November 23, 2026

ಹಿರಿಯ ಪತ್ರಕರ್ತ ಜಿ.ಯು. ಭಟ್ಟರಿಗೆ ‘ರಾಜ್ಯೋತ್ಸವ ಪ್ರಶಸ್ತಿ’ ಗೌರವ

ಮಾಧ್ಯಮ, ಸಾಹಿತ್ಯ ಹಾಗೂ ರಂಗಭೂಮಿ ಕ್ಷೇತ್ರದ ಬಹುಮುಖ ಸಾಧಕನಿಗೆ ಒಲಿದ ಸರ್ಕಾರದ ಅತ್ಯುನ್ನತ ಪುರಸ್ಕಾರ

ಭಟ್ಕಳ: ಪತ್ರಿಕೋದ್ಯಮ, ಸಾಹಿತ್ಯ, ರಂಗಭೂಮಿ ಹಾಗೂ ಸಮಾಜ ಸೇವೆಯಲ್ಲಿ ಐದು ದಶಕಗಳಿಗೂ ಹೆಚ್ಚು ಕಾಲ ನಿರಂತರ ಸೇವೆ ಸಲ್ಲಿಸಿರುವ ಉತ್ತರ ಕನ್ನಡ ಜಿಲ್ಲೆಯ ಹಿರಿಯ ಪತ್ರಕರ್ತ ಗಜಾನನ ಉಮಾಮಹೇಶ್ವರ ಭಟ್ (ಜಿ.ಯು. ಭಟ್) ಅವರಿಗೆ ಕರ್ನಾಟಕ ಸರ್ಕಾರದ ಪ್ರತಿಷ್ಠಿತ ೨೦೨೬ನೇ ಸಾಲಿನ ‘ರಾಜ್ಯೋತ್ಸವ ಪ್ರಶಸ್ತಿ’ ಲಭಿಸಿದೆ.

‘ಉದಯವಾಣಿ’ ದಿನಪತ್ರಿಕೆಯ ಹಿರಿಯ ವರದಿಗಾರರಾಗಿ ದೀರ್ಘಕಾಲ(೫೦ಕ್ಕೂ ಹೆಚ್ಚು ವರ್ಷಗಳ)ಸೇವೆ ಸಲ್ಲಿಸಿರುವ ಜಿ.ಯು. ಭಟ್ ಅವರು, ‘ಸಂಯುಕ್ತ ಕರ್ನಾಟಕ’, ‘ಗ್ರಾಮವಿಕಾಸ’ ಮುಂತಾದ ಪತ್ರಿಕೆಗಳಲ್ಲಿಯೂ ತಮ್ಮ ಛಾಪ ಮೂಡಿಸಿದ್ದಾರೆ. ಇದರೊಂದಿಗೆ ‘ಸಮನ್ವಯ’ ಪತ್ರಿಕೆಯ ಗೌರವ ಸಲಹೆಗಾರರಾಗಿ ಹಾಗೂ ‘ಶಿರಸಿ ಸಮಾಚಾರ’ ಪತ್ರಿಕೆಯ ಅಂಕಣಕಾರರಾಗಿ ಕಾರ್ಯನಿರ್ವಹಿಸಿರುವ ಇವರು, ಉತ್ತರ ಕನ್ನಡ ಜಿಲ್ಲೆಯ ಅಭಿವೃದ್ಧಿ ಹಾಗೂ ಗ್ರಾಮೀಣ ಸಮಸ್ಯೆಗಳ ಕುರಿತು ನೂರಾರು ಸಂಶೋಧನಾತ್ಮಕ ಲೇಖನಗಳನ್ನು ಬರೆದಿದ್ದಾರೆ.

ಕಲಾ ಹಾಗೂ ಸಾಂಸ್ಕೃತಿಕ ಕ್ಷೇತ್ರದ ಕೊಡುಗೆ:
ಕೇವಲ ಪತ್ರಿಕೋದ್ಯಮಕ್ಕೆ ಸೀಮಿತವಾಗದೆ ಸಾಹಿತ್ಯ, ಮುದ್ರಣ, ರಂಗಭೂಮಿ ಹಾಗೂ ಸಿನಿಮಾರಂಗದಲ್ಲೂ ಸಕ್ರಿಯರಾಗಿದ್ದ ಜಿ.ಯು. ಭಟ್ ಅವರು ಹಲವಾರು ನಾಟಕಗಳನ್ನು ನಿರ್ದೇಶಿಸಿ, ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ‘ಕಾಶಿನಾಥರವರ ಅನುಭವ, ವಿಶಾಲ ರಾಜ್ ರವರ ದಂಡಿ, ಅಂಬರೀಶ್ ನಟನೆಯ ಗಿರಿಬಾಲೆ’ ಸೇರಿದಂತೆ ಹಲವು ಚಲನಚಿತ್ರಗಳಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ.

ಪಡೆದ ಪ್ರಮುಖ ಗೌರವಗಳು:
ಇವರ ಸುದೀರ್ಘ ಕಲಾ ಹಾಗೂ ಮಾಧ್ಯಮ ಸೇವೆಯನ್ನು ಗುರುತಿಸಿ ಈಗಾಗಲೇ ರಾಜ್ಯ ನಾಟಕ ಅಕಾಡೆಮಿ ಪ್ರಶಸ್ತಿ, ರಾಜ್ಯ ಪತ್ರಿಕಾ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಕಾರ್ಯಾನಿರತ ಪತ್ರಕರ್ತರ ಸಂಘದ ‘ಶಾಂಮರಾವ್ ದತ್ತುಪ್ರಶಸ್ತಿ’, ‘ಕಾಯ್ಕಿಣಿ ದತ್ತಿ ಪ್ರಶಸ್ತಿ’ ಹಾಗೂ ‘ಡಾ. ಟಿ.ಎಂ.ಎ. ಪೈ ಆರೋಗ್ಯ ಸೇವಾ ಪ್ರಶಸ್ತಿ’ ಸೇರಿದಂತೆ ಹಲವಾರು ಪುರಸ್ಕಾರಗಳು ಲಭಿಸಿವೆ.

ಜಿ.ಯು. ಭಟ್ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆಯೇ ಜಿಲ್ಲೆಯ ಜನಪ್ರತಿನಿಧಿಗಳು, ಪತ್ರಕರ್ತರ ಸಂಘಟನೆಗಳು, ಸಾಹಿತಿಗಳು ಹಾಗೂ ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿ ಶುಭಾಶಯ ಕೋರಿದ್ದಾರೆ.

About The Author

error: Content is protected !!