March 13, 2026

ಹಿಂದೂ ಸಮಾಜ ಸಂಘಟಿತವಾಗಬೇಕು: ಜಗದೀಶ ಕಾರಂತ


ಭಟ್ಕಳ: ಹಿಂದೂ ಸಮಾಜ ಸಂಘಟಿತವಾಗಿ ತನ್ನ ಸಂಸ್ಕೃತಿ ಹಾಗೂ ಮೌಲ್ಯಗಳನ್ನು ಉಳಿಸಿಕೊಳ್ಳುವ ಅಗತ್ಯವಿದೆ ಎಂದು ಹಿಂದೂ ಜಾಗರಣ ವೇದಿಕೆಯ ದಕ್ಷಿಣ ಮಧ್ಯ ಕ್ಷೇತ್ರೀಯ ಸಂಯೋಜಕ ಜಗದೀಶ ಕಾರಂತ ಹೇಳಿದರು.


ಪಟ್ಟಣದ ಹೆಬಳೆ ಮಂಡಲದ ಹಿಂದೂ ಸಮ್ಮೇಳನ ಸಂಚಾಲನಾ ಸಮಿತಿಯಿಂದ ಆಯೋಜಿಸಲಾದ ಬೃಹತ್ ಹಿಂದೂ ಸಮಾಜೋತ್ಸವದಲ್ಲಿ ಅವರು ಮುಖ್ಯ ವಕ್ತಾರರಾಗಿ ಮಾತನಾಡಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಜನ್ಮಶತಾಬ್ದಿ ಅಂಗವಾಗಿ ಹಿಂದೂ ಜಾಗೃತಿ ಹಾಗೂ ಸಂಘಟನೆಯ ಉದ್ದೇಶದಿಂದ ಈ ಸಮಾಜೋತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.


ಆರೆಸ್ಸೆಸ್‌ ಮೇಲೆ ಟೀಕೆಗಳು ಬಂದರೂ ಸಂಘಟನೆ ನಿರಂತರವಾಗಿ ವಿಸ್ತಾರಗೊಳ್ಳುತ್ತಿದೆ. ಜಗತ್ತಿನ ವಿವಿಧ ಭಾಗಗಳಲ್ಲಿ ವಾಸಿಸುವ ಹಿಂದೂಗಳಲ್ಲಿ ಸ್ವಾಭಿಮಾನ ಮತ್ತು ಸಾಂಸ್ಕೃತಿಕ ಜಾಗೃತಿಯನ್ನು ಬೆಳೆಸುವ ಕೆಲಸವನ್ನು ಸಂಘಟನೆ ಮಾಡುತ್ತಿದೆ ಎಂದು ಹೇಳಿದರು.
ಭಾರತವು ಸಮೃದ್ಧ ಸಂಸ್ಕೃತಿ ಮತ್ತು ಪರಂಪರೆಯ ದೇಶವಾಗಿದೆ. ಸಿಂಧೂ ನಾಗರಿಕತೆಯ ಕಾಲದಿಂದಲೇ ಈ ದೇಶದ ಸಂಸ್ಕೃತಿ ವೈಭವಶಾಲಿಯಾಗಿದೆ. ಹಿಂದೂ ಸಮಾಜವು ತನ್ನ ಪರಂಪರೆ ಮತ್ತು ಮೌಲ್ಯಗಳನ್ನು ಉಳಿಸಿಕೊಂಡು ಮುಂದುವರಿಯಬೇಕಿದೆ ಎಂದು ಅಭಿಪ್ರಾಯಪಟ್ಟರು.


ಕಾರ್ಯಕ್ರಮದಲ್ಲಿ ಹುಬ್ಬಳ್ಳಿಯ ಶ್ರೀ ಮಾತಾ ಆಶ್ರಮದ ಮಾತಾಜಿ ತೇಜೋಮಹಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಭಾರತವು ಅನೇಕ ಸವಾಲುಗಳನ್ನು ಎದುರಿಸಿ ಮುಂದೆ ಸಾಗಿದ ರಾಷ್ಟ್ರವಾಗಿದೆ. ವಿವೇಕಾನಂದರು ಮತ್ತು ಶಿವಾಜಿಯಂತಹ ಮಹಾಪುರುಷರು ದೇಶಕ್ಕೆ ದಿಕ್ಕು ತೋರಿದ್ದಾರೆ. ಮುಂದಿನ ಪೀಳಿಗೆಗೆ ಸಂಸ್ಕಾರ ಮತ್ತು ಸಂಸ್ಕೃತಿಯ ಅರಿವು ಮೂಡಿಸುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು.


ಮಕ್ಕಳಲ್ಲಿ ಸಾಂಸ್ಕೃತಿಕ ಮೌಲ್ಯಗಳನ್ನು ಬೆಳೆಸುವ ಮೂಲಕ ಸಮಾಜದ ಒಗ್ಗಟ್ಟು ಮತ್ತು ಧಾರ್ಮಿಕ ಪರಂಪರೆಯನ್ನು ಉಳಿಸಬೇಕಾಗಿದೆ ಎಂದು ಕರೆ ನೀಡಿದರು.

About The Author

error: Content is protected !!