ಶಿರಾಲಿ ಸಮೀಪದ ವೆಂಕಟಾಪುರ ನದಿ ತೀರದಲ್ಲಿ 42 ವರ್ಷದ ವ್ಯಕ್ತಿಯ ಮೃತದೇಹ ಪತ್ತೆ
ಭಟ್ಕಳ: ಮನೆಯ ಕಪಾಟಿನಲ್ಲಿ ಇರಿಸಿದ್ದ ಸುಮಾರು 12 ತೊಲೆ ಚಿನ್ನಾಭರಣಗಳು ನಾಪತ್ತೆಯಾದ ಹಿನ್ನೆಲೆಯಲ್ಲಿ ತೀವ್ರವಾಗಿ ಮನನೊಂದ ವ್ಯಕ್ತಿಯೊಬ್ಬರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಭಟ್ಕಳ ತಾಲೂಕಿನ ವೆಂಕಟಾಪುರದಲ್ಲಿ ಸಂಭವಿಸಿದೆ.


ಮೃತರನ್ನು ಯಲ್ಲಾಪುರ ತಾಲೂಕಿನ ಹರಣಗದ್ದೆ ಮೂಲದ, ಪ್ರಸ್ತುತ ಭಟ್ಕಳ ತಾಲೂಕಿನ ಕಾಯ್ಕಿಣಿ ಗ್ರಾಮದ ಅಗ್ಗೋಳೆ ಬಸ್ತಿಯಲ್ಲಿ ವಾಸವಾಗಿದ್ದ ದಿನೇಶ ಮೋಹನ ಮಡಿವಾಳ (42) ಎಂದು ಗುರುತಿಸಲಾಗಿದೆ.

ಘಟನೆಯ ವಿವರ: ದಿನೇಶ ಅವರ ಮನೆಯ ಗೋದ್ರೇಜ್ ಕಪಾಟಿನಲ್ಲಿ ಸುಮಾರು 12 ತೊಲೆ ಚಿನ್ನಾಭರಣಗಳನ್ನು ಇರಿಸಲಾಗಿತ್ತು. ನವೆಂಬರ್ 7ರಂದು ಪರಿಶೀಲಿಸಿದಾಗ ಆಭರಣಗಳು ಕಾಣೆಯಾಗಿರುವುದು ಬೆಳಕಿಗೆ ಬಂದಿತ್ತು. ಇದರಿಂದ ತೀವ್ರ ಆಘಾತ ಹಾಗೂ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ದಿನೇಶ ಅವರು, ನವೆಂಬರ್ 10ರಂದು ಮಧ್ಯಾಹ್ನ 2.45ರಿಂದ ರಾತ್ರಿ 8 ಗಂಟೆಯ ನಡುವಿನ ಅವಧಿಯಲ್ಲಿ ವೆಂಕಟಾಪುರದ ತಾಮ್ರ ಹೋಟೆಲ್ ಸಮೀಪದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರಿಗೆ ನೀಡಲಾದ ದೂರಿನಲ್ಲಿ ವಿವರಿಸಲಾಗಿದೆ.
ನದಿಯಲ್ಲಿ ಶೋಧ ಕಾರ್ಯ – ಮೃತದೇಹ ಪತ್ತೆ: ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಭಟ್ಕಳ ಸಿಪಿಐ ವೆಂಕಟೇಶ ಮುರ್ನಾಳ್ ಹಾಗೂ ಗ್ರಾಮೀಣ ಠಾಣೆಯ ಪೊಲೀಸರು ಸ್ಥಳಕ್ಕೆ ದೌಡಾಯಿಸಿ, ಅಗ್ನಿಶಾಮಕ ದಳದ ಸಿಬ್ಬಂದಿಯ ನೆರವಿನೊಂದಿಗೆ ರಾತ್ರಿಯಿಡೀ ಶೋಧ ಕಾರ್ಯಾಚರಣೆ ನಡೆಸಿದರು. ಆದರೆ ರಾತ್ರಿ ಮೃತದೇಹ ಪತ್ತೆಯಾಗಿರಲಿಲ್ಲ. ಮರುದಿನ ನವೆಂಬರ್ 11ರಂದು ಬೆಳಗಿನ ಜಾವ 5.15ರ ಸುಮಾರಿಗೆ ಶಿರಾಲಿ ಗ್ರಾಮದ ಮೊಗೇರಕೇರಿ ಸಮೀಪದ ವೆಂಕಟಾಪುರ ನದಿ ತೀರದಲ್ಲಿ ದಿನೇಶ ಅವರ ಮೃತದೇಹ ಪತ್ತೆಯಾಗಿದೆ.
ಈ ಕುರಿತು ಮೃತರ ಸಹೋದರ ದೀಪಕ ಮೋಹನ ಮಡಿವಾಳ ನೀಡಿದ ದೂರಿನ ಮೇರೆಗೆ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್ಐ ಮಲ್ಲಿಕಾರ್ಜುನ ಕೋರಣೆ ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.

More Stories
ವಲಯ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ವಿದ್ಯಾಭಾರತಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳ ಮಿಂಚು
ಜಾಲಿಯಲ್ಲಿ ಬೆಳಕೆ ವಲಯ ಮಟ್ಟದ ಪ್ರತಿಭಾ ಕಾರಂಜಿ ಸಂಭ್ರಮ
ನ್ಯಾಯಾಲಯದ ವಾರಂಟ್ ಜಾರಿಗೊಳಿಸಲು ತೆರಳಿದ್ದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಆರೋಪಿ ಪರಾರಿ!