ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಬಳಿಯ ನಿಲ್ದಾಣದ ದುಸ್ಥಿತಿ; ನೂರಾರು ವಿದ್ಯಾರ್ಥಿಗಳಿಗೆ ಹಾವು, ಚೇಳುಗಳ ಭೀತಿ
ಕುಶಾಲನಗರ (ಕೊಡಗು): ಕುಶಾಲನಗರದಿಂದ ಮಡಿಕೇರಿಗೆ ತೆರಳುವ ರಾಜ್ಯ ಹೆದ್ದಾರಿಯ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಬಳಿಯ ಬಸ್ ತಂಗುದಾಣದ ಪಕ್ಕದಲ್ಲೇ ಆಳೆತ್ತರಕ್ಕೆ ಕಾಡು ಪೊದೆಗಳು ಬೆಳೆದು ನಿಂತಿದ್ದು, ಕೂಡಲೇ ಅವುಗಳನ್ನು ತೆರವುಗೊಳಿಸಿ ಸ್ವಚ್ಛಗೊಳಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯ ಕುಶಾಲನಗರ ತಾಲೂಕು ಘಟಕವು ಪುರಸಭೆ ಅಧಿಕಾರಿಗಳನ್ನು ಒತ್ತಾಯಿಸಿದೆ. ಸಂಘಟನೆಯ ಪದಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ತಂಗುದಾಣದ ದುಸ್ಥಿತಿಯನ್ನು ಪರಿಶೀಲಿಸಿದರು.

ಕುಶಾಲನಗರ ಪುರಸಭೆಯ ಸಹಕಾರದೊಂದಿಗೆ ಇನ್ನರ್ ವ್ಹೀಲ್ ಕ್ಲಬ್ ಕುಶಾಲನಗರ (2022-23) ವತಿಯಿಂದ ಈ ಬಸ್ ತಂಗುದಾಣವನ್ನು ನಿರ್ಮಿಸಲಾಗಿತ್ತು. ಆದರೆ ಸೂಕ್ತ ನಿರ್ವಹಣೆಯಿಲ್ಲದೆ ತಂಗುದಾಣದ ಸುತ್ತಲೂ ದಟ್ಟವಾಗಿ ಗಿಡಗಂಟಿಗಳು ಬೆಳೆದಿದ್ದು, ನಿಲ್ದಾಣವೇ ಮುಚ್ಚಿಹೋಗುವ ಹಂತಕ್ಕೆ ತಲುಪಿದೆ. ತಂಗುದಾಣದ ಒಳಭಾಗದಲ್ಲೂ ಸ್ವಚ್ಛತೆಯ ಕೊರತೆ ಎದ್ದು ಕಾಣುತ್ತಿದೆ.

ವಿದ್ಯಾರ್ಥಿಗಳಿಗೆ ಆತಂಕ: ಪ್ರತಿನಿತ್ಯ ನೂರಾರು ಇಂಜಿನಿಯರಿಂಗ್ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಇದೇ ಬಸ್ ನಿಲ್ದಾಣವನ್ನು ಅವಲಂಬಿಸಿದ್ದಾರೆ. ತಂಗುದಾಣದ ಬದಿಯಲ್ಲೇ ಪೊದೆಗಳು ಎತ್ತರಕ್ಕೆ ಬೆಳೆದಿರುವುದರಿಂದ ಒಳಗೆ ಕುಳಿತವರಿಗೆ ರಸ್ತೆಯಲ್ಲಿ ಬಸ್ ಬರುವುದೇ ಕಾಣದಂತಾಗಿದೆ. ಇದರೊಂದಿಗೆ, ದಟ್ಟ ಪೊದೆಗಳಿಂದ ಹಾವು ಹಾಗೂ ಇತರ ವಿಷಜಂತುಗಳು ತಂಗುದಾಣದೊಳಗೆ ನುಗ್ಗುವ ಭೀತಿ ಎದುರಾಗಿದ್ದು, ವಿದ್ಯಾರ್ಥಿಗಳು ಜೀವಭಯದಲ್ಲೇ ಬಸ್‌ಗಾಗಿ ಕಾಯುವಂತಾಗಿದೆ.
“ರಾಜ್ಯ ಹೆದ್ದಾರಿಯ ಬದಿಯಲ್ಲೇ ಇರುವ ಬಸ್ ತಂಗುದಾಣದ ಪರಿಸ್ಥಿತಿಯೇ ಹೀಗಾದರೆ, ಇನ್ನು ಗ್ರಾಮೀಣ ಭಾಗಗಳ ಗತಿ ಏನು?” ಎಂದು ಕರವೇ ಸ್ವಾಭಿಮಾನಿ ಸೇನೆಯ ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕುಶಾಲನಗರ ಪುರಸಭೆಯ ಅಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ತಂಗುದಾಣದ ಸುತ್ತಮುತ್ತಲಿನ ಕಾಡು ಪೊದೆಗಳನ್ನು ಸಂಪೂರ್ಣವಾಗಿ ತೆರವುಗೊಳಿಸಬೇಕು ಹಾಗೂ ವಿದ್ಯಾರ್ಥಿಗಳಿಗೆ ಸುರಕ್ಷಿತವಾಗಿ ಕುಳಿತುಕೊಳ್ಳಲು ಅನುವು ಮಾಡಿಕೊಡಬೇಕು ಎಂದು ಆಗ್ರಹಿಸಿದ್ದಾರೆ.
ಪರಿಶೀಲನೆಯ ಸಂದರ್ಭದಲ್ಲಿ ಕರವೇ ಸ್ವಾಭಿಮಾನಿ ಸೇನೆಯ ಜಿಲ್ಲಾಧ್ಯಕ್ಷ ಫ್ರಾನ್ಸಿಸ್ ಡಿಸೋಜ, ಜಿಲ್ಲಾ ಖಜಾಂಚಿ ಅಂತೋನಿ, ಜಿಲ್ಲಾ ಕಾರ್ಯದರ್ಶಿ ಮಣಿಕಂಠ, ಕುಶಾಲನಗರ ತಾಲೂಕು ಘಟಕದ ಅಧ್ಯಕ್ಷ ಕೆ.ಎಸ್. ಶಿವು, ಕಾರ್ಮಿಕ ಘಟಕದ ಅಧ್ಯಕ್ಷ ಚಂದ್ರು, ನಗರ ಘಟಕದ ಅಧ್ಯಕ್ಷ ಪರಮೇಶ್, ತಾಲೂಕು ಸಂಚಾಲಕ ವಿ.ಪಿ. ಚಂದ್ರಶೇಖರ್ ಹಾಗೂ ತಾಲೂಕು ಗೌರವಾಧ್ಯಕ್ಷ ರವೀಂದ್ರ ಉಪಸ್ಥಿತರಿದ್ದರು.

More Stories
ಅಪಾಯದ ಹಂತದಲ್ಲಿರುವ ವಿದ್ಯುತ್ ಕಂಬ ಬದಲಾಯಿಸಲು ಕರವೇ ಆಗ್ರಹ
ಶೇ. 60ರಷ್ಟು ಕನ್ನಡ ಕಡ್ಡಾಯ ನಿಯಮ ಉಲ್ಲಂಘನೆ: ಒಂದು ವಾರದೊಳಗೆ ಫಲಕ ಬದಲಾಯಿಸಲು ಪುರಸಭೆ ಎಚ್ಚರಿಕೆ
ಕುಶಾಲನಗರದಲ್ಲಿ ಅದ್ದೂರಿ ಕನ್ನಡ ರಾಜ್ಯೋತ್ಸವ: ಕರವೇ ಭಾಗಿ, ಕಣ್ಣುಸೆಳೆದ ಭವ್ಯ ಮೆರವಣಿಗೆ