ಮುಖ್ಯಮಂತ್ರಿ ಚಿನ್ನದ ಪದಕ ಪುರಸ್ಕೃತ ಪಿಎಸ್‌ಐ ನವೀನ ನಾಯ್ಕ ಹಾಗೂ ಮಾತಾ ಗ್ರಂಥಾಲಯದ ವಸಂತ ಭಟ್ ಅವರಿಗೆ ಸನ್ಮಾನ
ಭಟ್ಕಳ (ಉತ್ತರ ಕನ್ನಡ): “ಸಾಧನೆ ಎಂಬುದು ಕೇವಲ ಪ್ರಶಸ್ತಿಗಳಿಗೆ ಸೀಮಿತವಾಗದೆ, ಸಮಾಜಕ್ಕೆ ನೀಡಿದ ಕೊಡುಗೆಯ ಮೂಲಕ ಗುರುತಿಸಿಕೊಳ್ಳಬೇಕು” ಎಂಬ ಆಶಯದೊಂದಿಗೆ ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಭಟ್ಕಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ರಾಜ್ಯೋತ್ಸವ ಮಾಸದ ಅಂಗವಾಗಿ ಹಮ್ಮಿಕೊಂಡಿದ್ದ ‘ಸಾಧಕರೆಡೆಗೆ ಸಾಹಿತ್ಯ ಪರಿಷತ್ತು’ ಕಾರ್ಯಕ್ರಮ ಅತ್ಯಂತ ಅರ್ಥಪೂರ್ಣವಾಗಿ ನೆರವೇರಿತು.

ಕಾರ್ಯಕ್ರಮದ ಅಂಗವಾಗಿ ಮುಖ್ಯಮಂತ್ರಿ ಚಿನ್ನದ ಪದಕ ಪುರಸ್ಕೃತ ಭಟ್ಕಳ ಶಹರ ಪೊಲೀಸ್ ಠಾಣೆಯ ಪಿಎಸ್‌ಐ ನವೀನ ನಾಯ್ಕ ಅವರನ್ನು ಪೊಲೀಸ್ ಠಾಣೆಯಲ್ಲಿ ಹಾಗೂ ಓದುವ ಸಂಸ್ಕೃತಿಯ ಬೆಳವಣಿಗೆಗೆ ಶ್ರಮಿಸುತ್ತಿರುವ ಮಾತಾ ಗ್ರಂಥಾಲಯದ ಗ್ರಂಥಪಾಲಕ ವಸಂತ ಭಟ್ ಅವರನ್ನು ಕಡವಿನಕಟ್ಟೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆವರಣದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಪೊಲೀಸ್ ಸಿಬ್ಬಂದಿಗೆ ಓದಿನ ಹವ್ಯಾಸ ಅಗತ್ಯ – ಪಿಎಸ್‌ಐ ನವೀನ ನಾಯ್ಕ: ಸನ್ಮಾನ ಸ್ವೀಕರಿಸಿ ಮಾತನಾಡಿದ ಪಿಎಸ್‌ಐ ನವೀನ ನಾಯ್ಕ, “ಮುಖ್ಯಮಂತ್ರಿ ಚಿನ್ನದ ಪದಕ ಪಡೆದ ನನ್ನನ್ನು ಕನ್ನಡ ಸಾಹಿತ್ಯ ಪರಿಷತ್ತು ಗುರುತಿಸಿ ಗೌರವಿಸಿರುವುದು ಅತೀವ ಸಂತಸ ತಂದಿದೆ. ಪೊಲೀಸ್ ಇಲಾಖೆಯ ಒತ್ತಡದ ಕರ್ತವ್ಯಗಳ ನಡುವೆ ಸಾಹಿತ್ಯದ ಓದು ಜ್ಞಾನವೃದ್ಧಿ, ಮನೋಬಲ ಹಾಗೂ ಮಾನಸಿಕ ನೆಮ್ಮದಿಗೆ ಸಹಕಾರಿಯಾಗಿದೆ. ಇಲಾಖೆಯ ಸಿಬ್ಬಂದಿ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ಇನ್ನಷ್ಟು ಸಾಹಿತ್ಯಿಕ ಕಾರ್ಯಕ್ರಮಗಳು ನಡೆಯುವಂತಾಗಲಿ” ಎಂದು ಆಶಿಸಿದರು.
ಮಾತಾ ಗ್ರಂಥಾಲಯದ ಗ್ರಂಥಪಾಲಕ ವಸಂತ ಭಟ್ ಮಾತನಾಡಿ, “ಪುಸ್ತಕ ಓದುವ ಹವ್ಯಾಸ ಮನುಷ್ಯನಲ್ಲಿ ಕಲ್ಪನಾಶಕ್ತಿ, ವೈಚಾರಿಕತೆ ಹಾಗೂ ಚಿಂತನಾ ಸಾಮರ್ಥ್ಯವನ್ನು ಬೆಳೆಸುತ್ತದೆ. ಸಾಹಿತ್ಯ ಪರಿಷತ್ತು ಹುಡುಕಿಕೊಂಡು ಬಂದು ಅನಿರೀಕ್ಷಿತವಾಗಿ ಸನ್ಮಾನಿಸಿರುವುದು ಸಂತಸ ತಂದಿದ್ದು, ಪರಿಷತ್ತು ತೋರಿದ ಗೌರವಕ್ಕೆ ಸದಾ ಋಣಿಯಾಗಿರುತ್ತೇನೆ” ಎಂದು ಭಾವುಕರಾಗಿ ನುಡಿದರು.
ಸಮಾಜಕ್ಕೆ ಸಾಹಿತ್ಯ ಹಾಗೂ ಪೊಲೀಸ್ ಇಲಾಖೆ ಎರಡೂ ಮುಖ್ಯ: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಸಾಪ ತಾಲೂಕು ಅಧ್ಯಕ್ಷ ಗಂಗಾಧರ ನಾಯ್ಕ ಮಾತನಾಡಿ, “ಸಮಾಜವನ್ನು ಸುಸಂಸ್ಕೃತಗೊಳಿಸುವಲ್ಲಿ ಸಾಹಿತ್ಯ ಎಷ್ಟು ಮಹತ್ವದ ಪಾತ್ರ ವಹಿಸುತ್ತದೆಯೋ, ಶಾಂತಿ ಮತ್ತು ಸುರಕ್ಷತೆ ಕಾಪಾಡುವಲ್ಲಿ ಪೊಲೀಸ್ ಇಲಾಖೆಯೂ ಅಷ್ಟೇ ಮಹತ್ವದ ಜವಾಬ್ದಾರಿ ನಿರ್ವಹಿಸುತ್ತದೆ. ನವೀನ ನಾಯ್ಕ ಅವರ ಸಾಧನೆ ಇಡೀ ತಾಲೂಕಿಗೆ ಹೆಮ್ಮೆಯ ಸಂಗತಿಯಾಗಿದೆ. ಅದೇ ರೀತಿ ಮಾತಾ ಗ್ರಂಥಾಲಯ ಸ್ಥಾಪಿಸಿ ಓದುವ ಸಂಸ್ಕೃತಿ ಬೆಳೆಸುತ್ತಿರುವ ವಸಂತ ಭಟ್ ಅವರ ಸೇವೆ ಶ್ಲಾಘನೀಯ” ಎಂದರು.
ಯಂಡಮೂರಿ ವೀರೇಂದ್ರನಾಥ್ ದೂರವಾಣಿ ಮೂಲಕ ಶುಭಾಶಯ: ಇದೇ ಸಂದರ್ಭದಲ್ಲಿ ತೆಲುಗಿನ ಖ್ಯಾತ ಕಾದಂಬರಿಕಾರ ಯಂಡಮೂರಿ ವೀರೇಂದ್ರನಾಥ್ ಅವರು ದೂರವಾಣಿ ಮೂಲಕ ಸಂಪರ್ಕಿಸಿ ವಸಂತ ಭಟ್ ಅವರಿಗೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಈ ವಿನೂತನ ಅಭಿಯಾನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದರು. ಮಾನಾಸುತ ಶಂಭು ಹೆಗಡೆ ಅವರು ಕವಿತೆಯ ಮೂಲಕ ಸಾಧಕರನ್ನು ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ದಿವಾಕರ ಪಿ.ಎಂ., ಪಿಎಸ್‌ಐ ತಿಮ್ಮಪ್ಪ, ರವಿ ಗಾಂಜೆಕರ್, ಪ್ರೊಬೇಷನರಿ ಪಿಎಸ್‌ಐ ಬಸವರಾಜ್, ಪೊಲೀಸ್ ಸಿಬ್ಬಂದಿಗಳಾದ ಮಂಜುನಾಥ್ ಯಲ್ವಡಿಕವೂರು, ಶ್ರೀಧರ್ ತಾಂಡೆಲ್, ಮಲ್ಲಿಕಾರ್ಜುನ, ಕಸಾಪ ಸಂಘಟನಾ ಕಾರ್ಯದರ್ಶಿ ಸಂತೋಷ್ ಆಚಾರ್ಯ, ಕಾರ್ಯಕಾರಿ ಸಮಿತಿ ಸದಸ್ಯರಾದ ಎಂ.ಪಿ. ಬಂಡಾರಿ, ಪೂರ್ಣಿಮಾ ಕರ್ಕಿಕರ್ ಹಾಗೂ ದೀಪಕ ನಾಯ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಸಾಹಿತಿ ಹಾಗೂ ಕಸಾಪ ಗೌರವ ಕೋಶಾಧ್ಯಕ್ಷ ಶ್ರೀಧರ ಶೇಟ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

More Stories
ವಲಯ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ವಿದ್ಯಾಭಾರತಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳ ಮಿಂಚು
ಜಾಲಿಯಲ್ಲಿ ಬೆಳಕೆ ವಲಯ ಮಟ್ಟದ ಪ್ರತಿಭಾ ಕಾರಂಜಿ ಸಂಭ್ರಮ
ನ್ಯಾಯಾಲಯದ ವಾರಂಟ್ ಜಾರಿಗೊಳಿಸಲು ತೆರಳಿದ್ದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಆರೋಪಿ ಪರಾರಿ!