಅರ್ಪಿತ, ಮಮತ, ನಾಗೇಂದ್ರ ತಮ್ಮ ಅನುಭವ ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಚಾಲಕ ಸಿ.ಎಂ. ಮಣಿಕಂಠ, ಹಿರಿಯ ವಿದ್ಯಾರ್ಥಿಗಳ ಸಂಘದ ಸಂಚಾಲಕಿ ಎಚ್.ಜಿ. ಶಶಿಕಲಾ ಸೇರಿದಂತೆ ಅಧ್ಯಾಪಕ ವೃಂದ ಹಾಗೂ ನೂರಾರು ಹಿರಿಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವರದಿ : ಸದಾನಂದ ಕನ್ನೇಗಾಲ ಗುಂಡ್ಲುಪೇಟೆ
About The Author


More Stories
ಗುಂಡ್ಲುಪೇಟೆಯಲ್ಲಿ ತಾಲೂಕು ಮಟ್ಟದ ‘ರಾಷ್ಟ್ರೀಯ ಪೋಷಣ್ ಅಭಿಯಾನ’: ಶಾಸಕ ಹೆಚ್.ಎಂ. ಗಣೇಶ್ ಪ್ರಸಾದ್ ಚಾಲನೆ
ಗುಂಡ್ಲುಪೇಟೆ ಪುರಸಭೆಯಲ್ಲಿ 80ನೇ ಸ್ವಾತಂತ್ರ್ಯೋತ್ಸವ: ಮಾಧ್ಯಮ ಪ್ರತಿನಿಧಿ ಶ್ರೀಮತಿ ತಾರಾ ನಾಗೇಂದ್ರ ಅವರಿಗೆ ಗೌರವ ಸನ್ಮಾನ
ನಮ್ಮ ಪರಂಪರೆ ನಮ್ಮ ಹೆಮ್ಮೆ, ಸಂರಕ್ಷಣೆ ನಮ್ಮ ಜವಾಬ್ದಾರಿ: ತೆರಕಣಾಂಬಿಯಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಾಗೂ ಶ್ರಮದಾನ