November 22, 2026

ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ಜಿ.ಯು. ಭಟ್ಟರಿಗೆ ಭಟ್ಕಳ ಪತ್ರಕರ್ತರಿಂದ ಗೌರವ ಸನ್ಮಾನ

ಪ್ರಶಸ್ತಿಯೊಂದಿಗೆ ಜವಾಬ್ದಾರಿಯೂ ಹೆಚ್ಚಾಗಿದೆ; ಜಿಲ್ಲೆಯ ಅಭಿವೃದ್ಧಿಗೆ ಸ್ಪಂದಿಸಲು ಡಿಸಿಎಂಗೆ ಮನವಿ: ಜಿ.ಯು. ಭಟ್ಟ

ಭಟ್ಕಳ (ಉತ್ತರ ಕನ್ನಡ): ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಹೊನ್ನಾವರದ ಹಿರಿಯ ಪತ್ರಕರ್ತ ಜಿ.ಯು. ಭಟ್ಟ ಅವರನ್ನು ಭಟ್ಕಳ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಅವರ ಸ್ವಗೃಹದಲ್ಲಿ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಜಿ.ಯು. ಭಟ್ಟ ಅವರು, “ರಾಜ್ಯೋತ್ಸವ ಪ್ರಶಸ್ತಿ ಲಭಿಸಿರುವುದು ಅಪಾರ ಸಂತಸ ತಂದಿದ್ದು, ಇದರೊಂದಿಗೆ ಸಾಮಾಜಿಕ ಜವಾಬ್ದಾರಿಯೂ ಹೆಚ್ಚಾಗಿದೆ. ಪ್ರಶಸ್ತಿ ಪ್ರದಾನ ಸಮಾರಂಭದ ವೇಳೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಉತ್ತರ ಕನ್ನಡ ಜಿಲ್ಲೆಗೆ ಭೇಟಿ ನೀಡುವಂತೆ ಆಹ್ವಾನಿಸಿದ್ದೇನೆ. ಜಿಲ್ಲೆಯ ಜ್ವಲಂತ ಸಮಸ್ಯೆಗಳು ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ವಿಶೇಷ ಆದ್ಯತೆ ನೀಡಿ ಸ್ಪಂದಿಸುವಂತೆ ಅವರ ಗಮನ ಸೆಳೆಯಲಾಗಿದೆ” ಎಂದು ತಿಳಿಸಿದರು.

ಭಟ್ಕಳದ ಪತ್ರಕರ್ತರು ತಮ್ಮ ಸ್ವಗೃಹಕ್ಕೆ ಆಗಮಿಸಿ ತೋರಿದ ಪ್ರೀತಿ, ಅಭಿಮಾನ ಹಾಗೂ ಗೌರವಕ್ಕೆ ಅವರು ಮನತುಂಬಿ ಕೃತಜ್ಞತೆ ಸಲ್ಲಿಸಿದರು.

ಪತ್ರಕರ್ತ ಸಮುದಾಯಕ್ಕೆ ಹೆಮ್ಮೆಯ ಗೌರವ: ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ಪತ್ರಕರ್ತ ಸತೀಶಕುಮಾರ ನಾಯ್ಕ, “ಉತ್ತರ ಕನ್ನಡ ಜಿಲ್ಲೆಯ ಅರ್ಹ ಸಾಧಕರಿಗೆ, ಅದರಲ್ಲೂ ಪತ್ರಿಕಾರಂಗದಲ್ಲಿ ದಶಕಗಳ ಕಾಲ ಸೇವೆ ಸಲ್ಲಿಸಿದ ಹಿರಿಯರಿಗೆ ರಾಜ್ಯೋತ್ಸವ ಪ್ರಶಸ್ತಿ ಸಂದಿರುವುದು ಸಮಸ್ತ ಪತ್ರಕರ್ತ ಸಮುದಾಯಕ್ಕೆ ಹೆಮ್ಮೆಯ ಸಂಗತಿಯಾಗಿದೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಜಿ.ಯು. ಭಟ್ಟ ಅವರ ಪತ್ನಿ ತಾರಾ ಭಟ್ಟ, ಭಟ್ಕಳ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ರಾಧಾಕೃಷ್ಣ ಭಟ್ಟ, ಅಧ್ಯಕ್ಷ ರಾಘವೇಂದ್ರ ಹೆಬ್ಬಾರ, ಉಪಾಧ್ಯಕ್ಷರಾದ ವಿಷ್ಣು ದೇವಡಿಗ, ಎಂ.ಆರ್. ಮಾನ್ವಿ, ಪ್ರಧಾನ ಕಾರ್ಯದರ್ಶಿ ಮನಮೋಹನ ನಾಯ್ಕ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮೋಹನ ನಾಯ್ಕ, ಕಾರ್ಯದರ್ಶಿ ಶೈಲೇಶ ವೈದ್ಯ, ಸದಸ್ಯರಾದ ಪ್ರಸನ್ನ ಭಟ್ಟ, ಈಶ್ವರ ನಾಯ್ಕ, ಲೋಕೇಶ ನಾಯ್ಕ ಹಾಗೂ ಮಂಜು ನಾಯ್ಕ ಉಪಸ್ಥಿತರಿದ್ದರು.

About The Author

error: Content is protected !!