ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರ ಸ್ಥಳ ಪರಿಶೀಲನೆ: ವೇಗ ನಿಯಂತ್ರಕ, ಸೂಚನಾ ಫಲಕ ಭರವಸೆ
ಭಟ್ಕಳ: ತಾಲೂಕಿನ ಗುಳ್ಳಿಕ್ರಾಸ್ನಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪೂರ್ಣಗೊಂಡ ಬಳಿಕವೂ ಅಪಘಾತಗಳ ಸರಣಿ ಭೀತಿ ದೂರವಾಗಿಲ್ಲ. ಕಳೆದ ಶನಿವಾರ ರಾತ್ರಿ ಲಾರಿ ಡಿಕ್ಕಿಯಿಂದ ಸ್ಕೂಟರ್ ಸವಾರ ಮೃತಪಟ್ಟ ಘಟನೆ ಸ್ಥಳೀಯರಲ್ಲಿ ತೀವ್ರ ಆತಂಕ ಮೂಡಿಸಿದ್ದು, ಹೆದ್ದಾರಿಯಲ್ಲಿ ತಕ್ಷಣವೇ ಅಗತ್ಯ ಸುರಕ್ಷತಾ ವ್ಯವಸ್ಥೆ ಕಲ್ಪಿಸುವಂತೆ ಸಾರ್ವಜನಿಕರು ಪಟ್ಟು ಹಿಡಿದಿದ್ದಾರೆ. ಸಾರ್ವಜನಿಕರ ಒತ್ತಾಯಕ್ಕೆ ಸ್ಪಂದಿಸಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಶಿವಕುಮಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.


ಗುಳ್ಳಿಕ್ರಾಸ್ನಲ್ಲಿ ನವೀಕರಣಗೊಂಡ ರಾಷ್ಟ್ರೀಯ ಹೆದ್ದಾರಿಯು ಸಂಪರ್ಕ ರಸ್ತೆಗಳಿಗಿಂತ ತೀವ್ರ ಎತ್ತರದಲ್ಲಿರುವುದು ವಾಹನ ಸವಾರರಿಗೆ ಕಂಟಕವಾಗಿ ಪರಿಣಮಿಸಿದೆ. ಒಳರಸ್ತೆಗಳಿಂದ ಹೆದ್ದಾರಿಗೆ ಪ್ರವೇಶಿಸುವಾಗ ವೇಗವಾಗಿ ಬರುವ ವಾಹನಗಳು ಸರಿಯಾಗಿ ಗೋಚರಿಸದೆ ಅಪಾಯ ಸೃಷ್ಟಿಯಾಗುತ್ತಿದೆ. ಜೊತೆಗೆ ಅಗತ್ಯ ಎಚ್ಚರಿಕೆ ಸೂಚನಾ ಫಲಕಗಳು ಹಾಗೂ ಬೀದಿ ದೀಪಗಳಿಲ್ಲದಿರುವುದು ಅಪಘಾತಗಳಿಗೆ ಮುಖ್ಯ ಕಾರಣವಾಗಿದೆ ಎಂದು ಸ್ಥಳೀಯರು ಅಧಿಕಾರಿಗಳ ಗಮನಕ್ಕೆ ತಂದರು.

ಅಂಡರ್ಪಾಸ್ ನಿರ್ಮಾಣಕ್ಕೆ ಆಗ್ರಹ: ಗುಳ್ಳಿಕ್ರಾಸ್ನಿಂದ ಒಂದು ರಸ್ತೆ ರೈಲ್ವೆ ನಿಲ್ದಾಣಕ್ಕೂ, ಮತ್ತೊಂದು ರಸ್ತೆ ಹಳೆ ಬಸ್ ನಿಲ್ದಾಣಕ್ಕೂ ಸಂಪರ್ಕ ಕಲ್ಪಿಸುತ್ತದೆ. ಈ ಮಾರ್ಗದಲ್ಲಿ ಪಶು ಆಸ್ಪತ್ರೆ, ಗಿರಿಜನ ಸಹಕಾರಿ ಸಂಘ, ಅಂಗನವಾಡಿ, ಮಸೀದಿ, ಮದರಸಾ, ಸ್ಮಶಾನ ಹಾಗೂ ಶ್ರೀ ಗೋಪಾಲಕೃಷ್ಣ ದೇವಸ್ಥಾನಗಳಿದ್ದು, ಸಾವಿರಾರು ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಪ್ರತಿನಿತ್ಯ ಜೀವದ ಹಂಗು ತೊರೆದು ಹೆದ್ದಾರಿ ದಾಟುತ್ತಿದ್ದಾರೆ. ಆದ್ದರಿಂದ ಪಾದಚಾರಿಗಳ ಹಾಗೂ ವಾಹನಗಳ ಸುರಕ್ಷಿತ ಸಂಚಾರಕ್ಕಾಗಿ ಗುಳ್ಳಿಕ್ರಾಸ್ನಲ್ಲಿ ಅಂಡರ್ಪಾಸ್ ನಿರ್ಮಿಸಬೇಕೆಂದು ಪ್ರಮುಖರು ಒಕ್ಕೊರಲಿನಿಂದ ಆಗ್ರಹಿಸಿದರು.
ಎನ್ಎಚ್ಎಐಗೆ ವರದಿ ಸಲ್ಲಿಕೆ – ಯೋಜನಾ ನಿರ್ದೇಶಕರ ಭರವಸೆ: ಸಾರ್ವಜನಿಕರ ಅಹವಾಲು ಆಲಿಸಿದ ಯೋಜನಾ ನಿರ್ದೇಶಕ ಶಿವಕುಮಾರ, ಅಪಘಾತ ನಿಯಂತ್ರಣಕ್ಕೆ ಎರಡೂ ಬದಿಗಳಲ್ಲಿ ತಕ್ಷಣ ವೇಗ ನಿಯಂತ್ರಕ (Speed Breakers) ಹಾಗೂ ಸೂಚನಾ ಫಲಕಗಳನ್ನು ಅಳವಡಿಸಲಾಗುವುದು ಎಂದರು. ಅಲ್ಲದೆ, ಅಂಡರ್ಪಾಸ್ ನಿರ್ಮಾಣದ ಅಗತ್ಯತೆಯ ಕುರಿತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ (NHAI) ಸಮಗ್ರ ವರದಿ ಸಲ್ಲಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಭಟ್ಕಳ ಮುಸ್ಲಿಂ ಜಮಾಅತ್ ಇಸ್ಲಾಹ್ ವ ತಂಝೀಮ್ ಅಧ್ಯಕ್ಷ ಇನಾಯಿತುಲ್ಲಾ ಶಾಬಂದ್ರಿ, ಪ್ರಮುಖರಾದ ಸತೀಶಕುಮಾರ, ಅಝೀಜುರ್ ರೆಹಮಾನ್, ಸಲೀಮ್ ಗುಳ್ಳಿ, ಡಿವೈಎಸ್ಪಿ ಗಿರೀಶ್, ಸಿಪಿಐ ದಿವಾಕರ ಹಾಗೂ ಪಿಎಸ್ಐ ನವೀನ್ ಉಪಸ್ಥಿತರಿದ್ದರು.

More Stories
ವಲಯ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ವಿದ್ಯಾಭಾರತಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳ ಮಿಂಚು
ಜಾಲಿಯಲ್ಲಿ ಬೆಳಕೆ ವಲಯ ಮಟ್ಟದ ಪ್ರತಿಭಾ ಕಾರಂಜಿ ಸಂಭ್ರಮ
ನ್ಯಾಯಾಲಯದ ವಾರಂಟ್ ಜಾರಿಗೊಳಿಸಲು ತೆರಳಿದ್ದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಆರೋಪಿ ಪರಾರಿ!