ಭಟ್ಕಳ: ಯೋನೊ ಆಪ್ ದುರ್ಬಳಕೆ—ಮೊಬೈಲ್ ಹ್ಯಾಕ್ ಮೂಲಕ ₹8 ಲಕ್ಷ ಸಾಲ ವಂಚನೆ

ಭಟ್ಕಳ ತಾಲೂಕಿನ ಸರ್ಕಾರಿ ಇಲಾಖೆಯೊಂದರಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರನೊಬ್ಬರ ಮೊಬೈಲ್ ಫೋನ್ ಹ್ಯಾಕ್ ಮಾಡಿ, State Bank of India ಯ ಯೋನೊ ಆಪ್ ಮೂಲಕ ₹8 ಲಕ್ಷ ಪ್ರೀ–ಅಪ್ರೂವ್ಡ್ ಪರ್ಸನಲ್ ಲೋನ್ ಮಂಜೂರು ಮಾಡಿಕೊಂಡು, ಹಣವನ್ನು ಬೇರೆ ಖಾತೆಗಳಿಗೆ ವರ್ಗಾಯಿಸಿಕೊಂಡಿರುವ ಹೊಸ ಮಾದರಿಯ ವಂಚನೆ ಪ್ರಕರಣ ಭಟ್ಕಳ ದಲ್ಲಿ ಬೆಳಕಿಗೆ ಬಂದಿದೆ.
ಈ ಘಟನೆ ಜಿಲ್ಲೆಯಾದ್ಯಂತ ಡಿಜಿಟಲ್ ಬ್ಯಾಂಕಿಂಗ್ ಬಳಕೆದಾರರಲ್ಲಿ ಆತಂಕ ಮೂಡಿಸಿದೆ.
ಎಸ್‌ಬಿಐ ಭಟ್ಕಳ ಶಾಖೆಗೆ ತೆರಳಿದ್ದ ನೌಕರನಿಗೆ ಪಿಎಪಿಎಲ್ ಮೂಲಕ ₹8 ಲಕ್ಷ ಸಾಲಕ್ಕೆ ಅರ್ಹತೆ ಇದೆ ಎಂಬ ಸಂದೇಶಗಳು ಬಂದಿದ್ದವು. ಪ್ರಕ್ರಿಯೆ ಬಗ್ಗೆ ಬ್ಯಾಂಕಿನಲ್ಲಿ ವಿಚಾರಿಸಿದರೂ ಆ ವೇಳೆ ಯೋನೊ ಆಪ್ ತೆರೆಯಲಾಗಿರಲಿಲ್ಲ. ಮನೆಗೆ ಹಿಂತಿರುಗಿದ ಕೆಲವೇ ಸಮಯದಲ್ಲಿ ಸಾಲ ಮಂಜೂರಾದ ಸಂದೇಶ ಬಂದಿದ್ದು, ಖಾತೆ ಪರಿಶೀಲಿಸಿದಾಗ ಯೋನೊ ಆಪ್ ಮೂಲಕ ₹8 ಲಕ್ಷ ಸಾಲ ತೆಗೆದುಕೊಳ್ಳಲಾಗಿದೆ ಎಂಬುದು ಗೊತ್ತಾಗಿದೆ. ನೌಕರನ ಹೇಳಿಕೆಯಂತೆ, ಯಾವುದೇ ಓಟಿಪಿ, ಡಿಜಿಟಲ್ ಅನುಮತಿ ಅಥವಾ ಸಹಿ ನೀಡಿಲ್ಲ. ಸಾಲ ಮೊತ್ತ ಕ್ಷಣಾರ್ಧದಲ್ಲಿ ಐದು ಬಾರಿ ಬೇರೆ ಖಾತೆಗಳಿಗೆ ವರ್ಗಾವಣೆಯಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ.
ಈ ಘಟನೆ ನಂತರ ನೌಕರ ಮಾನಸಿಕವಾಗಿ ಕುಗ್ಗಿದ್ದು, ಕುಟುಂಬದಲ್ಲೂ ಆತಂಕ ಮನೆಮಾಡಿದೆ. ಡಿಜಿಟಲ್ ಬ್ಯಾಂಕಿಂಗ್ ಬಳಕೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಗ್ರಾಹಕರ ಅನುಮತಿ ಇಲ್ಲದೆ ಆಪ್ ಮೂಲಕ ಸಾಲ ಮಂಜೂರು ಮಾಡಿ ಹಣ ಲೂಟಿ ಮಾಡುವಂತಹ ತಂತ್ರಗಳು ಸಾರ್ವಜನಿಕರಲ್ಲಿ ಚಿಂತೆ ಹೆಚ್ಚಿಸುತ್ತಿವೆ. ತಜ್ಞರು, ಡಿಜಿಟಲ್ ವೇದಿಕೆಗಳಲ್ಲಿ ಇನ್ನಷ್ಟು ಕಠಿಣ ಸುರಕ್ಷತಾ ನಿಯಂತ್ರಣ ಅಗತ್ಯವೆಂದು ಒತ್ತಾಯಿಸಿದ್ದಾರೆ.

“ಎಸ್‌ಬಿಐಯ ಯೋನೊ ಆಪ್ ಅತ್ಯಂತ ಸುರಕ್ಷಿತ. ಇಲ್ಲಿ ವಂಚನೆಯ ಮೂಲ ಕಾರಣ ಗ್ರಾಹಕರ ಮೊಬೈಲ್ ಹ್ಯಾಕ್ ಆಗಿರುವುದು. ಅರ್ಹರಿಗೆ ಪ್ರೀ–ಅಪ್ರೂವ್ಡ್ ಪರ್ಸನಲ್ ಲೋನ್ ಸೌಲಭ್ಯವಿದ್ದು, ಅದನ್ನು ದುರ್ಬಳಕೆ ಮಾಡಿಕೊಂಡು ಹ್ಯಾಕರ್‌ಗಳು ವಂಚಿಸಿದ್ದಾರೆ. ಈ ಖಾತೆಯಲ್ಲಿ ಹಿಂದೆ ಯುಪಿಐ ಮೂಲಕ ಸಣ್ಣ ಮೊತ್ತದ ವಂಚನೆಯೂ ನಡೆದಿತ್ತು; ಆಗಲೇ ಎಚ್ಚರಿಕೆ ಕ್ರಮ ಅಗತ್ಯವಿತ್ತು. ಸೋಮವಾರ ನಮ್ಮ ಗಮನಕ್ಕೆ ಬಂದಂತೆ ಖಾತೆಯನ್ನು ಹೋಲ್ಡ್‌ನಲ್ಲಿ ಇಡಲಾಗಿದೆ; ಉಳಿದ ಹಣ ಸುರಕ್ಷಿತವಾಗಿದೆ.”
— ಮಾನಸ ಭಟ್, ಮ್ಯಾನೇಜರ್, ಎಸ್‌ಬಿಐ ಭಟ್ಕಳ

More Stories
ಮಾರುಕೇರಿ ಹೂತ್ಕಳದ ಧನ್ವಂತರಿ ದೇವಾಲಯದಲ್ಲಿ ಜುಲೈ 25 ರಂದು ‘ಲಕ್ಷ ತುಳಸಿ ಅರ್ಚನೆ’ ಹಾಗೂ ‘ಸ್ವರ್ಣ ಪಾದುಕಾ ಭಿಕ್ಷೆ’
ಕಿತ್ರೆಯ ಶ್ರೀ ಕ್ಷೇತ್ರ ದೇವಿಮನೆಯಲ್ಲಿ ‘ಕೃಷ್ಣ ಯಜುರ್ವೇದ ಸ್ವಾಹಾಕಾರ’ ಧಾರ್ಮಿಕ ಮಹೋತ್ಸವ ಸಂಪನ್ನ
ಸಾಧಕ ಭಟ್ಕಳ ತಾಲೂಕು ಆಸ್ಪತ್ರೆ ವೈದ್ಯರು, ಸಿಬ್ಬಂದಿಗೆ ಆಟೋ ಚಾಲಕರ-ಮಾಲಕರ ಸಂಘದಿಂದ ಸನ್ಮಾನ