November 22, 2026

ಗ್ರಾಮೀಣ ಭಾಗಗಳಲ್ಲಿ ಅನುಮಾನಾಸ್ಪದ ಚಲನವಲನಕ್ಕೆ ಪೊಲೀಸ್ ಹದ್ದಿನಕಣ್ಣು

ಮುರುಡೇಶ್ವರ ಸುತ್ತಮುತ್ತ ರಾತ್ರಿ ಗಸ್ತು ಚುರುಕು; ಮನೆಮನೆಗೆ ಭೇಟಿ ನೀಡಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ ಬೀಟ್ ಪೊಲೀಸರು

ಭಟ್ಕಳ (ಉತ್ತರ ಕನ್ನಡ): ಮುರುಡೇಶ್ವರ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ಅಪರಿಚಿತ ವ್ಯಕ್ತಿಗಳ ಸಂಚಾರದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಪೊಲೀಸ್ ಇಲಾಖೆ, ಮುಂಜಾಗ್ರತಾ ಕ್ರಮವಾಗಿ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಿಗಿಗೊಳಿಸಿದೆ. ಗ್ರಾಮಗಳಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಪೊಲೀಸರು ಮನೆಮನೆಗೆ ಹಾಗೂ ಆಯಕಟ್ಟಿನ ಪ್ರದೇಶಗಳಿಗೆ ಭೇಟಿ ನೀಡಿ ಸ್ಥಳೀಯರಿಂದ ಮಾಹಿತಿ ಕಲೆಹಾಕುತ್ತಿದ್ದಾರೆ.

ಕೈಕಿಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆರಾಡಿ, ಕೈಕಿಣಿ, ಬಸ್ತಿ, ತೆರ್ನಮಕ್ಕಿ, ಅಗ್ಲಹೊಳೆ, ದೇವಿಕಾನ್, ಸಬಾತಿ, ಕಟಗೇರಿ, ಕುಂಬಾರಕೇರಿ ಹಾಗೂ ಕೋಟದಮಕ್ಕಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಪೊಲೀಸ್ ಸಿಬ್ಬಂದಿ ಸಂಚರಿಸಿ ಸಾರ್ವಜನಿಕರೊಂದಿಗೆ ಸಮಾಲೋಚನೆ ನಡೆಸಿದ್ದಾರೆ.

ಬೀಟ್ ಸಿಬ್ಬಂದಿ ಸಂಪರ್ಕ ಸಂಖ್ಯೆ ಹಂಚಿಕೆ: ಗ್ರಾಮಗಳಲ್ಲಿ ಅಪರಿಚಿತರ ಓಡಾಟ, ಹೊಸ ವ್ಯಕ್ತಿಗಳ ಅನುಮಾನಾಸ್ಪದ ವರ್ತನೆ ಹಾಗೂ ರಾತ್ರಿ ವೇಳೆಯ ಅನಗತ್ಯ ಸಂಚಾರದ ಕುರಿತು ನಿಗಾ ಇರಿಸುವಂತೆ ನಿವಾಸಿಗಳಿಗೆ ಸೂಚಿಸಲಾಗಿದೆ. ತುರ್ತು ಸಂದರ್ಭಗಳಲ್ಲಿ ತಕ್ಷಣವೇ ಪೊಲೀಸರನ್ನು ಸಂಪರ್ಕಿಸಲು ಅನುಕೂಲವಾಗುವಂತೆ ಬೀಟ್ ಸಿಬ್ಬಂದಿಗಳ ಮೊಬೈಲ್ ಸಂಖ್ಯೆಗಳು, ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ ಹಾಗೂ ಅಧಿಕಾರಿಗಳ ಸಂಪರ್ಕ ವಿವರಗಳನ್ನು ಸಾರ್ವಜನಿಕರಿಗೆ ನೀಡಲಾಗಿದೆ.

ಇದರ ಜೊತೆಗೆ, ಗ್ರಾಮೀಣ ಭಾಗಗಳಲ್ಲಿ ರಾತ್ರಿ ಗಸ್ತು ವ್ಯವಸ್ಥೆಯನ್ನು ತೀವ್ರಗೊಳಿಸಲಾಗಿದ್ದು, ಸೂಕ್ಷ್ಮ ಪ್ರದೇಶಗಳಲ್ಲಿ ನಿರಂತರ ನಿಗಾ ಇರಿಸಲಾಗಿದೆ. “ಸಾರ್ವಜನಿಕರು ಯಾವುದೇ ವದಂತಿಗಳಿಗೆ ಕಿವಿಗೊಡದೆ, ಅನುಮಾನಾಸ್ಪದ ವ್ಯಕ್ತಿಗಳು ಅಥವಾ ಚಟುವಟಿಕೆಗಳು ಕಂಡುಬಂದರೆ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಬೇಕು” ಎಂದು ಇಲಾಖೆ ಮನವಿ ಮಾಡಿದೆ.

ಗ್ರಾಮಗಳ ಶಾಂತಿ, ಸಾರ್ವಜನಿಕರ ಸುರಕ್ಷತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಪೊಲೀಸ್ ಇಲಾಖೆಯು ಈ ವಿಶೇಷ ಮುನ್ನೆಚ್ಚರಿಕಾ ಕಾರ್ಯಾಚರಣೆಯನ್ನು ಮುಂದುವರಿಸಿದೆ.

About The Author

error: Content is protected !!