November 22, 2026

ಹೊನ್ನಾವರ: ಅನುದಾನಿತ ಶಾಲಾ ನೌಕರರ ಹೋರಾಟಕ್ಕೆ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಸಂಪೂರ್ಣ ಬೆಂಬಲ

ನ. 18ರಿಂದ ಆರಂಭವಾಗುವ ಅನಿರ್ದಿಷ್ಟಾವಧಿ ಶಾಲಾ ಬಂದ್ ಯಶಸ್ವಿಗೊಳಿಸಲು ಆಡಳಿತ ಮಂಡಳಿ, ಶಿಕ್ಷಕರಿಗೆ ಕರೆ

ಹೊನ್ನಾವರ (ಉತ್ತರ ಕನ್ನಡ): ಅನುದಾನಿತ ಶಿಕ್ಷಣ ಸಂಸ್ಥೆಗಳ ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿಯ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘವು ಹಮ್ಮಿಕೊಂಡಿರುವ ಹೋರಾಟಕ್ಕೆ ಹೊನ್ನಾವರ ಖಾಸಗಿ ಶಾಲಾ ಸಂಸ್ಥೆಗಳ ಒಕ್ಕೂಟವು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ.

ಸಭೆಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಕೃಷ್ಣಮೂರ್ತಿ ಭಟ್ಟ ಶಿವಾನಿ, “01-04-2006ರ ನಂತರ ನೇಮಕಗೊಂಡ ನೌಕರರಿಗೆ ಹಳೆಯ ಪಿಂಚಣಿ ಯೋಜನೆ (OPS) ಜಾರಿಗೊಳಿಸಬೇಕು. ಖಾಲಿ ಹುದ್ದೆಗಳ ಭರ್ತಿಗೆ ಅನುಮತಿ, 2015ರಿಂದ ಬಾಕಿ ಇರುವ ನೇಮಕಾತಿಗಳಿಗೆ ಅನುಮೋದನೆ, ದ್ವಿಭಾಷಾ ಪದ್ಧತಿ ವಿಸ್ತರಣೆ, ಆರೋಗ್ಯ ಸಂಜೀವಿನಿ ಯೋಜನೆ, ಸೇವಾ ಭದ್ರತೆ, ಮುಂಬಡ್ತಿ ಹಾಗೂ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ವಿದ್ಯಾರ್ಥಿ-ಶಿಕ್ಷಕರ ಅನುಪಾತ ಕಡಿತ ಸೇರಿದಂತೆ ವಿವಿಧ ಬೇಡಿಕೆಗಳನ್ನು ಸರ್ಕಾರ ತಕ್ಷಣವೇ ಈಡೇರಿಸಬೇಕು” ಎಂದು ಆಗ್ರಹಿಸಿದರು.

ಅನಿರ್ದಿಷ್ಟಾವಧಿ ಶಾಲಾ ಬಂದ್‌ಗೆ ಬೆಂಬಲ:

ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘದ ಕಾರವಾರ ಶೈಕ್ಷಣಿಕ ಜಿಲ್ಲಾ ಕಾರ್ಯದರ್ಶಿ ಎಲ್.ಎಂ. ಹೆಗಡೆ, “ನವೆಂಬರ್ 17ರಂದು ಧಾರವಾಡದಲ್ಲಿ ನಡೆಯುವ ಬೃಹತ್ ಪ್ರತಿಭಟನೆ ಹಾಗೂ ನವೆಂಬರ್ 18ರಿಂದ ಆರಂಭವಾಗುವ ಅನಿರ್ದಿಷ್ಟಾವಧಿ ಶಾಲಾ ಬಂದ್‌ಗೆ ಜಿಲ್ಲೆಯ ಎಲ್ಲಾ ಆಡಳಿತ ಮಂಡಳಿಗಳು, ಶಿಕ್ಷಕರು ಮತ್ತು ಶಿಕ್ಷಕೇತರ ಸಿಬ್ಬಂದಿ ಬೆಂಬಲ ನೀಡಬೇಕು” ಎಂದು ಕರೆ ನೀಡಿದರು.

ಉತ್ತರ ಕನ್ನಡ ಜಿಲ್ಲಾ ಸಂಚಾಲಕ ಎಂ.ಟಿ. ಗೌಡ ಮಾತನಾಡಿ, “ಅನುದಾನಿತ ಶಾಲೆಗಳ ವಿದ್ಯಾರ್ಥಿಗಳು ಮತ್ತು ನೌಕರರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸದೆ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿರುವುದು ಖಂಡನೀಯ. ಅನುದಾನಿತ ಶಿಕ್ಷಣ ಸಂಸ್ಥೆಗಳ ಅಸ್ತಿತ್ವ ಹಾಗೂ ನೌಕರರ ಹಿತದೃಷ್ಟಿಯಿಂದ ಬಸವರಾಜ ಹೊರಟ್ಟಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಈ ಹೋರಾಟಕ್ಕೆ ಎಲ್ಲರೂ ಕಡ್ಡಾಯವಾಗಿ ಕೈಜೋಡಿಸಬೇಕು” ಎಂದರು.

ಒಕ್ಕೂಟದ ಪ್ರವರ್ತಕ ಕೃಷ್ಣಮೂರ್ತಿ ಹೆಬ್ಬಾರ ಮಾತನಾಡಿ, ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಮತ್ತು ನೌಕರರಿಗೆ ದೊರೆಯುವ ಎಲ್ಲಾ ಸೌಲಭ್ಯಗಳನ್ನು ಒಂದೇ ಆದೇಶದ ಮೂಲಕ ಅನುದಾನಿತ ಶಾಲೆಗಳಿಗೂ ವಿಸ್ತರಿಸಬೇಕು ಎಂದು ಒತ್ತಾಯಿಸಿದರು.

ಸಭೆಯಲ್ಲಿ ಪ್ರಮುಖರಾದ ರಾಜೀವ್ ಶ್ಯಾನುಭಾಗ, ಯೋಗೀಶ್ ರಾಯ್ಕರ್, ಜೈವಂತ ಶೇಟ್, ಮಹೇಶ ಶೆಟ್ಟಿ, ಸೋಮೇಶ ಪೂಜಾರಿ ಮತ್ತಿತರರು ಉಪಸ್ಥಿತರಿದ್ದು ಹೋರಾಟಕ್ಕೆ ಬೆಂಬಲ ಸೂಚಿಸಿದರು. ತಾಲೂಕು ಅಧ್ಯಕ್ಷ ಸಂತೋಷಕುಮಾರ ನಾಯ್ಕ ಸ್ವಾಗತಿಸಿದರು. ಸಿ.ಆರ್. ಹೆಗಡೆ ವಂದಿಸಿದರು.

About The Author

error: Content is protected !!