April 16, 2026

ಮಾಳ್ಕೋಡ ಶಾಲೆಯ ಶತಮಾನೋತ್ತರ ಸಂಭ್ರಮಾಚರಣೆ


ಹಳೆ ವಿದ್ಯಾರ್ಥಿಗಳ ಸಂಪರ್ಕ ಅಭಿಯಾನ – ಮೂಲ ಸೌಕರ್ಯ ಅಭಿವೃದ್ಧಿಗೆ ಚಿಂತನೆ


ಹೊನ್ನಾವರ: ತಾಲೂಕಿನ ಮಾಳ್ಕೋಡ ಕೆಳಗಿನ ಇಡಗುಂಜಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ತರ ಸಂಭ್ರಮದ ವರ್ಷಾಚರಣೆಯನ್ನು ಆಚರಿಸಲು ತೀರ್ಮಾನಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸಂಭ್ರಮಾಚರಣೆಗೆ ಪೂರ್ವಭಾವಿಯಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು, ಹಳೆಯ ವಿದ್ಯಾರ್ಥಿಗಳ ಸಂಪರ್ಕ ಅಭಿಯಾನ ನಡೆಸಿ ಅವರನ್ನು ಸಂಘಟಿಸುವುದು ಹಾಗೂ ಶಾಲೆಯ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಜನಪ್ರತಿನಿಧಿಗಳು ಮತ್ತು ದಾನಿಗಳ ಸಹಕಾರ ಪಡೆಯುವುದು ಎಂದು ನಿರ್ಧರಿಸಲಾಗಿದೆ.
ಶತಮಾನೋತ್ಸವ ಸಮಿತಿಯ ಅಧ್ಯಕ್ಷರಾದ ನಾಗರಾಜ ನಾಯ್ಕ ಮಾಳ್ಕೋಡ ಅವರ ಅಧ್ಯಕ್ಷತೆಯಲ್ಲಿ ನಡೆದ ಚಿಂತನಾ ಸಭೆಯಲ್ಲಿ ಈ ನಿರ್ಣಯಗಳನ್ನು ಕೈಗೊಳ್ಳಲಾಯಿತು. ೧೦೦ಕ್ಕೂ ಹೆಚ್ಚು ವರ್ಷಗಳ ಇತಿಹಾಸ ಹೊಂದಿರುವ ಈ ಶಾಲೆಯ ಶತಮಾನೋತ್ತರ ಸಂಭ್ರಮಾಚರಣೆಯನ್ನು ಮುಂದಿನ ಡಿಸೆಂಬರ್–ಜನವರಿ ತಿಂಗಳಲ್ಲಿ ಆಯೋಜಿಸಲು ತೀರ್ಮಾನಿಸಲಾಗಿದೆ. ಅದಕ್ಕೂ ಮುನ್ನ ವಿವಿಧ ಹಂತಗಳಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು.
ಶಾಲೆಗೆ ಅಗತ್ಯವಿರುವ ಮೂಲಸೌಕರ್ಯಗಳ ಪಟ್ಟಿ ಸಿದ್ಧಪಡಿಸಲಾಗಿದ್ದು, ಜನಪ್ರತಿನಿಧಿಗಳು ಮತ್ತು ಸರ್ಕಾರದ ನೆರವಿನಿಂದ ಅವುಗಳನ್ನು ಜಾರಿಗೆ ತರಲು ಸಮಿತಿ ಮುಂದಾಗಿದೆ. ಚಿಕ್ಕಪುಟ್ಟ ಕೆಲಸಗಳನ್ನು ದಾನಿಗಳು ಮತ್ತು ಪ್ರಾಯೋಜಕರ ಸಹಾಯದಿಂದ ಪೂರ್ಣಗೊಳಿಸುವ ಯೋಜನೆ ರೂಪಿಸಲಾಗಿದೆ.


ಇಲ್ಲಿಯವರೆಗೆ ಶಾಲೆಯಲ್ಲಿ ೨೨೪೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಿದ್ದು, ಅನೇಕರು ದೇಶ-ವಿದೇಶಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಹೀಗಾಗಿ ಹಳೆಯ ವಿದ್ಯಾರ್ಥಿಗಳ ದಾಖಲಾತಿಗಾಗಿ ಸಂಪರ್ಕ ಅಭಿಯಾನ ನಡೆಸಿ, ಮುಂದಿನ ದಿನಗಳಲ್ಲಿ ಹಳೆ ವಿದ್ಯಾರ್ಥಿಗಳ ಮಹಾಸಂಗಮ ಸಮಾವೇಶವನ್ನು ಆಯೋಜಿಸಲು ನಿರ್ಧರಿಸಲಾಗಿದೆ.


ಶಾಲೆಯಲ್ಲಿ ಈಗಾಗಲೇ ಸ್ಮಾರ್ಟ್ ಕ್ಲಾಸ್‌ಗಳು ಪ್ರಾರಂಭಗೊಂಡಿದ್ದು, ಮುಂದಿನ ಶೈಕ್ಷಣಿಕ ವರ್ಷದಲ್ಲಿ ಕಂಪ್ಯೂಟರ್ ತರಬೇತಿಯನ್ನು ಆರಂಭಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಸಭೆಯಲ್ಲಿ ಜಮಾ-ಖರ್ಚಿನ ವಿವರ ಮಂಡನೆಗೊಂಡು, ಹಿಂದಿನ ಸಭೆಯ ನಡುವಳಿಕೆ ದೃಢೀಕರಿಸಲಾಯಿತು.
ಸಭೆಯಲ್ಲಿ ವಿಶೇಷ ಆಹ್ವಾನಿತರಾಗಿ ಕುಮಟಾ ಉಪವಿಭಾಗದ ಎ.ಸಿ.ಎಫ್. ಕೃಷ್ಣ ಅಣ್ಣಯ್ಯ ಗೌಡ, ಎಸ್.ಡಿ.ಎಂ.ಸಿ ಅಧ್ಯಕ್ಷ ರಾಜೇಶ ಎಂ. ಶೆಟ್ಟಿ, ಉಪಾಧ್ಯಕ್ಷೆ ಮಂಗಲಾ ಅಣ್ಣಯ್ಯ ಗೌಡ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಶಾಂತ ಹೆಚ್. ನಾಯ್ಕ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


ಲಾಂಛನ ಅಂತಿಮ:
ಶತಮಾನೋತ್ತರ ಸಂಭ್ರಮಾಚರಣೆಯ ಅಂಗವಾಗಿ ರಚಿಸಲಾದ ಸಮಿತಿಯ ಲಾಂಛನವನ್ನು ಸಭೆಯಲ್ಲಿ ಅಂತಿಮಗೊಳಿಸಲಾಗಿದ್ದು, ಅದನ್ನು ಕ್ಷೇತ್ರದ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಮಂಕಾಳು ಎಸ್. ವೈದ್ಯರಿಂದ ಬಿಡುಗಡೆಗೊಳಿಸಲು ತೀರ್ಮಾನಿಸಲಾಗಿದೆ.

“ನಾವು ಇಂದು ಯಾವ ಹುದ್ದೆಯಲ್ಲಿ ಇದ್ದರೂ, ನಮ್ಮ ಬಾಲ್ಯದ ಭದ್ರ ನೆಲೆ ಈ ಪ್ರಾಥಮಿಕ ಶಾಲೆಯೇ. ಶತಮಾನೋತ್ಸವ ಸಂಭ್ರಮದ ಈ ಸಂದರ್ಭದಲ್ಲಿ ಹಳೆ ವಿದ್ಯಾರ್ಥಿಗಳೆಲ್ಲರೂ ತನು-ಮನ-ಧನಗಳಿಂದ ಸಹಕಾರ ನೀಡಬೇಕು” ಎಂದು ಎ.ಸಿ.ಎಫ್. ಕೃಷ್ಣ ಅಣ್ಣಯ್ಯ ಗೌಡ ಕರೆ ನೀಡಿದರು.

About The Author

error: Content is protected !!