

ಹೊನ್ನಾವರ: “ಕಾರ್ಮಿಕರು ಮಾಡುವ ಕೆಲಸ ಗುಲಾಮಗಿರಿ ಅಲ್ಲ, ಅದು ಒಂದು ಗೌರವಯುತ ವೃತ್ತಿ” ಎಂದು ತಾಲೂಕ ಆಸ್ಪತ್ರೆಯ ಜನರಲ್ ಮೆಡಿಸಿನ್ ವಿಭಾಗದ ತಜ್ಞ ವೈದ್ಯ ಡಾ. ಶ್ರೀನಿವಾಸ್ ನಾಯಕ ಅಭಿಪ್ರಾಯಪಟ್ಟರು.


ತಾಲೂಕು ಆಸ್ಪತ್ರೆಯಲ್ಲಿ ವಿಶ್ವ ಕಾರ್ಮಿಕ ದಿನಾಚರಣೆ ಅಂಗವಾಗಿ ಡಾ. ರಾಜೇಶ್ ಕಿಣಿ ಅವರ ನೇತೃತ್ವದಲ್ಲಿ ನಾನ್ ಕ್ಲಿನಿಕ್ ಸಿಬ್ಬಂದಿಗೆ ಗೌರವ ಸಮರ್ಪಣೆ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಡಾ. ಶ್ರೀನಿವಾಸ್ ನಾಯಕ, “ಉದ್ಯೋಗ ಮಾಡುವ ಪ್ರತಿಯೊಬ್ಬರೂ ಕಾರ್ಮಿಕರೇ. ನಾವು ನಮ್ಮ ವೃತ್ತಿಯನ್ನು ನಿಷ್ಠೆಯಿಂದ ನಿರ್ವಹಿಸಬೇಕು. ವಿಶೇಷವಾಗಿ ಕೆಳಹಂತದ ಕಾರ್ಮಿಕರು ತಮ್ಮ ಹಕ್ಕುಗಳು ಮತ್ತು ಸೌಲಭ್ಯಗಳ ಬಗ್ಗೆ ತಿಳಿದುಕೊಳ್ಳಬೇಕು. ತಮ್ಮ ಕೆಲಸದ ಬಗ್ಗೆ ಕೀಳರಿಮೆ ಬೇಡ” ಎಂದರು.
ಅವರು ಮುಂದುವರಿಸಿ, “ಆಸ್ಪತ್ರೆಯಲ್ಲಿ ಒಂದು ದಿನ ವೈದ್ಯರು ಇಲ್ಲದಿದ್ದರೂ ನಿರ್ವಹಿಸಬಹುದು. ಆದರೆ ನಾನ್ ಕ್ಲಿನಿಕ್ ಸಿಬ್ಬಂದಿ ಕೆಲಸ ಮಾಡದಿದ್ದರೆ ಆಸ್ಪತ್ರೆಯ ಸ್ವಚ್ಛತೆ ಮತ್ತು ಆರೋಗ್ಯ ವ್ಯವಸ್ಥೆಗೆ ಧಕ್ಕೆ ಉಂಟಾಗುತ್ತದೆ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಆಸ್ಪತ್ರೆಯ ಸಹಾಯಕ ಆಡಳಿತಾಧಿಕಾರಿ ಶ್ರೀಮತಿ ಶಶಿಕಲಾ ನಾಯ್ಕ ಮಾತನಾಡಿ, “ಆಸ್ಪತ್ರೆಯ ಅಭಿವೃದ್ಧಿಯಲ್ಲಿ ನಾನ್ ಕ್ಲಿನಿಕ್ ಸಿಬ್ಬಂದಿಯ ಪಾತ್ರ ಅತ್ಯಂತ ಮಹತ್ವದ್ದು. ಅವರಿಗೆ ಅಗತ್ಯವಾದ ಸೌಲಭ್ಯಗಳನ್ನು ಒದಗಿಸಲು ಆಡಳಿತ ವಿಭಾಗದಿಂದ ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ” ಎಂದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಡಳಿತ ವೈದ್ಯಾಧಿಕಾರಿ ಡಾ. ರಾಜೇಶ್ ಕಿಣಿ ಮಾತನಾಡಿ, “ನಮ್ಮ ಆಸ್ಪತ್ರೆಯು ವಿವಿಧ ಹಂತಗಳಲ್ಲಿ ಉತ್ತಮ ಸ್ಥಾನ ಪಡೆಯಲು ನಾನ್ ಕ್ಲಿನಿಕ್ ಸಿಬ್ಬಂದಿಯ ಪರಿಶ್ರಮವೂ ಕಾರಣವಾಗಿದೆ. ನಮ್ಮ ಆಸ್ಪತ್ರೆಯ ಸ್ವಚ್ಛತೆ ಖಾಸಗಿ ಆಸ್ಪತ್ರೆಗಳ ಮಟ್ಟಕ್ಕೆ ಸಮನಾಗಿದೆ. ಅವರಿಗೆ ಸರಕಾರದಿಂದ ಸಿಗಬೇಕಾದ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ” ಎಂದು ಹೇಳಿದರು.

ಈ ಸಂದರ್ಭದಲ್ಲಿ ಎಲ್ಲಾ ನಾನ್ ಕ್ಲಿನಿಕ್ ಸಿಬ್ಬಂದಿಗೆ ಶಾಲು ಹೊದಿಸಿ ಹೂಗುಚ್ಛ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಆಯುಷ್ ವೈದ್ಯಾಧಿಕಾರಿ ಡಾ. ಗುರುದತ್ತ ಕುಲಕರ್ಣಿ, ಶುಶ್ರೂಷಾಧಿಕಾರಿಗಳು ಹಾಗೂ ಆಸ್ಪತ್ರೆಯ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ಕಚೇರಿ ಸಿಬ್ಬಂದಿಯಾದ ದೇವಿದಾಸ್ ಗುನಗ ಕಾರ್ಯಕ್ರಮವನ್ನು ನಿರ್ವಹಿಸಿದರು.


About The Author




More Stories
ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆ: ಕೆನರಾ ಎಕ್ಸಲೆನ್ಸ್ ಪಿಯು ಕಾಲೇಜು ಪ್ರಥಮ, ರಾಜ್ಯ ಮಟ್ಟಕ್ಕೆ ಆಯ್ಕೆ!
ಡಿ. ದೇವರಾಜ ಅರಸು 111ನೇ ಜನ್ಮದಿನಾಚರಣೆ: ಸಾಧಕರ ಸ್ವಗೃಹದಲ್ಲೇ ಸನ್ಮಾನಿಸಿ ಗೌರವಿಸಿದ ಅರಸು ವಿಚಾರ ವೇದಿಕೆ.
ದೇವರಾಜ ಅರಸು ಸಾಮಾಜಿಕ ನ್ಯಾಯದ ಹರಿಕಾರ: ಹೊನ್ನಾವರದಲ್ಲಿ ಮಾಜಿ ಸಿಎಂ ಜನ್ಮದಿನಾಚರಣೆ.