November 23, 2026

ಗ್ರಾಮ ಪಂಚಾಯತ್ ನೌಕರರ ಪರಿಷ್ಕೃತ ವೇತನಕ್ಕೆ ಕತ್ತರಿ; ಸಂಘದಿಂದ ತೀವ್ರ ಆಕ್ರೋಶ

ಅಕ್ಟೋಬರ್‌ನಿಂದ ಹಳೆ ವೇತನ ಪಾವತಿ ನಿರ್ಧಾರ ಕೈಬಿಡಲು ಆಗ್ರಹಿಸಿ ತಾಪಂ ಇಒ ಸುನಿಲ್ ಬಿ. ಅವರಿಗೆ ಮನವಿ ಸಲ್ಲಿಕೆ

ಭಟ್ಕಳ: ಗ್ರಾಮ ಪಂಚಾಯತ್‌ಗಳಲ್ಲಿ ನಿರಂತರವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಸರ್ಕಾರ ಪರಿಷ್ಕರಿಸಿ ಜಾರಿಗೊಳಿಸಿದ್ದ ಕನಿಷ್ಠ ವೇತನ ಹಾಗೂ ತುಟ್ಟಿಭತ್ಯೆಯನ್ನು ಕಡಿತಗೊಳಿಸಿ, ಅಕ್ಟೋಬರ್ ತಿಂಗಳಿನಿಂದ ಮತ್ತೆ ಹಳೆಯ ವೇತನ ಪಾವತಿಸಲು ಮುಂದಾಗಿರುವ ಕ್ರಮಕ್ಕೆ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಶ್ರೇಯೋಭಿವೃದ್ಧಿ ಸಂಘ (ರಿ.) ಭಟ್ಕಳ ತಾಲೂಕು ಘಟಕ ತೀವ್ರ ವಿರೋಧ ವ್ಯಕ್ತಪಡಿಸಿದೆ.

ವೇತನ ಕಡಿತಗೊಳಿಸುವ ನಿರ್ಧಾರವನ್ನು ತಕ್ಷಣವೇ ಕೈಬಿಟ್ಟು, ಸರ್ಕಾರ ಪರಿಷ್ಕರಿಸಿದ ಕನಿಷ್ಠ ವೇತನವನ್ನೇ ಮುಂದುವರಿಸಬೇಕೆಂದು ಆಗ್ರಹಿಸಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ (ಇಒ) ಸುನಿಲ್ ಬಿ. ಅವರಿಗೆ ಸಂಘದ ಪದಾಧಿಕಾರಿಗಳು ಮನವಿ ಪತ್ರ ಸಲ್ಲಿಸಿದರು.

ಜೂನ್‌ನಿಂದ ಜಾರಿಯಾಗಿದ್ದ ಪರಿಷ್ಕೃತ ವೇತನ: ರಾಜ್ಯ ಸರ್ಕಾರದ ಆದೇಶದಂತೆ ಉತ್ತರ ಕನ್ನಡ ಜಿಲ್ಲೆಯ ಗ್ರಾಮ ಪಂಚಾಯತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕ್ಲರ್ಕ್, ಬಿಲ್ ಕಲೆಕ್ಟರ್, ಡಾಟಾ ಎಂಟ್ರಿ ಆಪರೇಟರ್, ಜವಾನ, ವಾಟರ್‌ಮನ್ ಹಾಗೂ ಸ್ವಚ್ಛತಾ ಸಿಬ್ಬಂದಿಗೆ ಜೂನ್ ೨೦೨೬ರಿಂದ ಪರಿಷ್ಕೃತ ಕನಿಷ್ಠ ವೇತನ ಮತ್ತು ತುಟ್ಟಿಭತ್ಯೆ ಪಾವತಿಸಲಾಗುತ್ತಿತ್ತು.

ಆದರೆ, ಪಂಚಾಯತ್ ರಾಜ್ ಆಯುಕ್ತಾಲಯದ ಆಗಸ್ಟ್ ೨೮ರ ಆದೇಶ ಹಾಗೂ ಸೆಪ್ಟೆಂಬರ್ ೧೮ರ ಘನ ನ್ಯಾಯಾಲಯದ ತಡೆಯಾಜ್ಞೆಯ ನೆಪವೊಡ್ಡಿ, ಯಾವುದೇ ಲಿಖಿತ ಆದೇಶವಿಲ್ಲದೆ ಕೇವಲ ಮೌಖಿಕ ಸೂಚನೆಯ ಆಧಾರದ ಮೇಲೆ ಅಕ್ಟೋಬರ್ ತಿಂಗಳಿನಿಂದ ಪರಿಷ್ಕೃತ ವೇತನ ತಡೆಹಿಡಿದು ಹಳೆಯ ವೇತನ ಪಾವತಿಸಲು ಪಿಡಿಒಗಳಿಗೆ ಸೂಚಿಸಿರುವುದು ಅತ್ಯಂತ ಖಂಡನೀಯ ಎಂದು ನೌಕರರು ಆಕ್ಷೇಪಿಸಿದರು.

ಬೆಲೆ ಏರಿಕೆಯ ನಡುವೆ ಕನಿಷ್ಠ ವೇತನ ಕಡಿತ ಅನ್ಯಾಯ: “ಗ್ರಾಮೀಣ ಭಾಗದ ಕಂದಾಯ ಸಂಗ್ರಹ, ಕುಡಿಯುವ ನೀರು ಪೂರೈಕೆ, ಸ್ವಚ್ಛತೆ, ಜನನ-ಮರಣ ನೋಂದಣಿ ಹಾಗೂ ಸರ್ಕಾರದ ಯೋಜನೆಗಳನ್ನು ಮನೆಬಾಗಿಲಿಗೆ ತಲುಪಿಸುವ ನೌಕರರು ಈಗಾಗಲೇ ತೀರಾ ಕಡಿಮೆ ವೇತನದಲ್ಲಿ ಜೀವನ ನಡೆಸುತ್ತಿದ್ದಾರೆ. ಬೆಲೆ ಏರಿಕೆಯ ಈ ಸಂದರ್ಭದಲ್ಲಿ ಪರಿಷ್ಕೃತ ವೇತನವನ್ನೂ ಕಡಿತಗೊಳಿಸಿದರೆ ನೌಕರರ ಕುಟುಂಬಗಳು ಬೀದಿಗೆ ಬೀಳಲಿವೆ” ಎಂದು ಸಂಘದ ಮುಖಂಡರು ಆತಂಕ ವ್ಯಕ್ತಪಡಿಸಿದರು.

ಲಿಖಿತ ಆದೇಶವಿಲ್ಲದೆ ಮೌಖಿಕವಾಗಿ ವೇತನ ಕಡಿತಗೊಳಿಸುವುದನ್ನು ತಕ್ಷಣ ಸ್ಥಗಿತಗೊಳಿಸಬೇಕು ಹಾಗೂ ಈಗಾಗಲೇ ಬಾಕಿ ಉಳಿದಿರುವ ಪರಿಷ್ಕೃತ ವೇತನವನ್ನು ತಕ್ಷಣ ಬಿಡುಗಡೆ ಮಾಡಬೇಕೆಂದು ಅಧಿಕಾರಿಗಳನ್ನು ಒತ್ತಾಯಿಸಲಾಯಿತು.

ಮನವಿ ಸಲ್ಲಿಕೆ ವೇಳೆ ಸಂಘದ ತಾಲೂಕು ಅಧ್ಯಕ್ಷ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯೋಗೇಶ ನಾಯ್ಕ, ಉಪಾಧ್ಯಕ್ಷ ವಿನಾಯಕ ಆಚಾರ್ಯ, ಕಾರ್ಯದರ್ಶಿ ದಾಮೋದರ ನಾಯ್ಕ, ಸದಸ್ಯರಾದ ಮಾರುತಿ ನಾಯ್ಕ, ಶ್ರೀನಿವಾಸ ನಾಯ್ಕ, ವಿನಾಯಕ ಹೆಬಳೆ, ಶ್ರೀಧರ ನಾಯ್ಕ, ಜ್ಯೋತಿ ನಾಯ್ಕ ಹಾಗೂ ದೇವಿ ದೇವಡಿಗ ಸೇರಿದಂತೆ ಹಲವು ನೌಕರರು ಉಪಸ್ಥಿತರಿದ್ದರು.

About The Author

error: Content is protected !!