March 31, 2026

ಶ್ರೀ ಬಾಲಚಂದ್ರ ವಿ. ಹೆಗಡೆಕರ್, ಮಾರ್ಚ್ 31ರಂದು ಸೇವಾ ನಿವೃತ್ತಿ

ಸಮರ್ಪಿತ ಶಿಕ್ಷಕ ಜೀವನದ ಪ್ರೇರಣಾದಾಯಕ ಪಯಣ

ಕುಮಟಾ : ಸಂಖ್ಯೆಗಳ ಮಧ್ಯೆ ಶಿಸ್ತು, ಸಮೀಕರಣಗಳೊಳಗೆ ಜೀವನದ ಮೌಲ್ಯಗಳನ್ನು ಕಲಿಸಿದ ಮಹಾನ್ ಗುರು ಎಂದು ಕೊಂಡಾಡಬಹುದಾದ ವ್ಯಕ್ತಿತ್ವವೇ ಶ್ರೀ ಬಾಲಚಂದ್ರ ವಿ. ಹೆಗಡೆಕರ್. ಕಳೆದ 28 ವರ್ಷಗಳಿಂದ ಹಿರೇಗುತ್ತಿಯ ಸೆಕೆಂಡರಿ ಹೈಸ್ಕೂಲಿನಲ್ಲಿ ಹಿರಿಯ ಗಣಿತ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಅವರು ಶಾಲೆಯ ಶೈಕ್ಷಣಿಕ ಇತಿಹಾಸದ ಅವಿಭಾಜ್ಯ ಅಂಗವಾಗಿದ್ದಾರೆ. ಗಣಿತ ಎಂಬ ವಿಷಯವನ್ನು ಭಯದ ವಿಷಯವಲ್ಲ, ತರ್ಕ, ಕ್ರಮ ಮತ್ತು ಆತ್ಮವಿಶ್ವಾಸದ ಭಾಷೆ ಎಂದು ವಿದ್ಯಾರ್ಥಿಗಳಿಗೆ ಪರಿಚಯಿಸಿದ ಸಾಧಕ ಗುರುಗಳು ಅವರು. ಗಣಿತ ಕಷ್ಟ ಎಂದುಕೊAಡ ಅನೇಕ ವಿದ್ಯಾರ್ಥಿಗಳನ್ನು ನಾನು ಮಾಡಬಲ್ಲೆ ಎನ್ನುವ ಮಟ್ಟಕ್ಕೆ ಕೊಂಡೊಯ್ದದ್ದು ಅವರ ವಿಶಿಷ್ಟ ಬೋಧನಾ ಶೈಲಿಯ ಫಲ.

ದಿ. ರತ್ನಾಬಾಯಿ ಮತ್ತು ದಿ. ವೆಂಕಟ್ರಮಣ ಹೆಗಡೆಕರ್ (ನಿವೃತ್ತ ತಹಶೀಲ್ದಾರ) ಆದರ್ಶ ದಂಪತಿಗಳ ಐದು ಮಕ್ಕಳಲ್ಲಿ ಕಿರಿಯ ಮಗನಾಗಿ ಕ್ರಿ.ಶ. 14-03-1966 ರಂದು ಜನಿಸಿದ ಬಾಲಚಂದ್ರರು ಶಿಸ್ತು ಮತ್ತು ಮೌಲ್ಯಗಳ ಸಂಸ್ಕಾರದಲ್ಲಿ ಬೆಳೆದವರು. ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಪ್ರಾಯೋಗಿಕ ಶಾಲೆ ಡಯಟ್, ಕುಮಟಾದಲ್ಲಿ ಪೂರ್ಣಗೊಳಿಸಿ, 5 ರಿಂದ 7ನೇ ತರಗತಿಯನ್ನು ಹಿರಿಯ ಪ್ರಾಥಮಿಕ ಶಾಲೆ ಎಸ್.ಎಸ್.ಕುಬಾ, ಬಸವಕಲ್ಯಾಣ (ಬೀದರ್) ನಲ್ಲಿ ಅಭ್ಯಾಸ ಮಾಡಿದರು. ನಂತರ ಕುಮಟಾದ ಗಿಬ್ ಹೈಸ್ಕೂಲಿನಲ್ಲಿ ಹೈಸ್ಕೂಲ್ ಶಿಕ್ಷಣ ಪಡೆದು, ಡಾ. ಎ.ವಿ. ಬಾಳಿಗಾ ಕಾಲೇಜಿನಲ್ಲಿ ಬಿಎಸ್ಸಿ ಪದವಿ ಪಡೆದರು. ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯ, ಅರಸೀಕೆರೆ (ಹಾಸನ ಜಿಲ್ಲೆ) ಯಲ್ಲಿ ಬಿ.ಇಡ್ ಪದವಿ ಪಡೆದು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದಲ್ಲಿ ಎಂ.ಎಸ್‌ಸಿ ಪದವಿ ಪೂರ್ಣಗೊಳಿಸಿದರು. ಅವರ ಪತ್ನಿ ಶ್ರೀಮತಿ ಪುಷ್ಪಾ ಶಿವಾ ನಾಯ್ಕ ಹೊನ್ನಾವರದ ಸ.ಹಿ.ಪ್ರಾ ಶಾಲೆ ಬೆಳಕೊಂಡದಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದು, ಶಿಕ್ಷಕ ದಂಪತಿಗಳಾಗಿ ಸಮಾಜಕ್ಕೆ ಜ್ಞಾನ ದೀಪ ಬೆಳಗಿಸುತ್ತಿದ್ದಾರೆ.

ಉದರ ನಿಮಿತ್ತಂ ಬಹುಕೃತ ವೇಷಂ ಎಂಬAತೆ ಜೀವನದ ಆರಂಭಿಕ ಹಂತದಲ್ಲಿ ಗುಜರಾತಿನಲ್ಲಿ ಕೆಮಿಕಲ್ ಇಂಡಸ್ಟ್ರಿಯಲ್ಲಿ ಕೆಮಿಸ್ಟ್ ಆಗಿ ಕಾರ್ಯನಿರ್ವಹಿಸಿದರೂ, ಅವರ ಮನಸ್ಸು ಶಿಕ್ಷಣ ಕ್ಷೇತ್ರದತ್ತವೇ ಆಕರ್ಷಿತವಾಯಿತು. 1995-96 ರವರೆಗೆ ನವೋದಯ ವಿದ್ಯಾಲಯ, ಕುಮಟಾದಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ, 1997-98ರಲ್ಲಿ ಬೆಂಗಳೂರು ನೈಂಟಿಗೇಲ್ ಇಂಗ್ಲೀಷ್ ಮೀಡಿಯಂ ಸ್ಕೂಲ್‌ನಲ್ಲಿ ಕಾರ್ಯನಿರ್ವಹಿಸಿದರು. 1998ರಿಂದ 2026ರವರೆಗೆ ಹಿರೇಗುತ್ತಿ ಸೆಕೆಂಡರಿ ಹೈಸ್ಕೂಲಿನಲ್ಲಿ ನಿರಂತರ 28 ವರ್ಷಗಳ ಕಾಲ ಸೇವೆ ಸಲ್ಲಿಸಿರುವುದು ಅವರ ನಿಷ್ಠೆ ಮತ್ತು ಬದ್ಧತೆಯ ಸಂಕೇತವಾಗಿದೆ.

ಅವರ ತರಗತಿ ಎಂದರೆ ಶಿಸ್ತು, ಗಮನ ಮತ್ತು ಚಿಂತನೆಯ ಕೇಂದ್ರ. ಕಠಿಣ ಶಿಸ್ತಿನ ಹಿಂದೆ ಮೃದು ಹೃದಯ ಹೊಂದಿರುವ ಅವರು, ಕಟ್ಟುನಿಟ್ಟಿನ ಪಾಠಗಳ ಹಿಂದೆ ವಿದ್ಯಾರ್ಥಿಗಳ ಭವಿಷ್ಯದ ಮೇಲಿನ ಅಪಾರ ಕಾಳಜಿಯನ್ನು ಇಟ್ಟುಕೊಂಡಿದ್ದರು. ಪಾಠಪುಸ್ತಕದ ಮಿತಿಯನ್ನು ಮೀರಿ ಸಮಯಪಾಲನೆ, ಜವಾಬ್ದಾರಿ, ಪರಿಶ್ರಮ ಮತ್ತು ಪ್ರಾಮಾಣಿಕತೆ ಎಂಬ ಜೀವನ ಮೌಲ್ಯಗಳನ್ನು ವಿದ್ಯಾರ್ಥಿಗಳ ಮನದಲ್ಲಿ ಬಿತ್ತಿದರು. ಅವರ ಬೋಧನೆ ಕೇವಲ ಗಣಿತದ ಸಮೀಕರಣಗಳನ್ನು ಮಾತ್ರ ಕಲಿಸಲಿಲ್ಲ; ಬದುಕಿನ ಸಮೀಕರಣಗಳನ್ನು ಸರಿಪಡಿಸುವ ಮಾರ್ಗವನ್ನೂ ತೋರಿಸಿತು.

ಮಾರ್ಚ್ 31ರಂದು ಅವರು ಸೇವಾ ನಿವೃತ್ತಿ ಹೊಂದಲಿದ್ದಾರೆ. ಇದು ಒಂದು ಉದ್ಯೋಗ ಜೀವನದ ಪೂರ್ಣತೆ; ಆದರೆ ಅವರ ಪ್ರಭಾವ ಮತ್ತು ಪಾಠಗಳು ಅನೇಕ ವಿದ್ಯಾರ್ಥಿಗಳ ಬದುಕಿನಲ್ಲಿ ಸದಾಕಾಲ ಜೀವಂತವಾಗಿಯೇ ಉಳಿಯಲಿವೆ. ಇಂದು ನಡೆಯುವ ಸನ್ಮಾನವು ಒಬ್ಬ ಶಿಕ್ಷಕನಿಗೆ ನೀಡುವ ಗೌರವ ಮಾತ್ರವಲ್ಲ, 28 ವರ್ಷಗಳ ಸಮರ್ಪಿತ ಸೇವೆಗೆ ಸಮಾಜ ಸಲ್ಲಿಸುವ ಕೃತಜ್ಞತೆಯ ನಮನವಾಗಿದೆ.

ಶ್ರೀ ಬಾಲಚಂದ್ರ ವಿ. ಹೆಗಡೆಕರ್ ಅವರ ಸೇವೆ ಹಿರೇಗುತ್ತಿಯ ಶಿಕ್ಷಣ ಕ್ಷೇತ್ರದಲ್ಲಿ ಸದಾಕಾಲ ಪ್ರಕಾಶಿಸುವ ದೀಪವಾಗಿರಲಿ. ಅವರು ಬಿತ್ತಿದ ಜ್ಞಾನದ ಬೀಜಗಳು ಸಾವಿರಾರು ವಿದ್ಯಾರ್ಥಿಗಳ ಬದುಕಿನಲ್ಲಿ ಫಲ ನೀಡುತ್ತಲೇ ಇರಲಿ ಎಂಬುದು ನಮ್ಮ ಹಾರೈಕೆ.

About The Author

error: Content is protected !!