ಹಲ್ಲೆ ಹಾಗೂ ಲಕ್ಷಾಂತರ ರೂ. ಮೌಲ್ಯದ ಮೀನು ವಶಕ್ಕೆ; ನೆರೆಯ ರಾಜ್ಯಗಳೊಂದಿಗೆ ಮಾತುಕತೆ ನಡೆಸಿ ರಕ್ಷಣೆ ಕಲ್ಪಿಸಲು ಗಣೇಶ ಮೊಗೇರ ಒತ್ತಾಯ
ಭಟ್ಕಳ (ಉತ್ತರ ಕನ್ನಡ): ಜೀವನೋಪಾಯಕ್ಕಾಗಿ ಗೋವಾ ಮತ್ತು ಮಹಾರಾಷ್ಟ್ರದ ಕರಾವಳಿ ಪ್ರದೇಶಗಳಿಗೆ ಮೀನುಗಾರಿಕೆಗೆ ತೆರಳುವ ಕರ್ನಾಟಕದ ಮೀನುಗಾರರಿಗೆ ನಿರಂತರವಾಗಿ ಕಿರುಕುಳ ನೀಡುವುದು, ಹಲ್ಲೆ ನಡೆಸುವುದು ಹಾಗೂ ಲಕ್ಷಾಂತರ ರೂಪಾಯಿ ಮೌಲ್ಯದ ಮೀನುಗಳನ್ನು ವಶಪಡಿಸಿಕೊಳ್ಳುತ್ತಿರುವ ಘಟನೆಗಳು ತೀವ್ರ ಆತಂಕಕ್ಕೆ ಕಾರಣವಾಗಿವೆ ಎಂದು ದಲಿತ ಸಂಘರ್ಷ ಸಮಿತಿಯ (ಡಿಎಸ್ಎಸ್) ಜಿಲ್ಲಾ ಸಂಚಾಲಕ ಗಣೇಶ ಮೊಗೇರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, “ಕರ್ನಾಟಕದ ಮೀನುಗಾರರು ಸಮುದ್ರದಲ್ಲಿ ಮೀನುಗಾರಿಕೆ ನಡೆಸುವ ವೇಳೆ ಅನಗತ್ಯವಾಗಿ ಅಡ್ಡಿಪಡಿಸಲಾಗುತ್ತಿದೆ. 10-15 ದಿನಗಳ ಕಾಲ ಸಮುದ್ರದ ಅಲೆಗಳ ನಡುವೆ ಜೀವದ ಹಂಗು ತೊರೆದು ಶ್ರಮಪಟ್ಟು ಮೀನು ಹಿಡಿದು ದಡಕ್ಕೆ ಮರಳುವ ಸಂದರ್ಭದಲ್ಲಿ ಇಂತಹ ಕಿರುಕುಳ ಎದುರಾಗುತ್ತಿರುವುದು ಮೀನುಗಾರರ ಪಾಲಿಗೆ ದೊಡ್ಡ ಆಘಾತವಾಗಿದೆ. ಇದರಿಂದ ಬಡ ಮೀನುಗಾರ ಕುಟುಂಬಗಳು ಭಾರೀ ಆರ್ಥಿಕ ನಷ್ಟ ಅನುಭವಿಸುವಂತಾಗಿದೆ” ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಬಡ ಕುಟುಂಬಗಳಿಗೆ ಗಾಯದ ಮೇಲೆ ಬರೆ: “ಮೀನುಗಾರಿಕೆಯನ್ನು ಮುಖ್ಯ ಜೀವನಾಧಾರವನ್ನಾಗಿಸಿಕೊಂಡಿರುವವರಲ್ಲಿ ಬಹುತೇಕರು ಪರಿಶಿಷ್ಟ ಜಾತಿಗೆ ಸೇರಿದ ಮೊಗೇರ ಸಮುದಾಯದವರಾಗಿದ್ದಾರೆ. ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದಿರುವ ಈ ಕುಟುಂಬಗಳು ಕಷ್ಟಪಟ್ಟು ದುಡಿದು ಜೀವನ ಸಾಗಿಸುತ್ತಿವೆ. ಈಗಾಗಲೇ ಹಲವು ಸಂಕಷ್ಟಗಳನ್ನು ಎದುರಿಸುತ್ತಿರುವ ಬಡ ಮೀನುಗಾರರಿಗೆ ನೆರೆಯ ರಾಜ್ಯಗಳಲ್ಲಿನ ಈ ದೌರ್ಜನ್ಯವು ಗಾಯದ ಮೇಲೆ ಬರೆ ಎಳೆದಂತಾಗಿದೆ” ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಉನ್ನತ ಮಟ್ಟದ ಮಾತುಕತೆಗೆ ಒತ್ತಾಯ: “ಮೀನುಗಾರಿಕೆಗೆ ಸಂಬಂಧಿಸಿದಂತೆ ಯಾವುದೇ ನಿಯಮ ಉಲ್ಲಂಘನೆಯಾಗಿದ್ದರೆ ಕಾನೂನುಬದ್ಧವಾಗಿ ಕ್ರಮ ಕೈಗೊಳ್ಳುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ, ಕಾನೂನಿನ ಹೆಸರಿನಲ್ಲಿ ಮೀನುಗಾರರಿಗೆ ಕಿರುಕುಳ ನೀಡುವುದು, ಹಲ್ಲೆ ನಡೆಸುವುದು ಹಾಗೂ ಅವರ ಪರಿಶ್ರಮದ ಫಲವಾದ ಮೀನುಗಳನ್ನು ವಶಪಡಿಸಿಕೊಳ್ಳುವುದು ಯಾವುದೇ ಕಾರಣಕ್ಕೂ ಸಮರ್ಥನೀಯವಲ್ಲ” ಎಂದು ಗಣೇಶ ಮೊಗೇರ ಸ್ಪಷ್ಟಪಡಿಸಿದ್ದಾರೆ.
ರಾಜ್ಯ ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು. ಮೀನುಗಾರಿಕೆ ಸಚಿವರು ಕೂಡಲೇ ಮಧ್ಯಪ್ರವೇಶಿಸಿ ಗೋವಾ ಮತ್ತು ಮಹಾರಾಷ್ಟ್ರ ಸರ್ಕಾರಗಳೊಂದಿಗೆ ಉನ್ನತ ಮಟ್ಟದ ಮಾತುಕತೆ ನಡೆಸಬೇಕು. ನೆರೆಯ ರಾಜ್ಯಗಳ ಕರಾವಳಿ ಪ್ರದೇಶಗಳಲ್ಲಿ ಕರ್ನಾಟಕದ ಮೀನುಗಾರರಿಗೆ ಸೂಕ್ತ ರಕ್ಷಣೆ ಹಾಗೂ ಭದ್ರತೆ ಕಲ್ಪಿಸುವುದರ ಜೊತೆಗೆ, ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

More Stories
ಭಟ್ಕಳ: ಕಂದಾಯ ನೌಕರರ ಸಂಘದ ತಾಲೂಕು ಶಾಖೆಗೆ ನೂತನ ಪದಾಧಿಕಾರಿಗಳ ಆಯ್ಕೆ
ಶಿರಾಲಿ ಮೂಲದ ಡಾ. ಸಚಿನ್ ಸದಾಶಿವ ಭಟ್ಟ ಅವರಿಗೆ ಪ್ರತಿಷ್ಠಿತ ‘ಎಲಿವೇಟ್-2026’ ಪ್ರಶಸ್ತಿ
ಶ್ರೀ ರಾಮಚಂದ್ರಾಪುರ ಮಠದ ‘ಗೋ ಸಮ್ಮಾನ ರಥ ಯಾತ್ರೆ’ಗೆ ಭವ್ಯ ಸ್ವಾಗತ