ಹಳಿಯಾಳ: ದಾಂಡೇಲಿ ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿಯ ವತಿಯಿಂದ ಕೆನರಾ ಕ್ಷೇತ್ರದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಹಳಿಯಾಳದ ಕೆಸರೋಳಿ ಕ್ರಾಸ್ ಸಮೀಪ ಭೇಟಿ ಮಾಡಿ ದಾಂಡೇಲಿಯ ಪ್ರಮುಖ ಸಮಸ್ಯೆಗಳ ಕುರಿತು ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಸಮಿತಿಯ ಪದಾಧಿಕಾರಿಗಳು ದಾಂಡೇಲಿ–ಅಳ್ಳಾವರ ನಡುವೆ ಈಗಾಗಲೇ ಸಂಚರಿಸುತ್ತಿರುವ ಪ್ರಯಾಣಿಕ ರೈಲನ್ನು ಹುಬ್ಬಳ್ಳಿ ರೈಲು ನಿಲ್ದಾಣದವರೆಗೆ ವಿಸ್ತರಿಸುವಂತೆ ಹಾಗೂ ದೂರ ಪ್ರಯಾಣಿಕರ ಅನುಕೂಲಕ್ಕಾಗಿ ಮುಂಗಡ ಟಿಕೆಟ್ ಕೌಂಟರ್ ಆರಂಭಿಸುವಂತೆ ಒತ್ತಾಯಿಸಿದರು. ರೈಲು ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಕುಳಿತುಕೊಳ್ಳಲು ಆಸನ ವ್ಯವಸ್ಥೆ ಹಾಗೂ ಮೇಲ್ಚಾವಣಿ ನಿರ್ಮಾಣ ಮಾಡಬೇಕೆಂಬ ಬೇಡಿಕೆಯನ್ನೂ ಮುಂದಿಟ್ಟರು.
ದಾಂಡೇಲಿ–ಅಳ್ಳಾವರ ಪ್ರಯಾಣಿಕ ರೈಲು ಆರಂಭಿಸಿದ್ದಕ್ಕಾಗಿ ಸಂಸದರಿಗೆ ಸಮಿತಿಯವರು ಧನ್ಯವಾದಗಳನ್ನು ತಿಳಿಸಿದರು. ಈಗಾಗಲೇ ಈ ರೈಲಿನಿಂದ ಸ್ಥಳೀಯ ಪ್ರಯಾಣಿಕರು ಲಾಭ ಪಡೆಯುತ್ತಿದ್ದಾರೆ. ಇದನ್ನು ಹುಬ್ಬಳ್ಳಿಯವರೆಗೆ ವಿಸ್ತರಿಸಿದರೆ ಹೆಚ್ಚಿನ ಜನರಿಗೆ ಅನುಕೂಲವಾಗಲಿದೆ ಎಂದು ಅವರು ಹೇಳಿದರು.
ಇನ್ನೊಂದೆಡೆ ಪ್ರಧಾನಮಂತ್ರಿ ಅವಾಸ್ ಯೋಜನೆಯಡಿ ನಗರದಲ್ಲಿ ನಿರ್ಮಾಣವಾಗುತ್ತಿರುವ ಜಿ+2 ಮನೆಗಳ ಕಾಮಗಾರಿ ವಿಳಂಬವಾಗಿರುವುದನ್ನು ಗಮನಕ್ಕೆ ತರಲಾಯಿತು. ಈ ಕುರಿತು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಹೋರಾಟ ನಡೆಸಿದರೂ ಇದುವರೆಗೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಂಸದ ಕಾಗೇರಿ, ಈ ವಿಷಯವನ್ನು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಈಗಾಗಲೇ ಪ್ರಸ್ತಾಪಿಸಿದ್ದಾಗಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸುವುದಾಗಿ ಹೇಳಿದರು. ಮಳೆಗಾಲದ ಮುನ್ನ ಸಿದ್ಧವಾಗಿರುವ 84 ಮನೆಗಳನ್ನು ಫಲಾನುಭವಿಗಳಿಗೆ ಹಂಚಿಕೆ ಮಾಡಬೇಕು ಮತ್ತು ಉಳಿದ ಮನೆಗಳ ನಿರ್ಮಾಣವನ್ನು ಶೀಘ್ರ ಪೂರ್ಣಗೊಳಿಸಬೇಕು ಎಂದು ವಿನಂತಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಸುನೀಲ ಹೆಗಡೆ, ಸಮಿತಿಯ ಅಧ್ಯಕ್ಷ ಅಕ್ರಮ್ ಖಾನ್, ಉಪಾಧ್ಯಕ್ಷ ಅಶೋಕ್ ಆರ್. ಪಾಟೀಲ, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಗಡಪ್ಪನವರ್, ವಕೀಲರು ಹಾಗೂ ಸದಸ್ಯರಾದ ಮೊಹಮ್ಮದ್ ಗೌಸ್ ಬೆಟಿಗೇರಿ ಮತ್ತು ಮಾಧ್ಯಮ ಪ್ರತಿನಿಧಿ ಜೋಶಿ ಉಪಸ್ಥಿತರಿದ್ದರು.
ಮನವಿಗೆ ಸ್ಪಂದಿಸಿದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, “ರೈಲು ನಿಲ್ದಾಣದಲ್ಲಿ ಮೂಲಭೂತ ಸೌಲಭ್ಯಗಳನ್ನು ಶೀಘ್ರ ಒದಗಿಸಲು ಕ್ರಮ ಕೈಗೊಳ್ಳುತ್ತೇವೆ. ಹುಬ್ಬಳ್ಳಿವರೆಗೆ ರೈಲು ವಿಸ್ತರಣೆಗಾಗಿ ಪ್ರಯತ್ನಿಸಲಾಗುವುದು. ಜಿ+2 ಮನೆಗಳ ವಿಷಯವನ್ನೂ ಪರಿಶೀಲಿಸಲಾಗುವುದು” ಎಂದು ಭರವಸೆ ನೀಡಿದರು.

More Stories
ದಾಂಡೇಲಿ ಜಿ+2 ಮನೆಗಳ ವಿವಾದ ತೀವ್ರ – ಸಾಮಗ್ರಿ ಸ್ಥಳಾಂತರಕ್ಕೆ ಯತ್ನಕ್ಕೆ ಆಕ್ರೋಶ
ತಲೆಯ ಮೇಲೆ ಚಪ್ಪಲಿ ಹೊತ್ತು ವಿನೂತನ ಪ್ರತಿಭಟನೆ: “ಮನೆ ಇಲ್ಲ, ವಿಷ ಕೊಡಿ” – ದಾಂಡೇಲಿ ಹೋರಾಟ ಸಮಿತಿ ಆಕ್ರೋಶ
ಶ್ರೇಯಸ್ ಪೇಪರ್ ಮಿಲ್ನಲ್ಲಿ ಭಾರೀ ಅಗ್ನಿ ಅವಘಡ