November 22, 2026

ಅರಣ್ಯ ಸಚಿವ ರಾಮಲಿಂಗಾರೆಡ್ಡಿಗೆ ರೈತ ಸಂಘದಿಂದ ದೂರು; ಅಕ್ರಮಗಳ ತನಿಖೆಗೆ ಆಗ್ರಹ

ಸಫಾರಿ ತಡೆ, ವನ್ಯಮೃಗಗಳ ಶವ ಪತ್ತೆ ಪ್ರಕರಣದ ತನಿಖಾ ವರದಿ ಬಹಿರಂಗಪಡಿಸಲು ಸಾರ್ವಜನಿಕರ ಒತ್ತಾಯ

ಗುಂಡ್ಲುಪೇಟೆ: ತಾಲೂಕಿನ ಬಂಡೀಪುರದ ಅರಣ್ಯ ಕಚೇರಿಗೆ ಭೇಟಿ ನೀಡಿದ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳು ಮನವಿ ಸಲ್ಲಿಸಿ, ಅರಣ್ಯ ವಲಯದಲ್ಲಿ ನಡೆಯುತ್ತಿರುವ ವಿವಿಧ ಅಕ್ರಮಗಳ ಕುರಿತು ಗಂಭೀರ ಆರೋಪಗಳನ್ನು ಮಾಡಿದರು.

ಸಚಿವರನ್ನು ಭೇಟಿಯಾದ ರೈತ ಮುಖಂಡರು, “ಅರಣ್ಯದಂಚಿನ ರೈತರಿಗೆ ಕಾಡುಪ್ರಾಣಿಗಳಿಂದ ತೀವ್ರ ತೊಂದರೆಯಾಗುತ್ತಿದ್ದು, ತಕ್ಷಣವೇ ಜಂಗಲ್ ಸಫಾರಿಯನ್ನು ತಡೆಹಿಡಿಯಬೇಕು” ಎಂದು ಒತ್ತಾಯಿಸಿದರು. ಅಲ್ಲದೆ, ಇತ್ತೀಚೆಗೆ ಮದ್ದೂರು ವಲಯದಲ್ಲಿ ಸಂಭವಿಸಿದ ಎರಡು ಆನೆಗಳು ಹಾಗೂ ಒಂದು ಹುಲಿಯ ಅನುಮಾನಾಸ್ಪದ ಸಾವಿನ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿ, ತನಿಖಾ ವರದಿಯ ಪ್ರತಿಯನ್ನು ಸಾರ್ವಜನಿಕರಿಗೆ ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದರು.

ಹೊರಗುತ್ತಿಗೆ ಸಿಬ್ಬಂದಿ ವಿರುದ್ಧ ಗಂಭೀರ ಆರೋಪ: “ಕಳೆದ ೧೫ ವರ್ಷಗಳಿಂದ ಮದ್ದೂರು ವಲಯದಲ್ಲಿ ಬಿಡುಬಿಟ್ಟಿರುವ ಹೊರಗುತ್ತಿಗೆ ನೌಕರರು ಕಳ್ಳಬೇಟೆಗಾರರೊಂದಿಗೆ ಶಾಮೀಲಾಗಿದ್ದಾರೆ. ಚೆಕ್‌ಪೋಸ್ಟ್‌ಗಳಲ್ಲಿ ಅಕ್ರಮ ಹಣ ವಸೂಲಿ ಮಾಡಲಾಗುತ್ತಿದೆ ಹಾಗೂ ಗಸ್ತು ತಿರುಗದೆ ಜೀಪುಗಳಿಗೆ ಡೀಸೆಲ್ ಲೆಕ್ಕ ತೋರಿಸಿ ಸರ್ಕಾರಕ್ಕೆ ವಂಚಿಸಲಾಗುತ್ತಿದೆ” ಎಂದು ರೈತರು ಸಚಿವರ ಗಮನಕ್ಕೆ ತಂದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಯಂ ಹಾಗೂ ಹೊರಗುತ್ತಿಗೆ ಸಿಬ್ಬಂದಿಗಳ ವಿರುದ್ಧ ತಕ್ಷಣ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.

ದೂರು ಸ್ವೀಕರಿಸಿದ ಸಚಿವರು, ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ರೈತ ಸಂಘದ ಪ್ರಮುಖರಾದ ಮಾಡ್ರಹಳ್ಳಿ ಪಾಪಣ್ಣ, ಷಣ್ಮುಗ ಸ್ವಾಮಿ, ಕೆ.ಕೆ. ಹುಂಡಿ ಮಹಾದೇವ್, ಮಹದೇವ ಪ್ರಭು ಸೇರಿದಂತೆ ಹಲವು ರೈತ ಮುಖಂಡರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

– ವರದಿ: ಸದಾನಂದ ಕಣ್ಣೆಗಾಲ, ಗುಂಡ್ಲುಪೇಟೆ

About The Author

error: Content is protected !!