ಬೆಳ್ಳೂರು ಗ್ರಾಮಕ್ಕೆ ಶಾಸಕ ಎ.ಎಸ್. ಪೊನ್ನಣ್ಣ ಭೇಟಿ: ಹುಲಿ ಸೆರೆಗೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ
ಪೊನ್ನಂಪೇಟೆ (ಕೊಡಗು): ಕೊಡಗು ಜಿಲ್ಲೆಯ ವಿವಿಧ ಭಾಗಗಳಲ್ಲಿ ನಿರಂತರವಾಗಿ ಹುಲಿ ದಾಳಿ ಮುಂದುವರಿದಿದ್ದು, ಕಳೆದ ಒಂದು ತಿಂಗಳ ಅವಧಿಯಲ್ಲಿ 50ಕ್ಕೂ ಹೆಚ್ಚು ಜಾನುವಾರುಗಳು ಹುಲಿಗೆ ಬಲಿಯಾಗಿವೆ. ಹುಲಿ ಹಾವಳಿ ನಿಯಂತ್ರಿಸುವಲ್ಲಿ ವಿಫಲವಾಗಿರುವ ಅರಣ್ಯ ಇಲಾಖೆಯ ವಿರುದ್ಧ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದಕ್ಷಿಣ ಕೊಡಗಿನ ಹುದಿಕೇರಿ ಸಮೀಪದ ಬೆಳ್ಳೂರು ಗ್ರಾಮವೊಂದರಲ್ಲೇ ಈವರೆಗೆ ಸುಮಾರು 54 ಹಸುಗಳು ಹುಲಿ ದಾಳಿಗೆ ಬಲಿಯಾಗಿವೆ. ಇತ್ತೀಚೆಗೆ ಬೆಳ್ಳೂರು ಗ್ರಾಮದ ಬಾಚಿರ ವಾಸು ದೇವಯ್ಯ ಎಂಬುವರಿಗೆ ಸೇರಿದ ಹಸುವನ್ನು ಹುಲಿ ಕೊಂದು ಹಾಕಿದೆ. ಇತ್ತ ಮಡಿಕೇರಿ ತಾಲೂಕಿನ ಮರಗೋಡು ಗ್ರಾಮದಲ್ಲಿ ಪರಿಚನ ಮನೋಜ್ ಅವರಿಗೆ ಸೇರಿದ ಕರುಗಳ ಮೇಲೆಯೂ ಹುಲಿ ದಾಳಿ ನಡೆದಿದ್ದು, ಗ್ರಾಮಸ್ಥರು ತೋಟದ ಕೆಲಸ ಹಾಗೂ ಜಾನುವಾರು ಮೇಯಿಸಲು ತೆರಳಲು ಭಯಪಡುವ ವಾತಾವರಣ ನಿರ್ಮಾಣವಾಗಿದೆ.

ಸಚಿವರ ಕಾರ್ಯಾಲಯದಿಂದ ಭರವಸೆ – ಶಾಸಕರ ಸ್ಥಳ ಭೇಟಿ: ಬೆಳ್ಳೂರು ಗ್ರಾಮಕ್ಕೆ ತಕ್ಷಣವೇ ಭೇಟಿ ನೀಡಿದ ವಿರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ, ಸಂತ್ರಸ್ತ ಹಸುಗಳ ಮಾಲೀಕರಿಗೆ ಹಾಗೂ ಗ್ರಾಮಸ್ಥರಿಗೆ ಧೈರ್ಯ ತುಂಬಿದರು.

ಬಳಿಕ ಅರಣ್ಯ ಇಲಾಖೆಯ ಉನ್ನತಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕರು, “ಕ್ಯಾಮೆರಾಗಳು ಹಾಗೂ ಸುಧಾರಿತ ತಂತ್ರಜ್ಞಾನ ಬಳಸಿ ತಕ್ಷಣ ಹುಲಿಯ ಚಲನವಲನ ಪತ್ತೆಹಚ್ಚಬೇಕು. ತಕ್ಷಣವೇ ಕೂಂಬಿಂಗ್ ಕಾರ್ಯಾಚರಣೆ ನಡೆಸಿ ಹುಲಿಯನ್ನು ಸೆರೆಹಿಡಿಯುವ ಮೂಲಕ ಗ್ರಾಮಸ್ಥರ ಜೀವ ಹಾಗೂ ಆಸ್ತಿಗೆ ರಕ್ಷಣೆ ನೀಡಬೇಕು” ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ತಿತೀರ ಧರ್ಮಜ ಉತ್ತಪ್ಪ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಿದೇರಿರ ನವೀನ್, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಕಾಳಮಾಡ ಪ್ರಶಾಂತ್, ಬಗರ್ ಹುಕುಂ ಸಮಿತಿ ಅಧ್ಯಕ್ಷ ಅಣ್ಣಳಮಾಡ ಲಾಲಾ ಅಪ್ಪಣ್ಣ, ಟಿ. ಶೆಟ್ಟಿಗೇರಿ ವಲಯ ಅಧ್ಯಕ್ಷ ತಿತೀರ ಪ್ರಭು ಸುಬ್ಬಯ್ಯ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಬಾಲಕೃಷ್ಣ, ಡಿಸಿಸಿ ಸದಸ್ಯ ಮುಕ್ಕಟಿರ ಸಂದೀಪ್, ಉದಯ, ಕುಂಡಚ್ಚಿರ ಮಂಜು ದೇವಯ್ಯ ಹಾಗೂ ಫರ್ದಿನ್ ಉಪಸ್ಥಿತರಿದ್ದರು.
– ವರದಿ: ಪ್ರಿತುನ್ ಪೂವಣ್ಣ, ಕೊಡಗು

More Stories
ಕರವೇ ತಾಲೂಕು ಘಟಕದ ಮಾಸಿಕ ಸಭೆ; ನೂತನ ಸದಸ್ಯರ ಸೇರ್ಪಡೆ
ಶಾಸಕ ಎ.ಎಸ್. ಪೊನ್ನಣ್ಣ ನೇತೃತ್ವದಲ್ಲಿ ಕಾಂಗ್ರೆಸ್ಗೆ ಪ್ರಮುಖರ ಸೇರ್ಪಡೆ
ಸೋಮವಾರಪೇಟೆಯಲ್ಲಿ ೭೧ನೇ ಕನ್ನಡ ರಾಜ್ಯೋತ್ಸವ: ಸಮಾಜ ಸೇವಕ ಪ್ರಾಸಿಸ್ ಡಿಸೋಜ ಸೇರಿ ಸಾಧಕರಿಗೆ ಭವ್ಯ ಸನ್ಮಾನ