November 23, 2026

ಕಂಡೆಕೊಡ್ಲಿನಲ್ಲಿ ಚಿರತೆ ಅಟ್ಟಹಾಸ; ಕರು ಬಲಿ, ದನದ ಮೇಲೂ ದಾಳಿ!

ನಾರಾಯಣ ನಾಯ್ಕ ಅವರ ಕೊಟ್ಟಿಗೆಗೆ ನುಗ್ಗಿದ ಚಿರತೆ; ನಿರಂತರ ದಾಳಿಯಿಂದ ಗ್ರಾಮಸ್ಥರಲ್ಲಿ ಜೀವಭಯ – ಅರಣ್ಯ ಇಲಾಖೆ ವಿರುದ್ಧ ಅಕ್ರೋಶ

ಭಟ್ಕಳ (ಉತ್ತರ ಕನ್ನಡ): ತಾಲೂಕಿನ ಕಂಡೆಕೊಡ್ಲು ಗ್ರಾಮದಲ್ಲಿ ಚಿರತೆಯ ಹಾವಳಿ ಮಿತಿ ಮೀರಿದ್ದು, ಮುಂಜಾನೆ ಮನೆಯ ಕೊಟ್ಟಿಗೆಗೆ ನುಗ್ಗಿ ಕರುವೊಂದನ್ನು ಕೊಂದು ಹಾಕಿರುವ ಘಟನೆ ಗ್ರಾಮಸ್ಥರಲ್ಲಿ ತೀವ್ರ ಆತಂಕ ಮೂಡಿಸಿದೆ. ಕರುವನ್ನು ತಿಂದು ಹಾಕಿದ ಚಿರತೆ, ಪಕ್ಕದಲ್ಲೇ ಕಟ್ಟಿದ್ದ ಮತ್ತೊಂದು ದನದ ಮೇಲೂ ದಾಳಿ ನಡೆಸಿ ಅರಣ್ಯದತ್ತ ಪರಾರಿಯಾಗಿದೆ.

ಕಂಡೆಕೊಡ್ಲು ನಿವಾಸಿ ನಾರಾಯಣ ನಾಯ್ಕ ಅವರ ಮನೆಯ ಕೊಟ್ಟಿಗೆಯಲ್ಲಿ ಮುಂಜಾನೆ ಈ ದುರ್ಘಟನೆ ಸಂಭವಿಸಿದೆ. ಕೊಟ್ಟಿಗೆಯಲ್ಲಿದ್ದ ಕರುವನ್ನು ಚಿರತೆ ಕೊಂದು ಅರ್ಧದಷ್ಟು ತಿಂದು ಹಾಕಿದೆ. ಬಳಿಕ ಮತ್ತೊಂದು ದನದ ಮೇಲೂ ಎರಗಿದ ಚಿರತೆ, ಅದನ್ನು ಹಗ್ಗದಿಂದ ಗಟ್ಟಿಯಾಗಿ ಕಟ್ಟಿಹಾಕಿದ್ದ ಕಾರಣ ಎಳೆದೊಯ್ಯಲು ಸಾಧ್ಯವಾಗದೆ ಗಾಯಗೊಳಿಸಿ ಅಲ್ಲೇ ಬಿಟ್ಟಿದೆ. ಬೆಳಗಿನ ಜಾವ ಜನರ ಓಡಾಟದ ಸದ್ದು ಕೇಳುತ್ತಿದ್ದಂತೆ ಚಿರತೆ ಸಮೀಪದ ಅರಣ್ಯ ಪ್ರದೇಶದತ್ತ ಓಡಿಹೋಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ರಾತ್ರಿ ವೇಳೆ ಹುಲಿ ಘರ್ಜನೆಯ ಆತಂಕ: ಕಂಡೆಕೊಡ್ಲು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿರತೆಯ ಸಂಚಾರ ನಿರಂತರವಾಗಿದ್ದು, ಜಾನುವಾರುಗಳ ಮೇಲೆ ಪದೇಪದೆ ದಾಳಿ ನಡೆಯುತ್ತಿದೆ. ಇದರ ಜೊತೆಗೆ ರಾತ್ರಿ ವೇಳೆ ಸಮೀಪದ ಅರಣ್ಯ ಪ್ರದೇಶದಿಂದ ಹುಲಿಯ ಘರ್ಜನೆಯಂತಹ ಶಬ್ದಗಳು ಕೇಳಿಬರುತ್ತಿವೆ ಎಂಬ ಮಾತುಗಳು ಗ್ರಾಮಸ್ಥರಲ್ಲಿ ಮತ್ತಷ್ಟು ಜೀವಭಯಕ್ಕೆ ಕಾರಣವಾಗಿವೆ.

ವನ್ಯಪ್ರಾಣಿಗಳ ಹಾವಳಿ ನಿಯಂತ್ರಿಸುವಂತೆ ಹಲವು ಬಾರಿ ಅರಣ್ಯ ಇಲಾಖೆಗೆ ದೂರು ನೀಡಿದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಆಕ್ರೋಶ ಗ್ರಾಮಸ್ಥರಿಂದ ವ್ಯಕ್ತವಾಗಿದೆ. ಇದೀಗ ಮತ್ತೊಮ್ಮೆ ಕೊಟ್ಟಿಗೆಯೊಳಗೇ ನುಗ್ಗಿ ದಾಳಿ ನಡೆಸಿರುವುದರಿಂದ ಜನರು ಮನೆಯಿಂದ ಹೊರಬರಲು ಹಾಗೂ ಜಾನುವಾರುಗಳನ್ನು ಸಾಕಲು ಭಯಪಡುವಂತಾಗಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿರತೆಯ ಚಲನವಲನ ಪತ್ತೆಹಚ್ಚಲು ತಕ್ಷಣ ಬೋನು ಅಳವಡಿಸಬೇಕು, ಕ್ಯಾಮೆರಾ ಕಣ್ಗಾವಲು ಇರಿಸಬೇಕು ಹಾಗೂ ರಾತ್ರಿ ಗಸ್ತು ಹೆಚ್ಚಿಸುವ ಮೂಲಕ ಜನವಸತಿ ಪ್ರದೇಶದಲ್ಲಿ ವನ್ಯಪ್ರಾಣಿಗಳ ಹಾವಳಿ ತಡೆಗಟ್ಟಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಜಾನುವಾರುಗಳ ಬಳಿಕ ಮನುಷ್ಯರ ಸರದಿಯೇ? ಗ್ರಾಮದ ಸುತ್ತಮುತ್ತ ಚಿರತೆಯ ಓಡಾಟ ಹೆಚ್ಚುತ್ತಿರುವಾಗಲೇ ಜಾನುವಾರುಗಳ ಮೇಲೆ ದಾಳಿ ಮುಂದುವರಿದಿರುವುದು ಸ್ಥಳೀಯರಲ್ಲಿ ತೀವ್ರ ಆತಂಕ ಮೂಡಿಸಿದೆ. ಯಾವುದೇ ಅನಾಹುತ ಅಥವಾ ಪ್ರಾಣಾಪಾಯ ಸಂಭವಿಸುವ ಮುನ್ನ ಅರಣ್ಯ ಇಲಾಖೆ ಎಚ್ಚೆತ್ತುಕೊಂಡು ಚಿರತೆಯನ್ನು ಸೆರೆಹಿಡಿಯಲು ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.

About The Author

error: Content is protected !!