November 23, 2026

ಭಟ್ಕಳ ರೈಲ್ವೇ ನಿಲ್ದಾಣದಲ್ಲಿ ನೂತನ ಎ.ಸಿ. ಲಾಂಜ್ ಉದ್ಘಾಟಿಸಿದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ

ಕೊಂಕಣ ರೈಲ್ವೇ ಅಭಿವೃದ್ಧಿಗೆ ₹7,000 ಕೋಟಿ ಅನುದಾನ: ಉತ್ತರ ಕನ್ನಡಕ್ಕೆ ₹300 ಕೋಟಿ ಸಿಗುವ ನಿರೀಕ್ಷೆ

ಭಟ್ಕಳ: ರೈಲು ಪ್ರಯಾಣಿಕರಿಗೆ ಮತ್ತಷ್ಟು ಸುಸಜ್ಜಿತ ಹಾಗೂ ಆರಾಮದಾಯಕ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಭಟ್ಕಳ ರೈಲ್ವೇ ನಿಲ್ದಾಣದಲ್ಲಿ ನೂತನವಾಗಿ ನಿರ್ಮಿಸಲಾದ ಹವಾನಿಯಂತ್ರಿತ (ಎ.ಸಿ.) ಲಾಂಜ್ ಲೋಕಾರ್ಪಣೆಗೊಂಡಿತು.

ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ನೂತನ ಎ.ಸಿ. ಲಾಂಜ್ ಉದ್ಘಾಟಿಸಿ ಮಾತನಾಡಿ, “ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಕೊಂಕಣ ರೈಲ್ವೇ ಅಭಿವೃದ್ಧಿಗಾಗಿ ₹7,000 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಈ ಮೊತ್ತದಲ್ಲಿ ಕನಿಷ್ಠ ₹300 ಕೋಟಿ ಉತ್ತರ ಕನ್ನಡ ಜಿಲ್ಲೆಗೆ ದೊರೆಯಲಿದ್ದು, ದ್ವಿಪಥ ರೈಲು ಮಾರ್ಗ ನಿರ್ಮಾಣ, ಹಳೆಯ ಸುರಂಗಗಳ ಬಲವರ್ಧನೆ ಹಾಗೂ ಲೂಪ್ ಮಾರ್ಗಗಳ ಅಭಿವೃದ್ಧಿ ಕಾಮಗಾರಿಗಳಿಗೆ ಬಳಸಲಾಗುವುದು” ಎಂದರು.

ಕೊಂಕಣ ರೈಲ್ವೇ ವಿಲೀನಕ್ಕೆ ಪ್ರಯತ್ನ: “ಜಿಲ್ಲೆಯ ರೈಲ್ವೇ ನಿಲ್ದಾಣಗಳಲ್ಲಿ ಕಳೆದ ಒಂದು ವರ್ಷದಲ್ಲೇ ₹10 ಕೋಟಿಗೂ ಅಧಿಕ ವೆಚ್ಚದ ಮೂಲಸೌಕರ್ಯ ಕಾಮಗಾರಿಗಳು ನಡೆದಿವೆ. ಭಟ್ಕಳದಲ್ಲಿ ಜನರ ಬಹುಕಾಲದ ಬೇಡಿಕೆಯಾಗಿದ್ದ 2 ಅಂಡರ್‌ಪಾಸ್ ಕಾಮಗಾರಿ ಪ್ರಗತಿಯಲ್ಲಿದೆ. ಕೊಂಕಣ ರೈಲ್ವೇಯನ್ನು ಭಾರತೀಯ ರೈಲ್ವೇಯೊಂದಿಗೆ ವಿಲೀನಗೊಳಿಸುವ ನಿಟ್ಟಿನಲ್ಲಿ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಬ್ರಿಜೇಶ್ ಚೌಟ ಅವರೊಂದಿಗೆ ಒಟ್ಟಾಗಿ ಪ್ರಯತ್ನಿಸಲಾಗುತ್ತಿದೆ” ಎಂದು ಕಾಗೇರಿ ವಿವರಿಸಿದರು.

ಮಹಿಳೆಯರಿಗೆ ಪ್ರತ್ಯೇಕ ಲಾಂಜ್ಘ ಭರವಸೆ: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೊಂಕಣ ರೈಲ್ವೇ ಕ್ಷೇತ್ರೀಯ ಪ್ರಬಂಧಕಿ ಆಶಾ ಶೆಟ್ಟಿ ಮಾತನಾಡಿ, “ಭಟ್ಕಳ ನಿಲ್ದಾಣದಲ್ಲಿ ಎ.ಸಿ. ಲಾಂಜ್ ನಿರ್ಮಿಸಿರುವುದು ದೂರ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಮುಂಬರುವ ದಿನಗಳಲ್ಲಿ ಮಹಿಳಾ ಪ್ರಯಾಣಿಕರಿಗಾಗಿ ಪ್ರತ್ಯೇಕ ಲಾಂಜ್ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು” ಎಂದರು. ಇದೇ ವೇಳೆ ಕರ್ನಾಟಕದಲ್ಲಿ ರೈಲು ನಿಲ್ದಾಣಗಳ ಸಂಪರ್ಕ ರಸ್ತೆ ಹಾಗೂ ಮೂಲಸೌಕರ್ಯ ಕಲ್ಪಿಸುವಲ್ಲಿ ರಾಜ್ಯ ಸರ್ಕಾರದಿಂದ ಮತ್ತಷ್ಟು ಪೂರಕ ಸ್ಪಂದನೆ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಸಮಾರಂಭದಲ್ಲಿ ಗೋವಾದ ಹಿರಿಯ ಉಪಪ್ರಬಂಧಕ ದಿಲೀಪ್ ಭಟ್, ಕಾರವಾರದ ಉಪಮುಖ್ಯ ಇಂಜಿನಿಯರ್ ವಿಜಯಕುಮಾರ್, ವಲಯ ಇಂಜಿನಿಯರ್ ಗಜಾನನ ಬಂಟ್, ಮಂಗಳೂರು ವಿಭಾಗದ ವಾಣಿಜ್ಯ ಅಧಿಕಾರಿ ಡಿ.ಜಿ. ಮೀನಾ ಹಾಗೂ ಕೊಂಕಣ ರೈಲ್ವೇ ಸಿಬ್ಬಂದಿ ಉಪಸ್ಥಿತರಿದ್ದರು.

ಮಂಗಳೂರು ಸಾರ್ವಜನಿಕ ಸಂಪರ್ಕಾಧಿಕಾರಿ ಸುಧಾ ಕೃಷ್ಣಮೂರ್ತಿ ಸ್ವಾಗತಿಸಿ ನಿರೂಪಿಸಿದರು. ಶಾಲಿನಿ ನಾಯ್ಕ ವಂದಿಸಿದರು.

About The Author

error: Content is protected !!