November 22, 2026

ಕೃಷಿ ಭೂಮಿ ಸಮತಟ್ಟು ನೆಪದಲ್ಲಿ ಅಕ್ರಮ ಮಣ್ಣು ಗಣಿಗಾರಿಕೆ ಆರೋಪ; ಕರಗುತ್ತಿದೆ ಗುಡ್ಡ!

ಮಾವಿನಕುರ್ವೆಯ ಗೊಂಡರಕೇರಿಯಲ್ಲಿ ಅರಣ್ಯ ಬೇಲಿ ನಾಶಪಡಿಸಿ ಮಣ್ಣು ಸಾಗಾಟ; 200ಕ್ಕೂ ಹೆಚ್ಚು ಕುಟುಂಬಗಳಿಗೆ ಭೂಕುಸಿತದ ಭೀತಿ

ಭಟ್ಕಳ (ಉತ್ತರ ಕನ್ನಡ): ಕೃಷಿ ಭೂಮಿಯನ್ನು ಸಮತಟ್ಟು ಮಾಡುವ ನೆಪದಲ್ಲಿ ಖಾಸಗಿ ಜಮೀನಿನಲ್ಲಿ ನಡೆಯುತ್ತಿರುವ ಅವೈಜ್ಞಾನಿಕ ಮಣ್ಣಿನ ಅಗೆಯುವಿಕೆ ಹಾಗೂ ವಾಣಿಜ್ಯ ಸಾಗಾಟದಿಂದಾಗಿ ಗುಡ್ಡದ ಸ್ವರೂಪವೇ ಬದಲಾಗುತ್ತಿದ್ದು, ಸುತ್ತಮುತ್ತಲಿನ ನಿವಾಸಿಗಳು ತೀವ್ರ ಆತಂಕಕ್ಕೊಳಗಾಗಿದ್ದಾರೆ.

ತಾಲೂಕಿನ ಮಾವಿನಕುರ್ವೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೊಂಡರಕೇರಿಯಲ್ಲಿ ಖಾಸಗಿ ಜಮೀನಿನ ಮಾಲಕರು ನಡೆಸುತ್ತಿರುವ ಮಣ್ಣಿನ ಅಗೆಯುವಿಕೆಯಿಂದ ಸಾರ್ವಜನಿಕರಿಗೆ ಹಲವು ಸಮಸ್ಯೆಗಳು ಎದುರಾಗಿವೆ. ಈ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಜಮಾಯಿಸಿದ ಗ್ರಾಮಸ್ಥರು ಸಂಬಂಧಪಟ್ಟ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಅರಣ್ಯ ಇಲಾಖೆ ನಿಯಮ ಉಲ್ಲಂಘನೆ ಆರೋಪ: ಅರಣ್ಯ ಇಲಾಖೆಯ ಅನುಮತಿ ಪಡೆಯದೆ ಗುಡ್ಡದ ಮೇಲ್ಭಾಗದಲ್ಲಿ ಅಕ್ರಮವಾಗಿ ರಸ್ತೆ ನಿರ್ಮಿಸಲಾಗಿದ್ದು, ಇಲಾಖೆ ಅಳವಡಿಸಿದ್ದ ಬೇಲಿಯನ್ನೂ ನಾಶಪಡಿಸಲಾಗಿದೆ ಎಂದು ಸ್ಥಳೀಯರು ದೂರಿದ್ದಾರೆ. ಅಲ್ಲದೆ, ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಂತೆ ಬೋರ್‌ವೆಲ್ ಕೊರೆಸಲಾಗಿದ್ದು, ಸಾರ್ವಜನಿಕ ರಸ್ತೆಯ ಪಕ್ಕದಲ್ಲಿದ್ದ ಚರಂಡಿಯನ್ನೂ ಖಾಸಗಿ ಹಿತಾಸಕ್ತಿಗಾಗಿ ಸಂಪೂರ್ಣವಾಗಿ ಮುಚ್ಚಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಗುಡ್ಡವನ್ನು ಸುಮಾರು 30ರಿಂದ 40 ಅಡಿಗಳಷ್ಟು ಲಂಬವಾಗಿ ಅಗೆದು, ವಾಣಿಜ್ಯ ಉದ್ದೇಶಕ್ಕಾಗಿ ಮಣ್ಣನ್ನು ಬೇರೆಡೆಗೆ ಸಾಗಿಸಲಾಗುತ್ತಿದೆ. ಮಳೆಗಾಲದಲ್ಲಿ ಈಗಾಗಲೇ ಸಣ್ಣಪುಟ್ಟ ಭೂಕುಸಿತಗಳು ಸಂಭವಿಸುತ್ತಿದ್ದು, ಮುಂದಿನ ದಿನಗಳಲ್ಲಿ ಗುಡ್ಡ ಕುಸಿದರೆ ಅದರ ತಪ್ಪಲಿನಲ್ಲಿ ವಾಸಿಸುತ್ತಿರುವ ಸುಮಾರು 200ಕ್ಕೂ ಹೆಚ್ಚು ಕುಟುಂಬಗಳ ಪ್ರಾಣಕ್ಕೆ ಅಪಾಯ ಎದುರಾಗಬಹುದು ಎಂಬ ಭೀತಿ ಆವರಿಸಿದೆ.

ಕೃಷಿ ಗದ್ದೆ, ಜಲಮೂಲಗಳಿಗೆ ಕಂಟಕ: ಗುಡ್ಡದ ಕೆಳಭಾಗದಲ್ಲಿ ಭತ್ತ ಬೆಳೆಯುವ ಫಲವತ್ತಾದ ಕೃಷಿ ಗದ್ದೆಗಳು, ಸಾರ್ವಜನಿಕ ಕೆರೆಗಳು ಹಾಗೂ ತೋಡುಗಳಿವೆ. ಗುಡ್ಡ ಅಗೆದಿರುವುದರಿಂದ ಜೇಡಿ ಮಣ್ಣು ಮಳೆನೀರಿನೊಂದಿಗೆ ಕೊಚ್ಚಿಕೊಂಡು ಬಂದು ಗದ್ದೆಗಳಿಗೆ ಸೇರುತ್ತಿದ್ದು, ಭೂಮಿ ಕೃಷಿಗೆ ಅಯೋಗ್ಯವಾಗುತ್ತಿದೆ. ಇದಲ್ಲದೆ, ಕೆರೆಗಳು ಹೂಳು ತುಂಬಿ ಮುಚ್ಚಿಹೋಗುವ ಆತಂಕವೂ ಎದುರಾಗಿದ್ದು, ಭವಿಷ್ಯದಲ್ಲಿ ಅಂತರ್ಜಲ ಮಟ್ಟ ಕುಸಿಯುವ ಸಾಧ್ಯತೆಯಿದೆ ಎಂದು ಗ್ರಾಮಸ್ಥರು ಕಳವಳ ವ್ಯಕ್ತಪಡಿಸಿದ್ದಾರೆ.

ಕೃಷಿ ಭೂಮಿ ಸಮತಟ್ಟು ಮಾಡುವ ಹೆಸರಿನಲ್ಲಿ ನಡೆಯುತ್ತಿರುವ ಈ ಗಣಿಗಾರಿಕೆಗೆ ಕಂದಾಯ ಹಾಗೂ ಅರಣ್ಯ ಇಲಾಖೆಯಿಂದ ಅಗತ್ಯ ಅನುಮತಿ ಪಡೆಯಲಾಗಿದೆಯೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಉದ್ಭವಿಸಿದೆ. ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ತಕ್ಷಣವೇ ಸ್ಥಳ ಪರಿಶೀಲನೆ ನಡೆಸಿ, ಕಾಮಗಾರಿಯ ಕಾನೂನುಬದ್ಧತೆ ಹಾಗೂ ಪರಿಸರದ ಮೇಲಿನ ಪರಿಣಾಮದ ಕುರಿತು ಸಮಗ್ರ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

About The Author

error: Content is protected !!