November 22, 2026

ಶ್ರೀವಲ್ಲಿ ಪಿಯು ಕಾಲೇಜಿನಲ್ಲಿ ವಿಜೃಂಭಣೆಯ ‘ಸಂಪ್ರದಾಯ ದಿನ’ ಆಚರಣೆ

ಆಧುನಿಕ ತಂತ್ರಜ್ಞಾನ ಕೈಯಲ್ಲಿರಲಿ, ಸಂಸ್ಕೃತಿ ಹೃದಯದಲ್ಲಿರಲಿ: ರಾಜ್ಯ ಪ್ರಶಸ್ತಿ ಪುರಸ್ಕೃತ ಕವಿ ಉಮೇಶ ಮುಂಡಳ್ಳಿ ಕರೆ

ಭಟ್ಕಳ (ಉತ್ತರ ಕನ್ನಡ): “ಸಂಪ್ರದಾಯ ನಮ್ಮ ಬದುಕಿನ ರೀತಿ; ಸಂಸ್ಕಾರ ನಮ್ಮ ಬದುಕಿನ ನೀತಿ. ಹಿರಿಯರಿಗೆ ಗೌರವ ನೀಡುವುದು, ಕಿರಿಯರಿಗೆ ಪ್ರೀತಿ ತೋರುವುದು ಹಾಗೂ ಕಷ್ಟದಲ್ಲಿರುವವರಿಗೆ ನೆರವಾಗುವುದು ಕೂಡ ನಿಜವಾದ ಸಂಸ್ಕಾರದ ಭಾಗವೇ ಹೊರತು, ಸಂಪ್ರದಾಯವೆಂದರೆ ಕೇವಲ ಆಚರಣೆಗಳಿಗೆ ಮಾತ್ರ ಸೀಮಿತವಾದುದಲ್ಲ” ಎಂದು ರಾಜ್ಯ ಪ್ರಶಸ್ತಿ ಪುರಸ್ಕೃತ ಕವಿ, ಸಾಹಿತಿ ಹಾಗೂ ಸುಗಮ ಸಂಗೀತ ಗಾಯಕ ಉಮೇಶ ಮುಂಡಳ್ಳಿ ಅಭಿಪ್ರಾಯಪಟ್ಟರು.

ಭಟ್ಕಳದ ಪ್ರತಿಷ್ಠಿತ ಚಿತ್ರಾಪುರ ಮಠದ ಆಡಳಿತಕ್ಕೆ ಒಳಪಟ್ಟಿರುವ ಚಿತ್ರಾಪುರದ ಶ್ರೀವಲ್ಲಿ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಆಯೋಜಿಸಲಾಗಿದ್ದ ‘ಟ್ರೆಡಿಷನಲ್ ಡೇ’ (ಸಂಪ್ರದಾಯ ದಿನ) ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.

“‘ವಸುದೈವ ಕುಟುಂಬಕಂ’ ಎಂಬ ಉದಾತ್ತ ತತ್ವವನ್ನು ಜಗತ್ತಿಗೆ ಸಾರಿದ ಸನಾತನ ಪರಂಪರೆ ನಮ್ಮದು. ಪ್ರೀತಿ, ಸಹಬಾಳ್ವೆ, ಸಹನೆ, ತ್ಯಾಗ ಮತ್ತು ಮಾನವೀಯತೆ ನಮ್ಮ ಸಂಸ್ಕೃತಿಯ ಜೀವಾಳ. ಸಂಸ್ಕೃತಿಯನ್ನು ಮರೆತ ಸಮಾಜ ತನ್ನ ಅಸ್ಮಿತೆಯನ್ನೇ ಕಳೆದುಕೊಳ್ಳುತ್ತದೆ” ಎಂದು ಮಾರ್ಮಿಕವಾಗಿ ನುಡಿದರು.

ಸಂಗೀತದೊಂದಿಗೆ ಸಂಸ್ಕೃತಿಯ ಸಂದೇಶ: ಸಂಪ್ರದಾಯ ದಿನದ ಆಶಯಕ್ಕೆ ಪೂರಕವಾಗಿ ಸಂಸ್ಕೃತಿ-ಸಂಸ್ಕಾರ, ಜನಪದ ಪರಂಪರೆ ಹಾಗೂ ತತ್ವಪದಗಳ ಮೌಲ್ಯಗಳ ಕುರಿತು ಉಪನ್ಯಾಸ ನೀಡಿದ ಉಮೇಶ ಮುಂಡಳ್ಳಿ, ಮಾತಿನ ನಡುವೆ ದೇಶಭಕ್ತಿ ಗೀತೆ, ಭಾವಗೀತೆ, ಜನಪದ ಗೀತೆ ಹಾಗೂ ತತ್ವಪದಗಳನ್ನು ಹಾಡುವ ಮೂಲಕ ವಿದ್ಯಾರ್ಥಿಗಳಲ್ಲಿ ಸಾಂಸ್ಕೃತಿಕ ಅಭಿಮಾನ ಜಾಗೃತಗೊಳಿಸಿದರು. ತಮ್ಮದೇ ರಚನೆಯ ಉತ್ತರ ಕನ್ನಡದ ವೈಭವ ಸಾರುವ ಗೀತೆಯನ್ನು ಪ್ರಸ್ತುತಪಡಿಸಿ ಸ್ಥಳೀಯ ನೆಲ, ಜಲ ಹಾಗೂ ಸಂಸ್ಕೃತಿಯ ಬಗ್ಗೆ ಹೆಮ್ಮೆ ಮೂಡಿಸಿದರು.

“ಆಧುನಿಕ ತಂತ್ರಜ್ಞಾನ ನಮ್ಮ ಕೈಯಲ್ಲಿರಲಿ, ನಮ್ಮ ಸಂಸ್ಕೃತಿ ನಮ್ಮ ಹೃದಯದಲ್ಲಿರಲಿ. ಜಗತ್ತಿನೊಂದಿಗೆ ಹೆಜ್ಜೆ ಹಾಕುವ ಭರದಲ್ಲಿ ನಮ್ಮ ಬೇರುಗಳನ್ನು ಮರೆಯಬಾರದು. ಪದವಿ ಮನುಷ್ಯನಿಗೆ ಉದ್ಯೋಗ ನೀಡಬಹುದು; ಆದರೆ ಸಂಸ್ಕಾರ ಮಾತ್ರ ಬದುಕಿಗೆ ಶಾಶ್ವತ ಗೌರವ ತಂದುಕೊಡುತ್ತದೆ” ಎಂಬ ಅವರ ನುಡಿಗಳು ವಿದ್ಯಾರ್ಥಿಗಳ ಮನಮುಟ್ಟಿದವು.

ಮೂಲ ಸಂಸ್ಕೃತಿಯ ಪ್ರೀತಿಯೇ ಸಂಪ್ರದಾಯ: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ರವೀಂದ್ರ ಕಾಯ್ಕಿಣಿ ಮಾತನಾಡಿ, “ಸಂಪ್ರದಾಯವೆಂದರೆ ಕೇವಲ ಸೀರೆ, ಪಂಚೆ, ಹೂವು, ಬಳೆ ಧರಿಸುವುದಷ್ಟೇ ಅಲ್ಲ; ಆಧುನಿಕತೆಯನ್ನು ಸ್ವೀಕರಿಸುತ್ತಲೇ ನಮ್ಮ ಮೂಲ ಸಂಸ್ಕೃತಿಯನ್ನು ಪ್ರೀತಿಸಿ ಗೌರವಿಸುವುದಾಗಿದೆ” ಎಂದರು. ಶ್ರೀವಲ್ಲಿ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಮಮತಾ ಭಟ್ಕಳ ಮಾತನಾಡಿ, ಇಂತಹ ಕಾರ್ಯಕ್ರಮಗಳು ಮಕ್ಕಳಲ್ಲಿ ನಮ್ಮ ಪರಂಪರೆಯ ಅರಿವು ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದರು.

ಕಾರ್ಯಕ್ರಮದ ಆರಂಭದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಚಿಂತನಾ ಸ್ವಾಗತಿಸಿ, ಅಕ್ಷತಾ ಸಂಪ್ರದಾಯ ದಿನದ ಮಹತ್ವ ತಿಳಿಸಿದರು. ರೇಷ್ಮಾ ಮತ್ತು ಶರಣ್ಯ ಕಾರ್ಯಕ್ರಮ ನಿರ್ವಹಿಸಿ, ಸಂದೇಶ ಶೆಟ್ಟಿ ವಂದಿಸಿದರು. ಸಮಾರಂಭದ ಮುನ್ನಡೆಗೆ ಕಾಲೇಜಿನ ಉಪನ್ಯಾಸಕ ವೃಂದ ಹಾಗೂ ವಿದ್ಯಾರ್ಥಿಗಳು ಸಹಕರಿಸಿದರು.

ವೇದಿಕೆ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಸಾಂಪ್ರದಾಯಿಕ ಉಡುಗೆ ತೊಟ್ಟು ಜನಪದ ನೃತ್ಯ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡರು. ಇಡೀ ಕಾಲೇಜು ಆವರಣವು ಸಂಪ್ರದಾಯ, ಸಂಸ್ಕೃತಿ ಮತ್ತು ಕಲೆಯ ಸೊಬಗಿನಿಂದ ಕಂಗೊಳಿಸಿತು.

About The Author

error: Content is protected !!