November 22, 2026

ಮುಟ್ಟಳ್ಳಿ ಬೈಪಾಸ್‌ನಲ್ಲಿ ಭೀಕರ ಅಪಘಾತ: ಕಾರು–ಪಿಕಪ್ ಮುಖಾಮುಖಿ ಡಿಕ್ಕಿ; ಏಳು ಮಂದಿಗೆ ಗಾಯ

ಏರ್‌ಬ್ಯಾಗ್ ತೆರೆದುಕೊಂಡಿದ್ದರಿಂದ ತಪ್ಪಿದ ಭಾರಿ ಅನಾಹುತ; ಗಂಭೀರ ಗಾಯಾಳುಗಳು ಕುಂದಾಪುರ ಆಸ್ಪತ್ರೆಗೆ ರವಾನೆ

ಭಟ್ಕಳ (ಉತ್ತರ ಕನ್ನಡ): ತಾಲೂಕಿನ ಮುಟ್ಟಳ್ಳಿ ಬೈಪಾಸ್ ಸೇತುವೆ ಸಮೀಪ ಹ್ಯುಂಡೈ ವೆನ್ಯೂ ಕಾರು ಹಾಗೂ ಮಹೀಂದ್ರಾ ಬೊಲೆರೊ ಪಿಕಪ್ ವಾಹನದ ನಡುವೆ ಸಂಭವಿಸಿದ ಭೀಕರ ಮುಖಾಮುಖಿ ಡಿಕ್ಕಿಯಲ್ಲಿ ಏಳು ಮಂದಿ ಗಾಯಗೊಂಡಿದ್ದಾರೆ.

ಕೇರಳ ಮೂಲದ ಮಿಸ್ರಿಯಾ ಎಂಬುವವರು ಚಲಾಯಿಸುತ್ತಿದ್ದ ಹ್ಯುಂಡೈ ವೆನ್ಯೂ ಕಾರು (ಕೆಎಲ್-14-ಎಬಿ-1447) ಕುಂದಾಪುರ ಕಡೆಯಿಂದ ಭಟ್ಕಳದತ್ತ ಬರುತ್ತಿತ್ತು. ಮುಟ್ಟಳ್ಳಿ ಬೈಪಾಸ್ ಬ್ರಿಡ್ಜ್ ಸಮೀಪ ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಿಸಿದ ಕಾರು, ಎದುರಿನಿಂದ ಬರುತ್ತಿದ್ದ ಮಹೀಂದ್ರಾ ಬೊಲೆರೊ ಪಿಕಪ್ (ಕೆಎ-47/ಎ-6046) ವಾಹನಕ್ಕೆ ಮುಖಾಮುಖಿಯಾಗಿ ಡಿಕ್ಕಿ ಹೊಡೆದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಅಪಘಾತದ ತೀವ್ರತೆಗೆ ಪಿಕಪ್ ಚಾಲಕ, ಶಿರಾಲಿ ಶಾರದಾ ಹೊಳೆ ನಿವಾಸಿ ರವೀಂದ್ರ ಮಂಜಪ್ಪ ನಾಯ್ಕ (43) ಹಾಗೂ ಸಹಪ್ರಯಾಣಿಕ ಸುಬ್ರಾಯ ಕೃಷ್ಣ ಮೊಗೇರ ಗಾಯಗೊಂಡಿದ್ದಾರೆ. ಕಾರಿನಲ್ಲಿದ್ದ ಕೇರಳ ಮೂಲದ ಫಾತಿಮಾ ಮರ್ವಾ, ಫಾತಿಮಾ ಎ.ಎ., ಅಫ್ರಾ, ಆಫ್ರಿದ್ ಮತ್ತು ರಿಮ್ಸಾ ಅವರಿಗೂ ಗಾಯಗಳಾಗಿವೆ. ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು, ತಕ್ಷಣವೇ ಏರ್‌ಬ್ಯಾಗ್‌ಗಳು ತೆರೆದುಕೊಂಡಿದ್ದರಿಂದ ಸಂಭವನೀಯ ಭಾರಿ ಪ್ರಾಣಾಪಾಯ ತಪ್ಪಿದೆ.

ಗಾಯಾಳುಗಳನ್ನು ತಕ್ಷಣವೇ ಭಟ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಕೆಲವರಿಗೆ ಗಂಭೀರ ಗಾಯಗಳಾಗಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಕುಂದಾಪುರ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಘಟನೆ ಕುರಿತು ಪಿಕಪ್ ಚಾಲಕ ರವೀಂದ್ರ ಮಂಜಪ್ಪ ನಾಯ್ಕ ನೀಡಿದ ದೂರಿನ ಮೇರೆಗೆ ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಹೆದ್ದಾರಿ ಕಾಮಗಾರಿ – ಹೆಚ್ಚುತ್ತಿರುವ ಅಪಘಾತಗಳ ಆತಂಕ ತಾಲೂಕಿನಲ್ಲಿ ನಡೆಯುತ್ತಿರುವ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದಾಗಿ ವಾಹನ ಸಂಚಾರಕ್ಕೆ ತೀವ್ರ ಅಡಚಣೆಯಾಗುತ್ತಿದ್ದು, ದಿನದಿಂದ ದಿನಕ್ಕೆ ಅಪಘಾತಗಳ ಸಂಖ್ಯೆ ಹೆಚ್ಚುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಕಾಮಗಾರಿ ನಡೆಯುತ್ತಿರುವ ಸ್ಥಳಗಳಲ್ಲಿ ಸೂಕ್ತ ಸಂಚಾರ ಮಾರ್ಗಸೂಚಿ, ಎಚ್ಚರಿಕೆ ಫಲಕಗಳು ಹಾಗೂ ಸುರಕ್ಷತಾ ಕ್ರಮಗಳನ್ನು ಸಮರ್ಪಕವಾಗಿ ಅಳವಡಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

About The Author

error: Content is protected !!