ಪೊಲೀಸರ ದಾಳಿ ನಡೆಸಿ ₹89 ಸಾವಿರ ಮೌಲ್ಯದ ಜಾನುವಾರು ವಶಕ್ಕೆ; ಪ್ರಾಣಿ ಹಿಂಸಾ ಪ್ರತಿಬಂಧಕ ಕಾಯ್ದೆಯಡಿ ಪ್ರಕರಣ ದಾಖಲು
ಭಟ್ಕಳ (ಉತ್ತರ ಕನ್ನಡ): ಜಾನುವಾರುಗಳಿಗೆ ಸೂಕ್ತ ಆರೈಕೆ ಮಾಡದೆ, ಯಾವುದೇ ಆಹಾರ ಹಾಗೂ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸದೆ ತೆಂಗಿನ ಮರಗಳಿಗೆ ಕಟ್ಟಿಹಾಕಿದ್ದ ಪರಿಣಾಮ ಒಂದು ಎತ್ತು ಮೃತಪಟ್ಟಿರುವ ಹಾಗೂ ಉಳಿದ ಏಳು ಜಾನುವಾರುಗಳನ್ನು ಪೊಲೀಸರು ರಕ್ಷಿಸಿರುವ ಅಮಾನವೀಯ ಘಟನೆ ಭಟ್ಕಳ ಪಟ್ಟಣದಲ್ಲಿ ನಡೆದಿದೆ.

ಪಟ್ಟಣದ ಮೈನುದ್ದೀನ್ ಸ್ಟ್ರೀಟ್ 2ನೇ ಕ್ರಾಸ್‌ನ ಬ್ಲಾಕ್ ಬಿ ಪ್ರದೇಶದಲ್ಲಿರುವ ಖಾಲಿ ಜಾಗದಲ್ಲಿ ಜಾನುವಾರುಗಳನ್ನು ನಿರ್ಲಕ್ಷಿಸಿ ಕಟ್ಟಿಹಾಕಲಾಗಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಭಟ್ಕಳ ಶಹರ ಪೊಲೀಸರು ದಿಢೀರ್ ದಾಳಿ ನಡೆಸಿ ಪರಿಶೀಲನೆ ಕೈಗೊಂಡರು.


ಅಮಾನವೀಯವಾಗಿ ಕಟ್ಟಿಹಾಕಿದ್ದ ಕೃತ್ಯ: ತೌಶಿಫ್ ಮಹಮ್ಮದ್ ಖಾಸಿಂ ಸಾಹೇಬ್ ಎಂಬಾತನ ಮನೆಯ ಸಮೀಪದ ಖಾಲಿ ಜಾಗದಲ್ಲಿ ಒಟ್ಟು ಎಂಟು ಜಾನುವಾರುಗಳನ್ನು ತೆಂಗಿನ ಮರಗಳಿಗೆ ಹಗ್ಗದಿಂದ ಬಿಗಿದುಕಟ್ಟಿರುವುದು ಪೊಲೀಸರ ತನಿಖೆ ವೇಳೆ ಬೆಳಕಿಗೆ ಬಂದಿದೆ. ದೀರ್ಘಕಾಲದಿಂದ ಜಾನುವಾರುಗಳಿಗೆ ಯಾವುದೇ ಮೇವು ಹಾಗೂ ಕುಡಿಯುವ ನೀರು ನೀಡದೆ ಬಿಸಿಲಿನಲ್ಲಿಯೇ ಕಟ್ಟಿಹಾಕಲಾಗಿತ್ತು ಎನ್ನಲಾಗಿದೆ.
ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ, ತೀವ್ರ ಹಸಿವು ಮತ್ತು ನಿರ್ಜಲೀಕರಣದಿಂದ ಬಳಲಿದ್ದ ಒಂದು ಎತ್ತು ಈಗಾಗಲೇ ಮೃತಪಟ್ಟಿರುವುದು ಕಂಡುಬಂದಿದೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು, ಸಂಕಷ್ಟದಲ್ಲಿದ್ದ ಜೀವಂತವಿದ್ದ ಉಳಿದ ಏಳು ಜಾನುವಾರುಗಳನ್ನು ರಕ್ಷಿಸಿ ವಶಪಡಿಸಿಕೊಂಡಿದ್ದಾರೆ. ವಶಕ್ಕೆ ಪಡೆದ ಜಾನುವಾರುಗಳ ಒಟ್ಟು ಅಂದಾಜು ಮೌಲ್ಯ ₹89,000 ಎಂದು ಅಂದಾಜಿಸಲಾಗಿದೆ.
ಪ್ರಾಣಿಗಳ ಮೇಲೆ ಕ್ರೌರ್ಯ ಎಸಗಿದ ಹಾಗೂ ನಿರ್ಲಕ್ಷ್ಯ ತೋರಿದ ಆರೋಪದ ಹಿನ್ನೆಲೆಯಲ್ಲಿ ಭಟ್ಕಳ ಶಹರ ಪೊಲೀಸ್ ಠಾಣೆಯ ತನಿಖಾ ವಿಭಾಗದ ಪಿಎಸ್‌ಐ ತಿಮ್ಮಪ್ಪ ಅವರು ಸರ್ಕಾರದ ಪರವಾಗಿ ದೂರು ದಾಖಲಿಸಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

More Stories
ವಲಯ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ವಿದ್ಯಾಭಾರತಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳ ಮಿಂಚು
ಜಾಲಿಯಲ್ಲಿ ಬೆಳಕೆ ವಲಯ ಮಟ್ಟದ ಪ್ರತಿಭಾ ಕಾರಂಜಿ ಸಂಭ್ರಮ
ನ್ಯಾಯಾಲಯದ ವಾರಂಟ್ ಜಾರಿಗೊಳಿಸಲು ತೆರಳಿದ್ದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಆರೋಪಿ ಪರಾರಿ!