November 22, 2026

ಗುಂಡ್ಲುಪೇಟೆಯಲ್ಲಿ ರಾಜೇಂದ್ರ ಶ್ರೀಗಳ ೧೧೧ನೇ ಜಯಂತಿ: ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಆಧ್ಯಾತ್ಮದ ಚಿಲುಮೆ

ಶ್ರೀಗಳ ಆದರ್ಶ ಮತ್ತು ತ್ಯಾಗದ ಜೀವನವನ್ನು ಯುವ ಪೀಳಿಗೆ ಮೈಗೂಡಿಸಿಕೊಳ್ಳಲಿ: ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಕರೆ

ಗುಂಡ್ಲುಪೇಟೆ: “ಸಮಾಜದಲ್ಲಿ ಸೌಹಾರ್ದ ಹಾಗೂ ಸದ್ಭಾವನೆಯ ಜೀವನ ನಡೆಸಲು ಪ್ರೇರಣೆ ನೀಡಿದ ಜಗದ್ಗುರು ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮೀಜಿ ಅವರ ಜೀವನ ಮತ್ತು ಆದರ್ಶಗಳನ್ನು ಇಂದಿನ ಯುವ ಪೀಳಿಗೆ ತಿಳಿದುಕೊಳ್ಳಬೇಕು” ಎಂದು ಸುತ್ತೂರು ಮಠದ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಸಲಹೆ ನೀಡಿದರು.

ಪಟ್ಟಣದ ಜೆಎಸ್ಎಸ್ ಅನುಭವ ಮಂಟಪದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ಯುವ ಘಟಕ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ತಾಲೂಕು ಘಟಕ, ವೀರಶೈವ ಲಿಂಗಾಯತ ಸಂಘ-ಸಂಸ್ಥೆಗಳು ಹಾಗೂ ಜೆಎಸ್ಎಸ್ ಶಿಕ್ಷಣ ಸಂಸ್ಥೆಗಳ ವತಿಯಿಂದ ಹಮ್ಮಿಕೊಂಡಿದ್ದ ಜಗದ್ಗುರು ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮೀಜಿ ಅವರ ೧೧೧ನೇ ಜಯಂತಿ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

“ತಾನು ಗಳಿಸಿದ ಎಲ್ಲವೂ ಸಮಾಜಕ್ಕೆ ಸಿಗಬೇಕೆಂಬ ಉದಾರ ಮನಸ್ಸಿನಿಂದ ಶಿಕ್ಷಣ, ಆರೋಗ್ಯ ಸಂಸ್ಥೆ ಹಾಗೂ ಉಚಿತ ವಿದ್ಯಾರ್ಥಿ ನಿಲಯಗಳನ್ನು ಸಂಕಷ್ಟಗಳ ನಡುವೆ ಕಟ್ಟಿ ಬೆಳೆಸಿದ ಶ್ರೀಗಳು ಸಮಾಜಕ್ಕಾಗಿ ತ್ಯಾಗದ ಜೀವನ ನಡೆಸಿದರು. ಲೌಕಿಕವಾಗಿ ಸಂಸ್ಥೆ ಬೆಳೆಸಿದಂತೆಯೇ ಆಧ್ಯಾತ್ಮಿಕವಾಗಿಯೂ ಶಿಸ್ತಿನ ಪೂಜಾನುಷ್ಠಾನಗಳ ಮೂಲಕ ಸಮಾಜಕ್ಕೆ ಪ್ರೇರಣೆಯಾದರು. ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರಂತೆ, ಅಮೆರಿಕದ ಸಂತ ಸ್ವಾಮಿ ರಾಮ ಅವರು ಕೂಡ ರಾಜೇಂದ್ರ ಶ್ರೀಗಳ ವ್ಯಕ್ತಿತ್ವದಿಂದ ಪ್ರಭಾವಿತರಾಗಿದ್ದರು” ಎಂದು ಶ್ರೀಗಳು ಸ್ಮರಿಸಿದರು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಜೆಎಸ್ಎಸ್ ಹೆಗ್ಗುರುತು: ಸಮಾರಂಭದಲ್ಲಿ ಶಾಸಕ ಎಚ್.ಎಂ. ಗಣೇಶ್‌ಪ್ರಸಾದ್ ಮಾತನಾಡಿ, “ಸಮಾಜಕ್ಕೆ ವೈದ್ಯರು, ವಕೀಲರು, ಇಂಜಿನಿಯರ್‌ಗಳು ಸೇರಿದಂತೆ ಉನ್ನತ ಹುದ್ದೆಯಲ್ಲಿರುವ ಸಾವಿರಾರು ಸಾಧಕರನ್ನು ಜೆಎಸ್ಎಸ್ ಸಂಸ್ಥೆ ಕೊಡುಗೆಯಾಗಿ ನೀಡಿದೆ. ಸಂಸ್ಥೆಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ರಾಜೇಂದ್ರ ಶ್ರೀಗಳ ದೂರದೃಷ್ಟಿಯೇ ಕಾರಣ” ಎಂದರು. ಮಾಜಿ ಶಾಸಕ ಸಿ.ಎಸ್. ನಿರಂಜನ್‌ಕುಮಾರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು.

ಆಧ್ಯಾತ್ಮದ ರಾಯಭಾರಿಗಳು: ವಿಶೇಷ ಉಪನ್ಯಾಸ ನೀಡಿದ ಅಂಕಣಕಾರ ಪೃಥ್ವಿರಾಜ್ ಹಾಲಹಳ್ಳಿ, “ಭಾರತದ ಸತ್ವವೇ ಆಧ್ಯಾತ್ಮ. ಈ ಆಧ್ಯಾತ್ಮದ ಹೊಲವನ್ನು ಉಳುಮೆ ಮಾಡಿದವರಲ್ಲಿ ರಾಜೇಂದ್ರ ಶ್ರೀಗಳು ಮುಖ್ಯರು. ಬಡ ಮಕ್ಕಳ ಕಣ್ಣೀರನ್ನು ಒರೆಸಲು ಸ್ವತಃ ಭಿಕ್ಷಾಟನೆ ಮಾಡಿ ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸುವ ಮೂಲಕ ತ್ರಿವಿಧ ದಾಸೋಹದ ಪರಿಕಲ್ಪನೆ ನೀಡಿದ ಅವರು ನಿಜಕ್ಕೂ ಆಧ್ಯಾತ್ಮದ ರಾಯಭಾರಿಗಳು” ಎಂದು ನುಡಿನಮನ ಸಲ್ಲಿಸಿದರು.

ದತ್ತಿ ಪುರಸ್ಕಾರ ಹಾಗೂ ಮೆರವಣಿಗೆ: ಇದೇ ಸಂದರ್ಭದಲ್ಲಿ ದತ್ತಿ ಪುರಸ್ಕಾರ ಹಾಗೂ ಕ್ರೀಡಾ ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಯಿತು. ಸಭಾ ಕಾರ್ಯಕ್ರಮಕ್ಕೂ ಮುನ್ನ ರಾಜೇಂದ್ರ ಶ್ರೀಗಳ ಪುತ್ಥಳಿಯನ್ನು ಅಲಂಕೃತ ವಾಹನದಲ್ಲಿರಿಸಿ, ಮಂಗಳವಾದ್ಯ, ವೀರಗಾಸೆ, ಬ್ಯಾಂಡ್ ಹಾಗೂ ಕಲಾತಂಡಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶೋಭಾಯಾತ್ರೆ ನಡೆಸಲಾಯಿತು.

ಸಮಾರಂಭದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಘಟಕದ ಅಧ್ಯಕ್ಷ ಕೊಡಸೋಗೆ ಶಿವಪ್ರಸಾದ್, ಜಿಲ್ಲಾ ಹಾಗೂ ತಾಲೂಕು ಘಟಕಗಳ ಪದಾಧಿಕಾರಿಗಳು, ಶರಣ ಸಾಹಿತ್ಯ ಪರಿಷತ್ ಪದಾಧಿಕಾರಿಗಳು, ಜೆಎಸ್ಎಸ್ ಸಂಸ್ಥೆಯ ಬೋಧಕ-ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

“ಇಂದು ಜೆಎಸ್ಎಸ್ ಸಂಸ್ಥೆಯಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಪ್ರಪಂಚದಾದ್ಯಂತ ವಿಸ್ತರಿಸಿದ್ದಾರೆ. ಅವರೆಲ್ಲರ ಸಾಫಲ್ಯದ ಮೂಲಕವೇ ರಾಜೇಂದ್ರ ಶ್ರೀಗಳು ಇಂದು ನಮ್ಮ ನಡುವೆ ಜೀವಂತವಾಗಿದ್ದಾರೆ.” — ಪೃಥ್ವಿರಾಜ್ ಹಾಲಹಳ್ಳಿ, ಅಂಕಣಕಾರರು.

About The Author

error: Content is protected !!