ಸಾಯಿ ಗಾರ್ಮೆಂಟ್ಸ್ಗೆ ನೀಡಿದ ೧೦ ಎಕರೆ ಜಾಗ ಹಿಂಪಡೆಯಲು ಒತ್ತಾಯ; ತಹಶೀಲ್ದಾರ್ ಮೂಲಕ ಮನವಿ ಸಲ್ಲಿಕೆ
ದಾಂಡೇಲಿ (ಉತ್ತರ ಕನ್ನಡ): ರಾಜ್ಯ ಸರ್ಕಾರವು ಇತ್ತೀಚೆಗೆ ಸಾರಿಗೆ ಬಸ್ ಪ್ರಯಾಣ ದರವನ್ನು ಶೇ. ೨೩ರಿಂದ ೫೦ರಷ್ಟು ಹಾಗೂ ಹಾಲಿನ ದರವನ್ನು ಹೆಚ್ಚಿಸಿರುವುದನ್ನು ತಕ್ಷಣವೇ ಹಿಂಪಡೆಯಬೇಕು ಮತ್ತು ದಾಂಡೇಲಿಯ ಸ್ಥಳೀಯ ಯುವಜನರಿಗೆ ಉದ್ಯೋಗಾವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿ ‘ದಾಂಡೇಲಿ ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿ’ಯ ವತಿಯಿಂದ ಉಪ ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.


ಸಾರಿಗೆ ಸಂಸ್ಥೆಯ ದುಸ್ಥಿತಿ ಹಾಗೂ ದರ ಏರಿಕೆಗೆ ವಿರೋಧ: ಬಸ್ ಪ್ರಯಾಣ ದರ ಹಾಗೂ ಹಾಲಿನ ಬೆಲೆ ಏರಿಕೆಯಿಂದ ಸಾಮಾನ್ಯ ಜನರು, ಕಾರ್ಮಿಕರು, ವಿದ್ಯಾರ್ಥಿಗಳು ಮತ್ತು ಹೋಟೆಲ್ ಉದ್ಯಮಕ್ಕೆ ತೀವ್ರ ಆರ್ಥಿಕ ಹೊರೆ ಉಂಟಾಗಿದೆ. “ಸಾರಿಗೆ ಸಂಸ್ಥೆಯಲ್ಲಿ ಹಳೆಯ ಬಸ್ಸುಗಳೇ ಸಂಚರಿಸುತ್ತಿದ್ದು, ಮಾರ್ಗಮಧ್ಯೆ ಕೆಟ್ಟು ನಿಲ್ಲುವ ದುಸ್ಥಿತಿಯಿದೆ. ಡಿಪೋಗಳಲ್ಲಿ ಬಿಡಿಭಾಗಗಳು ಹಾಗೂ ಟೈರ್ಗಳ ಅಭಾವವಿದ್ದು, ಚಾಲಕ-ನಿರ್ವಾಹಕರ ಹುದ್ದೆಗಳು ಖಾಲಿಯಿವೆ. ಇಂತಹ ಪರಿಸ್ಥಿತಿಯಲ್ಲಿ ದರ ಹೆಚ್ಚಿಸಿರುವುದು ಶೋಷಣೆಯಾಗಿದೆ. ಅಲ್ಲದೆ, ಸಾರಿಗೆ ಸಿಬ್ಬಂದಿಗೆ ಬಾಕಿಯಿರುವ ೧೧ ತಿಂಗಳ ವೇತನವನ್ನು ತಕ್ಷಣ ಪಾವತಿಸಬೇಕು” ಎಂದು ಸಮಿತಿ ಒತ್ತಾಯಿಸಿದೆ.

ಸ್ಥಳೀಯರಿಗೆ ಉದ್ಯೋಗಾವಕಾಶಕ್ಕೆ ಆಗ್ರಹ: ದಾಂಡೇಲಿ ಕೈಗಾರಿಕಾ ನಗರವಾಗಿದ್ದರೂ ಸ್ಥಳೀಯ ಯುವಕರಿಗೆ ಉದ್ಯೋಗ ಸಿಗದೆ ವಲಸೆ ಹೋಗುವ ಪರಿಸ್ಥಿತಿಯಿದೆ. “ಹಿಂದೆ ಸುಮಾರು ೨,೦೦೦ ಮಹಿಳೆಯರಿಗೆ ಉದ್ಯೋಗ ನೀಡುವ ಭರವಸೆ ನೀಡಿ ‘ಸಾಯಿ ಗಾರ್ಮೆಂಟ್ಸ್’ ಸಂಸ್ಥೆಯು ನಗರದ ಮಧ್ಯಭಾಗದಲ್ಲಿದ್ದ ೧೦ ಎಕರೆ ಜಾಗವನ್ನು ರಿಯಾಯಿತಿ ದರದಲ್ಲಿ ಪಡೆದುಕೊಂಡಿತ್ತು. ಆದರೆ ಇಂದಿಗೂ ಕಾರ್ಖಾನೆ ಆರಂಭಿಸಿಲ್ಲ. ಸರ್ಕಾರ ತಕ್ಷಣವೇ ಆ ಜಾಗವನ್ನು ಮರಳಿ ಪಡೆದು, ಹೊಸ ಉದ್ಯೋಗಾವಕಾಶ ಕಲ್ಪಿಸಲು ಬಳಸಬೇಕು” ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.








ಮನವಿ ಸಲ್ಲಿಕೆ ವೇಳೆ ಸಮಿತಿಯ ಅಧ್ಯಕ್ಷ ಅಕ್ರಂ ಎ. ಖಾನ್, ಉಪಾಧ್ಯಕ್ಷ ಅಶೋಕ್ ಪಾಟೀಲ, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಗಡಪ್ಪನವರ, ಮುಖಂಡರಾದ ಮಹಮ್ಮದ ಗೌಸ ಬೆಟಗೇರಿ, ಶಾಮ ಬೆಂಗಳೂರು, ಡಿ. ಹೆಗಡೆಕರ, ಮುಜಿಬಾ ಚಬ್ಬಿ, ಸಹಜಾದಿ, ಫಿರೋಜ ಫಿರ್ಜದೆ ಸೇರಿದಂತೆ ಹಲವು ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.









More Stories
ಜಿ+2 ಮನೆಗಳ ಅವ್ಯವಸ್ಥೆ ವಿರುದ್ಧ ಆಕ್ರೋಶ: ಸಮಗ್ರ ಹೋರಾಟ ಸಮಿತಿಯಿಂದ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ.
ಹಳಿಯಾಳ: ದಾಂಡೇಲಿ ಸಮಸ್ಯೆಗಳ ಕುರಿತು ಸಂಸದ ಕಾಗೇರಿಗೆ ಮನವಿ
ದಾಂಡೇಲಿ ಜಿ+2 ಮನೆಗಳ ವಿವಾದ ತೀವ್ರ – ಸಾಮಗ್ರಿ ಸ್ಥಳಾಂತರಕ್ಕೆ ಯತ್ನಕ್ಕೆ ಆಕ್ರೋಶ