November 23, 2026

ಡೊಳ್ಳಿನ ಗಾಯನ ಕಲಾವಿದ ಕರಿಯಪ್ಪ ಕೆಲೂರಗೆ ‘ಇಂಟರ್‌ನ್ಯಾಷನಲ್ ನೋಬೆಲ್ಲರ್ ಅವಾರ್ಡ್’ ಪ್ರದಾನ

ಗೋವಾದಲ್ಲಿ ಅದ್ಧೂರಿ ಸಾಂಸ್ಕೃತಿಕ ಸಮಾರಂಭ; ವಿಜಯಪುರ ಜಿಲ್ಲೆಯ ಯುವ ಕಲಾವಿದನ ಸಾಧನೆಗೆ ಪ್ರಶಂಸೆ

ವಿಜಯಪುರ/ದೇವರ ಹಿಪ್ಪರಗಿ: ನಾಡಿನ ಜಾನಪದ ಕಲೆ ಹಾಗೂ ಡೊಳ್ಳಿನ ಗಾಯನ ಪರಂಪರೆಯನ್ನು ನಿರಂತರವಾಗಿ ಬೆಳೆಸಿಕೊಂಡು ಬರುತ್ತಿರುವ ವಿಜಯಪುರ ಜಿಲ್ಲೆಯ ಬೇವಿನಾಳ ಗ್ರಾಮದ ಯುವ ಕಲಾವಿದ ಕರಿಯಪ್ಪ ಕೆಲೂರ ಅವರಿಗೆ ಗೋವಾದಲ್ಲಿ ಇತ್ತೀಚೆಗೆ ಜರುಗಿದ ಬೃಹತ್ ಸಾಂಸ್ಕೃತಿಕ ಸಮಾರಂಭದಲ್ಲಿ ‘ಇಂಟರ್‌ನ್ಯಾಷನಲ್ ನೋಬೆಲ್ಲರ್ ಅವಾರ್ಡ್’ ಪ್ರದಾನ ಮಾಡಿ ಗೌರವಿಸಲಾಯಿತು.

ಮುದ್ದೇಬಿಹಾಳ ತಾಲೂಕಿನ ದೇವೂರ ಗ್ರಾಮದ ಶ್ರೀ ಬೀರಲಿಂಗೇಶ್ವರ ಡೊಳ್ಳಿನ ಗಾಯನ ಸಂಘ, ಟಕ್ಕಳಕಿಯ ಶ್ರೀ ಮಹಾಲಿಂಗೇಶ್ವರ ಕಲಾ ಸಂಘ ಹಾಗೂ ಮಹಾರಾಷ್ಟ್ರದ ಚಿಂಚೋಳಿಯ ಶ್ರೀ ಮಾಲಿಂಗೇಶ್ವರ ಕಲಾ ಸಂಘದ ಮೇಳಗಳಲ್ಲಿ ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ಡೊಳ್ಳಿನ ಗಾಯನ ಸೇವೆಯಲ್ಲಿ ತೊಡಗಿಸಿಕೊಂಡಿರುವ ಕರಿಯಪ್ಪ ಕೆಲೂರ ಅವರ ಕಲಾ ಸೇವೆಯನ್ನು ಗುರುತಿಸಿ ಈ ಗೌರವ ನೀಡಲಾಗಿದೆ.

ತಮ್ಮ ಈ ಸಾಧನೆಗೆ ಪಡಗಾನೂರಿನ ಶ್ರೀ ಗುರುನಾಥ್ ಮಾಸ್ತರ್ ಮರುಡಿ ಹಾಗೂ ಮನಗೂಳಿಯ ಪರಸು ಮಾಸ್ತರ್ ಯರನಾಳ ಅವರ ಮಾರ್ಗದರ್ಶನ ಹಾಗೂ ಪ್ರೋತ್ಸಾಹವೇ ಮುಖ್ಯ ಕಾರಣ ಎಂದು ಕಲಾವಿದ ಕರಿಯಪ್ಪ ಕೃತಜ್ಞತೆ ಸಲ್ಲಿಸಿದ್ದಾರೆ.

ವಿಜೃಂಭಣೆಯ ಸಾಂಸ್ಕೃತಿಕ ಕಾರ್ಯಕ್ರಮ: ಜಿ.ಎಸ್. ಹೈಟೆಕ್ ಸೊಲ್ಯೂಷನ್ಸ್, ಕಾವ್ಯಶ್ರೀ ಚಾರಿಟಬಲ್ ಟ್ರಸ್ಟ್, ಸಿರಿಗನ್ನಡ ಸೇವಾ ಟ್ರಸ್ಟ್, ಅಲೈಯನ್ಸ್ ಇಂಟರ್ ನ್ಯಾಷನಲ್ ಕ್ಲಬ್ ಹಾಗೂ ನಟಿ ಡಾ. ಭಾರತಿ ಬಿಜಾಪುರ ಅವರ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಿತು.

‘ಸಂಪದ ಸಾಲು’ ಪತ್ರಿಕೆ ಸಂಪಾದಕ ವೆಂಕಟೇಶ ಸಂಪ, ಚಲನಚಿತ್ರ ನಟ ಶಿವಕುಮಾರಾರಾಧ್ಯ, ವಕೀಲ ಮಲ್ಲಿಕಾರ್ಜುನ ಬೃಂಗಿಮಠ, ಡಾ. ಜಿ. ಶಿವಣ್ಣ, ಹುಬ್ಬಳ್ಳಿಯ ಡಾ. ಶಾಂತಣ್ಣ ವೈ. ಕಡಿವಾಳ, ಸನಾತನ ಧರ್ಮ ಜಾಗರಣ ಮಂಚ್ ಮುಖ್ಯಸ್ಥ ಡಾ. ಆರ್. ಎಸ್. ರಾಜು, ಕೆಎಸ್‌ಆರ್‌ಟಿಸಿಯ ಆನಂದ್ ಸಿ. ತಿರುಮಲ, ಗೋವಾ ಕಸಾಪ ಗೌರವ ಕಾರ್ಯದರ್ಶಿ ನಾಗರಾಜ ಗೊಂಡಕರ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ‘ಜ್ಯೂನಿಯರ್ ರಘು ದೀಕ್ಷಿತ್’ ಎಂದೇ ಪ್ರಸಿದ್ಧರಾದ ರಾಕೇಶ್ ದಿಲ್ ಸೇ ಹಾಗೂ ದೀಪ್ತಿ ರಾಕೇಶ್ ಅವರಿಂದ ಸಂಗೀತ ರಸಸಂಜೆ ಜರುಗಿತು.

ಕಲಾವಿದ ಕರಿಯಪ್ಪ ಕೆಲೂರ ಅವರ ಈ ಅಂತರರಾಷ್ಟ್ರೀಯ ಮಟ್ಟದ ಸಾಧನೆಗೆ ಬೇವಿನಾಳ ಗ್ರಾಮದ ಹಿರಿಯರಾದ ಹನುಮಗೌಡ ಬಸನಗೌಡ ಗೌಡರ, ಬಸವರಾಜ್ ಕೆಲೂರ, ಭಾರತೀಯ ಸೇನೆಯ ಯೋಧ ಪಕೀರಪ್ಪ ಕೆಲೂರ ಹಾಗೂ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.

About The Author

error: Content is protected !!