November 26, 2026

ಅಪರಿಚಿತ ವಾಹನ ಡಿಕ್ಕಿ; ರಸ್ತೆ ದಾಟುತ್ತಿದ್ದ ಹೆಣ್ಣು ಚಿರತೆ ಸ್ಥಳದಲ್ಲೇ ಸಾವು

ಸರ್ಪನಕಟ್ಟೆ–ಹುಯ್ಲಮಡಿ ರಸ್ತೆಯಲ್ಲಿ ಮಂಗಳವಾರ ಮುಂಜಾನೆ ಘಟನೆ; ಒಂದೂವರೆ ವರ್ಷದ ಚಿರತೆ ಬಲಿ, ಅರಣ್ಯಾಧಿಕಾರಿಗಳಿಂದ ಸ್ಥಳ ಪರಿಶೀಲನೆ

ಭಟ್ಕಳ (ಉತ್ತರ ಕನ್ನಡ): ರಸ್ತೆ ದಾಟುತ್ತಿದ್ದ ಹೆಣ್ಣು ಚಿರತೆಯೊಂದಕ್ಕೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಚಿರತೆ ಸ್ಥಳದಲ್ಲೇ ಮೃತಪಟ್ಟ ಘಟನೆ ಮಂಗಳವಾರ ಮುಂಜಾನೆ ತಾಲೂಕಿನ ಸರ್ಪನಕಟ್ಟೆ ಸಮೀಪದ ಹುಯ್ಲಮಡಿ ರಸ್ತೆಯಲ್ಲಿ ಸಂಭವಿಸಿದೆ.

ಸರ್ಪನಕಟ್ಟೆಯ ವಾಟರ್ ಫ್ಯಾಕ್ಟರಿ ಬಳಿ ಚಿರತೆಯೊಂದು ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ ವೇಗವಾಗಿ ಬಂದ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಗಂಭೀರವಾಗಿ ಗಾಯಗೊಂಡ ಚಿರತೆ ರಸ್ತೆಯಲ್ಲೇ ಕೊನೆಯುಸಿರೆಳೆದಿದೆ. ಅಪಘಾತದ ಬಳಿಕ ಚಾಲಕ ವಾಹನ ಸಮೇತ ಸ್ಥಳದಿಂದ ಪರಾರಿಯಾಗಿದ್ದು, ವಾಹನದ ಗುರುತು ಇನ್ನೂ ಪತ್ತೆಯಾಗಿಲ್ಲ.

ಮೃತಪಟ್ಟಿರುವುದು ಸುಮಾರು ಒಂದೂವರೆ ವರ್ಷದಿಂದ ಎರಡು ವರ್ಷದೊಳಗಿನ ಹೆಣ್ಣು ಚಿರತೆ ಎಂದು ಅಂದಾಜಿಸಲಾಗಿದೆ. ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ, ಮೃತದೇಹವನ್ನು ವಶಕ್ಕೆ ಪಡೆದಿದ್ದಾರೆ. ಮರಣೋತ್ತರ ಪರೀಕ್ಷೆಯ ಬಳಿಕ ಸಾವಿನ ಕುರಿತು ನಿಖರ ಮಾಹಿತಿ ಲಭ್ಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸ್ಥಳಕ್ಕೆ ಎಸಿಎಫ್ ಹಸ್ತಾ ಶೆಟ್ಟಿ, ಆರ್‌ಎಫ್‌ಒ ವಿಶ್ವನಾಥ, ಕುಂದಾಪುರ ರೀಫ್ ವಾಚ್ (ReefWatch) ಎನ್‌ಜಿಒ ಸಂಸ್ಥೆಯ ಡಾ. ಹಸೀಫ್ ಹಾಗೂ ಬೆಂಗ್ರೆ ಪಶು ಆಸ್ಪತ್ರೆಯ ಪಶುವೈದ್ಯ ಡಾ. ರಿಜ್ವಾನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನೆಗೆ ಸಂಬಂಧಿಸಿದಂತೆ ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವನ್ಯಜೀವಿಗಳ ಸಂಚಾರ ಪ್ರದೇಶದಲ್ಲಿ ವೇಗಕ್ಕೆ ಕಡಿವಾಣ ಅಗತ್ಯ: ಸರ್ಪನಕಟ್ಟೆ ಹಾಗೂ ಸುತ್ತಮುತ್ತಲಿನ ಅರಣ್ಯ ಪ್ರದೇಶಗಳಲ್ಲಿ ಕಾಡುಪ್ರಾಣಿಗಳು ಆಗಾಗ ರಸ್ತೆ ದಾಟುತ್ತಿರುವುದು ಕಂಡುಬರುತ್ತಿದೆ. ಅದರಲ್ಲೂ ರಾತ್ರಿ ಮತ್ತು ಮುಂಜಾನೆಯ ಸಮಯದಲ್ಲಿ ವಾಹನಗಳ ಅತಿವೇಗದ ಸಂಚಾರದಿಂದ ವನ್ಯಜೀವಿಗಳ ಜೀವಕ್ಕೆ ಸಂಚಕಾರ ಎದುರಾಗುತ್ತಿದೆ. ಇಂತಹ ದುರ್ಘಟನೆಗಳು ಮರುಕಳಿಸದಂತೆ ಅರಣ್ಯ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ವನ್ಯಜೀವಿಗಳ ಸಂಚಾರವಿರುವ ಸ್ಥಳಗಳಲ್ಲಿ ಎಚ್ಚರಿಕೆ ಸೂಚನಾ ಫಲಕಗಳನ್ನು ಅಳವಡಿಸಿ, ವಾಹನಗಳ ವೇಗ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

About The Author

error: Content is protected !!