November 23, 2026

ಇತಿಹಾಸ ಪುಟಗಳಲ್ಲಿ ಒನಕೆ ಓಬವ್ವ ಅವರ ತ್ಯಾಗ, ಶೌರ್ಯ ಸದಾ ಜೀವಂತ: ಬಿ.ಎಂ. ಸತೀಶ್

ವೀರವನಿತೆಯ ಎರಡನೇ ತವರುಮನೆ ಸಿರುಗುಪ್ಪ ಎಂಬುದು ಹೆಮ್ಮೆಯ ಸಂಗತಿ; ಅದ್ಧೂರಿ ಮೆರವಣಿಗೆ, ಪ್ರತಿಭಾ ಪುರಸ್ಕಾರ

ಸಿರುಗುಪ್ಪ (ಬಳ್ಳಾರಿ ಜಿಲ್ಲೆ): ಚಿತ್ರದುರ್ಗದ ಕೋಟೆಯನ್ನು ಕಿಂಡಿಯ ಮೂಲಕ ರಕ್ಷಿಸುವಲ್ಲಿ ಅಪ್ರತಿಮ ಸಾಹಸ ಮೆರೆದು ಪ್ರಾಣತ್ಯಾಗ ಮಾಡಿದ ವೀರವನಿತೆ ಒನಕೆ ಓಬವ್ವ ಅವರ ತ್ಯಾಗ ಮತ್ತು ಶೌರ್ಯ ಇತಿಹಾಸದ ಪುಟಗಳಲ್ಲಿ ಸದಾ ಜೀವಂತವಾಗಿರಲಿದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಬಿ.ಎಂ. ಸತೀಶ್ ಬಣ್ಣಿಸಿದರು.

ತಾಲೂಕು ಆಡಳಿತ ಹಾಗೂ ಸಿರುಗುಪ್ಪ ತಾಲೂಕು ಛಲವಾದಿ ಮಹಾಸಭಾ ಸಮಿತಿಯ ಸಂಯುಕ್ತಾಶ್ರಯದಲ್ಲಿ ನಗರದ ನೇತಾಜಿ ವ್ಯಾಯಾಮ ಶಾಲಾ ಆವರಣದಲ್ಲಿ ಆಯೋಜಿಸಲಾಗಿದ್ದ ‘ವೀರವನಿತೆ ಒನಕೆ ಓಬವ್ವ ಜಯಂತಿ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. “ನಾಡಿನ ಸ್ವಾಭಿಮಾನ ಮತ್ತು ದೇಶಭಕ್ತಿಯ ಸಂಕೇತವಾಗಿರುವ ಓಬವ್ವ ಅವರು ಒನಕೆಯನ್ನೇ ಆಯುಧವನ್ನಾಗಿಸಿಕೊಂಡು ಹೈದರಾಲಿಯ ಸೈನಿಕರನ್ನು ಸದೆಬಡಿದಿದ್ದರು. ಗುಡೇಕೋಟೆ ಅವರ ತವರುಮನೆಯಾದರೆ, ನಮ್ಮ ಸಿರುಗುಪ್ಪ ಅವರ ಎರಡನೇ ತವರುಮನೆ ಎಂಬುದು ನಮಗೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ” ಎಂದರು.

ಮಹನೀಯರ ಆದರ್ಶ ಪಾಲಿಸಿ: ಬಿಜೆಪಿ ಮುಖಂಡ ದರಪ್ಪ ನಾಯಕ ಮಾತನಾಡಿ, “ಇಂದಿನ ಯುವಪೀಳಿಗೆಯು ಬುದ್ಧ, ಬಸವಣ್ಣ, ಡಾ. ಬಿ.ಆರ್. ಅಂಬೇಡ್ಕರ್, ಮಹರ್ಷಿ ವಾಲ್ಮೀಕಿ, ಕನಕದಾಸರು, ಜ್ಯೋತಿಬಾ ಫುಲೆ ದಂಪತಿ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು” ಎಂದು ಕರೆ ನೀಡಿದರು.

ವಿಶೇಷ ಉಪನ್ಯಾಸ ನೀಡಿದ ಶಿಕ್ಷಕ ರಮೇಶ ಸುಗ್ಗೇನಹಳ್ಳಿ ಅವರು, ಗುಡೇಕೋಟೆಯ ಚಿನ್ನಮ್ಮ ಮತ್ತು ಚಿನ್ನಪ್ಪ ದಂಪತಿಯ ಪುತ್ರಿ ಓಬವ್ವ ಅವರು ಚಿತ್ರದುರ್ಗದ ಕೋಟೆಯ ಕಾವಲುಗಾರ ಮುದ್ದಹನುಮಪ್ಪ ಅವರನ್ನು ವಿವಾಹವಾದ ಬಳಿಕ ನಡೆದ ಐತಿಹಾಸಿಕ ಶೌರ್ಯದ ಘಟನೆ ಹಾಗೂ ಅವರ ಸ್ವಾಭಿಮಾನದ ಬದುಕಿನ ಕುರಿತು ಸಮಗ್ರವಾಗಿ ವಿವರಿಸಿದರು.

ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಎಂ. ಬಸಪ್ಪ, ಕುಡುದರಹಾಳು ಶ್ರೀ ತಾಯಮ್ಮ ದೇವಿ ದೇವಸ್ಥಾನದ ಪೀಠಾಧ್ಯಕ್ಷ ಡಾ. ಶಿವಕುಮಾರ ತಾತನವರು, ಭಂತೇಜಿ ಕಮಲರತ್ನ ಭಿಕ್ಕು, ತಾಲೂಕು ಛಲವಾದಿ ಮಹಾಸಭಾ ಸಮಿತಿ ಅಧ್ಯಕ್ಷ ಹಾಗೂ ನಗರಸಭೆ ಸದಸ್ಯ ಎಚ್. ಗಣೇಶ್, ಗೌರವಾಧ್ಯಕ್ಷ ಬಿ. ಸಣ್ಣ ರಾಮಯ್ಯ, ಮುಖಂಡರಾದ ಬೂದುಗುಪ್ಪ ಛಲವಾದಿ ಓಂಕಾರಪ್ಪ, ಕರೆಂಟ್ ಮಲ್ಲಯ್ಯ, ಸೂಗೂರು ಮಲ್ಲಯ್ಯ, ಶ್ರೀಧರಗಡ್ಡೆ ಯಲ್ಲಪ್ಪ, ಛಲವಾದಿ ಪಂಪಾಪತಿ, ತೆಕ್ಕಲಕೋಟೆ ಮಲ್ಲಯ್ಯ, ಮುದ್ದೆನೂರು ಮುದಿಯಪ್ಪ, ಇಬ್ರಾಹಿಂಪುರ ಹನುಮಂತಪ್ಪ, ಹೆರಕಲ್ ವೀರೇಶ್, ಬೂದುಗುಪ್ಪ ಲಕ್ಷ್ಮಣ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಾದ ಸಿದ್ದಯ್ಯ, ಚಂದ್ರಶೇಖರ್, ಭಗವಂತಪ್ಪ, ಛಲವಾದಿ ನೌಕರರ ಸಂಘ, ಒನಕೆ ಓಬವ್ವ ಮಹಿಳಾ ಸಂಘದ ಪದಾಧಿಕಾರಿಗಳು ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.

“ಒನಕೆ ಓಬವ್ವ ಯಾವುದೇ ಒಂದು ನಿರ್ದಿಷ್ಟ ಸಮುದಾಯಕ್ಕೆ ಸೀಮಿತರಲ್ಲ; ಅವರು ಇಡೀ ದೇಶವೇ ಹೆಮ್ಮೆಪಡುವಂತಹ ವೀರನಾರಿ. ಅವರ ಜಯಂತಿಯನ್ನು ಕೇವಲ ಸರ್ಕಾರಿ ಕಾರ್ಯಕ್ರಮವನ್ನಾಗಿ ಮಾತ್ರವಲ್ಲದೆ, ಸಾರ್ವಜನಿಕರೆಲ್ಲರೂ ಸ್ವಯಂಪ್ರೇರಿತರಾಗಿ ಪಾಲ್ಗೊಂಡು ಅರ್ಥಪೂರ್ಣವಾಗಿ ಆಚರಿಸಿರುವುದು ಶ್ಲಾಘನೀಯ.” – ಬಿ.ಎಂ. ಸತೀಶ್, ಹಿರಿಯ ಕಾಂಗ್ರೆಸ್ ಮುಖಂಡರು

“ಸ್ವಾತಂತ್ರ್ಯ ಬಂದು 79 ವರ್ಷಗಳು ಕಳೆದರೂ ನಮ್ಮ ಛಲವಾದಿ ಸಮುದಾಯದಿಂದ ಒಬ್ಬರಿಗೂ ಜಿಲ್ಲಾ ಪಂಚಾಯಿತಿ ಸದಸ್ಯರಾಗಲು ಇಲ್ಲಿಯವರೆಗೆ ಅವಕಾಶ ಸಿಕ್ಕಿಲ್ಲ. ಮುಂಬರುವ ಚುನಾವಣೆಯಲ್ಲಿ ಸಿರುಗುಪ್ಪ ತಾಲೂಕು ವ್ಯಾಪ್ತಿಯ ಎರಡು ಕ್ಷೇತ್ರಗಳಲ್ಲಿ ನಮ್ಮ ಸಮುದಾಯಕ್ಕೆ ಟಿಕೆಟ್ ನೀಡುವ ಮೂಲಕ ರಾಜಕೀಯ ಪ್ರಾತಿನಿಧ್ಯ ಹಾಗೂ ಸಾಮಾಜಿಕ ನ್ಯಾಯ ಕಲ್ಪಿಸಬೇಕು.” – ಎಚ್. ಗಣೇಶ್, ಅಧ್ಯಕ್ಷರು, ಸಿರುಗುಪ್ಪ ತಾಲೂಕು ಛಲವಾದಿ ಮಹಾಸಭಾ ಸಮಿತಿ

ಅದ್ಧೂರಿ ಮೆರವಣಿಗೆ, ಸಾಧಕರಿಗೆ ಸನ್ಮಾನ ಜಯಂತಿ ಅಂಗವಾಗಿ ನಗರದ ಹೈಸ್ಕೂಲ್ ಮೈದಾನದಿಂದ ಪ್ರಮುಖ ಬೀದಿಗಳಲ್ಲಿ ವೀರವನಿತೆ ಒನಕೆ ಓಬವ್ವ ಅವರ ಭಾವಚಿತ್ರದ ಅದ್ಧೂರಿ ಮೆರವಣಿಗೆ ನಡೆಯಿತು. ಇದೇ ವೇಳೆ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಶೇ. 75ಕ್ಕೂ ಹೆಚ್ಚು ಅಂಕ ಗಳಿಸಿದ ಛಲವಾದಿ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಯಿತು. ಅಲ್ಲದೆ, ಉನ್ನತ ಶಿಕ್ಷಣದಲ್ಲಿ ಡಾಕ್ಟರೇಟ್ (ಪಿಎಚ್.ಡಿ) ಪದವಿ ಪಡೆದ ಸಮುದಾಯದ ಯುವ ಪ್ರತಿಭೆ, ಉಪನ್ಯಾಸಕ, ಪತ್ರಕರ್ತ ಹಾಗೂ ಸಮಾಜ ಸೇವಕ ಡಾ. ಈಶ್ವರ್ ಸಿರಿಗೇರಿ ಅವರನ್ನು ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು.

About The Author

error: Content is protected !!