ಉಚಿತ ಬಿತ್ತನೆ ಬೀಜ ಪಡೆದ ರೈತರಿಂದ ತಲಾ ಒಂದು ಪಿಂಡಿ ಹುಲ್ಲು ಸಂಗ್ರಹ; ಬೈಲೂರು ಶ್ರೀ ಗೋಪಾಲಕೃಷ್ಣ ಗೋಶಾಲೆಗೆ ಹಸ್ತಾಂತರ
ಭಟ್ಕಳ (ಉತ್ತರ ಕನ್ನಡ): ಪ್ರತಿವರ್ಷ ತಮ್ಮ ಊರಿನ ರೈತರಿಗೆ ಉಚಿತವಾಗಿ ಬಿತ್ತನೆ ಬೀಜಗಳನ್ನು ವಿತರಿಸುವ ಮೂಲಕ ಕೃಷಿ ಚಟುವಟಿಕೆಗಳಿಗೆ ನಿರಂತರ ಪ್ರೋತ್ಸಾಹ ನೀಡುತ್ತಾ ಬಂದಿರುವ ಮಾಸ್ತಪ್ಪ ನಾಯ್ಕ ಬಲಸೆ ಅವರು ಈ ಬಾರಿ ಗೋಸಂರಕ್ಷಣೆಯ ನಿಟ್ಟಿನಲ್ಲಿ ಮತ್ತೊಂದು ವಿನೂತನ ಸಮಾಜಮುಖಿ ಕಾರ್ಯಕ್ಕೆ ಮುನ್ನುಡಿ ಬರೆದಿದ್ದಾರೆ.

ತಮ್ಮಿಂದ ಉಚಿತವಾಗಿ ಬಿತ್ತನೆ ಬೀಜಗಳನ್ನು ಪಡೆದು ಕೃಷಿ ಮಾಡಿದ್ದ ರೈತರಿಂದ ತಲಾ ಒಂದು ಪಿಂಡಿ ಒಣ ಹುಲ್ಲನ್ನು (ಮೇವು) ಸಂಗ್ರಹಿಸಿ, ತಾಲೂಕಿನ ಬೈಲೂರು ಗ್ರಾಮದ ಶ್ರೀ ಗೋಪಾಲಕೃಷ್ಣ ಗೋಶಾಲೆಗೆ ವಿತರಿಸುವ ಮೂಲಕ ಗೋವುಗಳ ಮೇವಿನ ವ್ಯವಸ್ಥೆಗೆ ಮಹತ್ವದ ನೆರವು ನೀಡಿದ್ದಾರೆ.

ರೈತರಿಗೆ ಬಿತ್ತನೆ ಬೀಜ ವಿತರಿಸಿ ಕೃಷಿಗೆ ಬೆನ್ನೆಲುಬಾಗಿ ನಿಲ್ಲುವುದರ ಜೊತೆಗೆ, ಅದೇ ರೈತರ ಸಹಕಾರದೊಂದಿಗೆ ಗೋವುಗಳಿಗೂ ಮೇವು ಒದಗಿಸುವ ಈ ಪರಿಕಲ್ಪನೆಯು ಕೃಷಿ, ಗೋಸಂರಕ್ಷಣೆ ಹಾಗೂ ಸಾಮಾಜಿಕ ಕಾಳಜಿಯನ್ನು ಒಂದೇ ವೇದಿಕೆಯಲ್ಲಿ ಬೆಸೆಯುವ ಮಾದರಿ ಪ್ರಯತ್ನವಾಗಿ ಹೊರಹೊಮ್ಮಿದೆ.
ಗೋಸಂರಕ್ಷಣೆಗೆ ಸಮಾಜದ ಸಹಭಾಗಿತ್ವದ ಸಂದೇಶ: “ರೈತರಿಂದಲೇ ಮೇವು ಸಂಗ್ರಹಿಸಿ ಗೋಶಾಲೆಗೆ ತಲುಪಿಸುವ ಮೂಲಕ ಸಮಾಜದ ಪ್ರತಿಯೊಬ್ಬರೂ ತಮ್ಮ ಕೈಲಾದ ರೀತಿಯಲ್ಲಿ ಗೋಸಂರಕ್ಷಣೆಗೆ ಕೊಡುಗೆ ನೀಡಬಹುದು” ಎಂಬ ಸದಾಶಯವನ್ನು ಈ ಕಾರ್ಯ ಸಾರಿದೆ. ರೈತರ ಸಹಕಾರದೊಂದಿಗೆ ಗೋವುಗಳ ಹಸಿವು ನೀಗಿಸುವ ಈ ಮಾನವೀಯ ಹಾಗೂ ಪರಿಸರ ಪೂರಕ ಪ್ರಯತ್ನಕ್ಕೆ ಸಾರ್ವಜನಿಕ ವಲಯದಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಈ ಸಮಾಜಮುಖಿ ಕಾರ್ಯದಲ್ಲಿ ಕೃಷ್ಣ ನಾಯ್ಕ, ನಾಗರಾಜ ನಾಯ್ಕ, ಸುಬ್ಬು ನಾಯ್ಕ, ಯೋಗೇಶ್ ನಾಯ್ಕ, ಚೇತನ್ ನಾಯ್ಕ ಹಾಗೂ ವಿಷ್ಣು ನಾಯ್ಕ ಉಪಸ್ಥಿತರಿದ್ದು ಸಹಕರಿಸಿದರು.

More Stories
ವಲಯ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ವಿದ್ಯಾಭಾರತಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳ ಮಿಂಚು
ಜಾಲಿಯಲ್ಲಿ ಬೆಳಕೆ ವಲಯ ಮಟ್ಟದ ಪ್ರತಿಭಾ ಕಾರಂಜಿ ಸಂಭ್ರಮ
ನ್ಯಾಯಾಲಯದ ವಾರಂಟ್ ಜಾರಿಗೊಳಿಸಲು ತೆರಳಿದ್ದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಆರೋಪಿ ಪರಾರಿ!