March 2, 2026

ಅಕ್ಕಿಹೆಬ್ಬಾಳು ಹೋಬಳಿಯ ಮೂಡನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ

ವಿದ್ಯಾರ್ಥಿಗಳು ಶಿಕ್ಷಣದ ಜ್ಞಾನದ ಬೆಳಕಿನ ಶಕ್ತಿಯ ಮೂಲಕ ಸಾಧನೆ ಮಾಡಬೇಕು ಎಂದು ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪೂರ್ಣಚಂದ್ರ ತೇಜಸ್ವಿ ಹೇಳಿದರು.

ಅವರು ಕೃಷ್ಣರಾಜಪೇಟೆ ತಾಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಮೂಡನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಸರ್ಕಾರಿ ಶಾಲೆಗಳು ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಗಳಿಗೆ ಕೇಳಿದ್ದನ್ನೆಲ್ಲ ನೀಡುವ ಕಾಮಧೇನು ಕಲ್ಪವೃಕ್ಷದಂತಿವೆ. ಶಾಲಾ ಸಮವಸ್ತ್ರ, ವಿದ್ಯಾರ್ಥಿ ವೇತನ, ಮಧ್ಯಾಹ್ನದ ಬಿಸಿಊಟ, ಶೈಕ್ಷಣಿಕ ಪ್ರವಾಸ ಸೇರಿದಂತೆ ವಿವಿಧ ಸೌಲಭ್ಯಗಳೊಂದಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿರುವ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಸರ್ವ ಶ್ರೇಷ್ಠ ಸಾಧನೆಯನ್ನು ಮಾಡಿ, ನಗರ ಪ್ರದೇಶದ ಖಾಸಗಿ ಶಾಲೆಗಳ ವಿದ್ಯಾರ್ಥಿಗಳಿಗೆ ತೀವ್ರವಾದ ಪೈಪೋಟಿ ನೀಡಿ ಮುನ್ನಡೆಯುತ್ತಿರುವುದು ಸಂತೋಷದ ವಿಷಯವಾಗಿದೆ ಎಂದು ತಿಳಿಸಿದ ಪೂರ್ಣಚಂದ್ರ ಮೂಡನಹಳ್ಳಿ ಗ್ರಾಮದಲ್ಲಿ ಮುಖ್ಯ ಶಿಕ್ಷಕರಾದ ಕೃಷ್ಣಶೆಟ್ಟಿಯವರ ನೇತೃತ್ವದಲ್ಲಿ ವಿಶೇಷವಾಗಿ ರಂಗಸಜ್ಜಕೆಯನ್ನು ನಿರ್ಮಿಸಿ , ಬಣ್ಣ ಬಣ್ಣದ ವಿದ್ಯುತ್ ದೀಪಗಳೊಂದಿಗೆ ಅಲಂಕರಿಸಿ ವಾರ್ಷಿಕೋತ್ಸವ ಸಮಾರಂಭವನ್ನು ನಡೆಸುತ್ತಿರುವುದು ಹೆಮ್ಮೆಯ ವಿಚಾರವಾಗಿದೆ ಎಂದು ಹೇಳಿದರು.

ರಾಜ್ಯ ಆರ್‌ಟಿಓ ಅಧಿಕಾರಿಗಳ ಸಂಘದ ಅಧ್ಯಕ್ಷ ಹಾಗೂ ಸಮಾಜಸೇವಕರಾದ ಮಲ್ಲಿಕಾರ್ಜುನ ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ಸರ್ಕಾರಿ ಶಾಲೆಗಳು ಬಾಗಿಲು ಮುಚ್ಚುತ್ತಿರುವ ಸಂದರ್ಭದಲ್ಲಿ ಮೂಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಪೈಪೋಟಿ ನೀಡುವಂತೆ ಅದ್ದೂರಿಯಾಗಿ ಶಾಲಾ ಮಕ್ಕಳು ಹಾಗೂ ಪೋಷಕರ ನೇತೃತ್ವದಲ್ಲಿ ಶಾಲಾ ವಾರ್ಷಿಕೋತ್ಸವ ನಡೆಸಿ ಗುಣಮಟ್ಟದ ಶಿಕ್ಷಣ ನೀಡಿ ಸಾಧನೆ ಮಾಡುವಂತೆ ಬೆನ್ನು ತಟ್ಟಿ ಪ್ರೋತ್ಸಾಹಿಸುತ್ತಿರುವುದು ಇಡೀ ನಾಗರಿಕ ಸಮಾಜವೇ ಮೆಚ್ಚುವ ವಿಚಾರವಾಗಿದೆ ಎಂದು ಶಾಲಾ ಶಿಕ್ಷಕರು ಹಾಗೂ ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರನ್ನು ಅಭಿನಂದಿಸುವುದಾಗಿ ಹೇಳಿದರು.

ಕೃಷ್ಣರಾಜಪೇಟೆ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷರಾದ ಪದ್ಮೇಶ್, ಎಲ್.ಎಸ್. ಧರ್ಮಪ್ಪ, ಪ್ರಧಾನ ಕಾರ್ಯದರ್ಶಿ ಲಕ್ಷ್ಮಣಗೌಡ, ಆನಂದ್ ಕುಮಾರ್, ಹೆಚ್ ಆರ್ ಯೋಗೇಶ್, ಎ.ಕೆ.ದೇವರಾಜು, ಎಸ್ ಡಿಎಂಸಿ ಅಧ್ಯಕ್ಷ ರೇವಣ್ಣ, ಗ್ರಾಮ ಪಂಚಾಯತ್ ಸದಸ್ಯ ಅನುಕುಮಾರ್, ಎಸ್.ಎಂ. ಮಂಜೇಗೌಡ, ಬಿಆರ್.ಪಿ ಅಶೋಕ್, ರವಿಕುಮಾರ್, ಸಿಆರ್.ಪಿ ಅಶೋಕ್, ಶಿಕ್ಷಣ ಸಂಯೋಜಕರಾದ ವೀರ ಭದ್ರಯ್ಯ, ಟಿಎಪಿಸಿಎಂಎಸ್ ನಿರ್ದೇಶಕ ಹೆಚ್.ಟಿ.ಲೋಕೇಶ್, ಪತ್ರಕರ್ತರಾದ ಗಂಜಿಗೆರೆ ಮಹೇಶ್ ಮಾಕವಳ್ಳಿ ಮನು ಹೊಸ ಹೊಳಲು ರಘು ಸೇರಿದಂತೆ ಸಾವಿರಾರು ಜನರು ಶಾಲಾ ವಾರ್ಷಿಕೋತ್ಸವದಲ್ಲಿ ಭಾಗವಹಿಸಿ ಮಕ್ಕಳು ನೀಡಿದ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳನ್ನು ಕಣ್ತುಂಬಿಕೊಂಡು ಸಂಭ್ರಮಿಸಿದರು. ವರದಿ.ಡಾ.ಕೆ.ಆರ್.ನೀಲಕಂಠ, ಕೃಷ್ಣರಾಜಪೇಟೆ, ಮಂಡ್ಯ.

About The Author

error: Content is protected !!