
ಬೆಂಗಳೂರಿನ ಬಟ್ಟೆ ಅಂಗಡಿ ನೌಕರ ಪೊಲೀಸರ ಬಲೆಗೆ
ಭಟ್ಕಳ: ತಾಲೂಕಿನ ವೆಂಕಟಾಪುರದ ಜಾಗಟೇಬೈಲ್ ಮೈದಾನದ ಸಮೀಪ ಅಕ್ರಮವಾಗಿ ಗಾಂಜಾ ಸಂಗ್ರಹಿಸಿಟ್ಟುಕೊಂಡು ಮಾರಾಟ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯನ್ನು ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ ₹೪೫,೦೦೦ ಅಂದಾಜು ಮೌಲ್ಯದ ೨೩೩ ಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.

ಭಟ್ಕಳದ ಮೊಹಿದ್ದೀನ್ ಸ್ಟ್ರೀಟ್ ನಿವಾಸಿ ಮೊಹಮ್ಮದ್ ಪುರ್ಕಾನ್ (೩೩) ಬಂಧಿತ ಆರೋಪಿ. ಈತ ಪ್ರಸ್ತುತ ಬೆಂಗಳೂರಿನ ಕೃಷ್ಣರಾಜಪುರಂ ವ್ಯಾಪ್ತಿಯ ಸೀಗೆಹಳ್ಳಿಯಲ್ಲಿ ವಾಸವಾಗಿದ್ದು, ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

ಪೊಲೀಸ್ ಕಾರ್ಯಾಚರಣೆ: ವೆಂಕಟಾಪುರದ ಮೈದಾನದ ಬಳಿ ಯಾವುದೇ ಪರವಾನಗಿ ಇಲ್ಲದೆ ನಿಷೇಧಿತ ಮಾದಕ ವಸ್ತುವಾದ ಗಾಂಜಾವನ್ನು ಕೈಚೀಲದಲ್ಲಿ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಆಧರಿಸಿ, ಗ್ರಾಮೀಣ ಠಾಣೆಯ ಪಿಎಸ್ಐ ಭರಮಪ್ಪ ಬೆಳಗಲಿ ನೇತೃತ್ವದ ತಂಡ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದೆ.
ಘಟನೆಗೆ ಸಂಬಂಧಿಸಿದಂತೆ ಎನ್ಡಿಪಿಎಸ್ (NDPS) ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಪಿಎಸ್ಐ ಮಲ್ಲಿಕಾರ್ಜುನ ಕೋರಾಣೆ ತನಿಖೆ ಕೈಗೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಅಂಬರೀಷ್ ಕುಂಬಾರಿ, ಕಿರಣ ತಿಳಗಂಜಿ, ನಾಗರಾಜ ಹೋತ್ನಳ್ಳಿ, ಕಪಿಲ್ ತಳಕೇರಿ ಪಾಲ್ಗೊಂಡಿದ್ದರು.

More Stories
ವಲಯ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ವಿದ್ಯಾಭಾರತಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳ ಮಿಂಚು
ಜಾಲಿಯಲ್ಲಿ ಬೆಳಕೆ ವಲಯ ಮಟ್ಟದ ಪ್ರತಿಭಾ ಕಾರಂಜಿ ಸಂಭ್ರಮ
ನ್ಯಾಯಾಲಯದ ವಾರಂಟ್ ಜಾರಿಗೊಳಿಸಲು ತೆರಳಿದ್ದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಆರೋಪಿ ಪರಾರಿ!