ಅಗಲಿದ ಭಟ್ಕಳದ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಮನಸ್ಸು
ಭಟ್ಕಳ : ಭಟ್ಕಳ ತಾಲೂಕಿನ ಹಿರಿಯ ಸಾಹಿತ್ಯಿಕ, ಪತ್ರಕರ್ತ ಹಾಗೂ ಸಮಾಜಮುಖಿ ಚಿಂತಕರಾದ ಡಾ. ರಮೇಶ್ ಸರಾಫ್ (74) ಅವರು ನಿಧನರಾಗಿದ್ದು, ಅವರ ಅಗಲಿಕೆ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರಕ್ಕೆ ಅಪಾರ ನಷ್ಟ ಉಂಟುಮಾಡಿದೆ.
ಶಿರಾಲಿಯ ಸರ್ವತೋಮುಖ ಪ್ರಗತಿಗೆ ತಮ್ಮದೇ ಆದ ಅಮೂಲ್ಯ ಸೇವೆ ಸಲ್ಲಿಸಿದ್ದ ಅವರು, ಭಟ್ಕಳ ತಾಲೂಕಿನ ಪತ್ರಿಕೋದ್ಯಮ, ಸಾಹಿತ್ಯ, ಮಕ್ಕಳ ಬೇಸಿಗೆ ಶಿಬಿರಗಳು, ಮಕ್ಕಳ ಯಕ್ಷಗಾನ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿ ಅನೇಕರಿಗೆ ಪ್ರೇರಣೆಯಾಗಿದ್ದರು.
ಭಟ್ಕಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಭಟ್ಕಳ ತಾಲೂಕು ಐದನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಅಪಾರ ಗೌರವಕ್ಕೆ ಪಾತ್ರರಾಗಿದ್ದರು. “ವೈರಸ ಶಿರಾಲಿ” (ವೈದ್ಯ ರಮೇಶ್ ಸರಾಫ್) ಎಂಬ ಕಾವ್ಯನಾಮದಲ್ಲಿ ರಾಜ್ಯಮಟ್ಟದ ಪತ್ರಿಕೆಗಳಲ್ಲಿ ನೂರಾರು ಲೇಖನಗಳನ್ನು ಪ್ರಕಟಿಸಿ ಸಾಹಿತ್ಯ ಕ್ಷೇತ್ರಕ್ಕೆ ವಿಶಿಷ್ಟ ಕೊಡುಗೆ ನೀಡಿದ್ದರು. ಗಣಿ ಧೂಳಿನಿಂದ ಮೂಡಿಬಂದ ಚುಟುಕುಗಳು, ಅಂದ ವ್ಯಕ್ತಿತ್ವಕ್ಕೆ ಚಂದ ಪಂಚಾAಗ, ಶಾಲೆಗೆ ಮೇಷ್ಟ್ರು ಬಂದಿದ್ದಾರೆ ಮುಂತಾದ ಕೃತಿಗಳನ್ನು ರಚಿಸಿದ್ದರು. ಸಾಹಿತ್ಯ ಸಮ್ಮೇಳನದ ಗೋಷ್ಠಿಗಳಲ್ಲಿ ಭಾಗವಹಿಸಿದ್ದರು.

ಇದಲ್ಲದೆ, “ಆಚಾರ” ಮತ್ತು “ಬೆಳಕಿಂಡಿ” ಪತ್ರಿಕೆಗಳನ್ನು ಪ್ರಾರಂಭಿಸುವ ಮೂಲಕ ಭಟ್ಕಳದ ಪತ್ರಿಕೋದ್ಯಮ ಕ್ಷೇತ್ರಕ್ಕೆ ಬುನಾದಿ ಹಾಕಿದವರಾಗಿ ಗುರುತಿಸಿಕೊಂಡಿದ್ದರು. ಕ್ರಿಯಾಶೀಲತೆ ಮತ್ತು ಸೃಜನಶೀಲತೆ ಅವರ ಬದುಕಿನ ಅವಿಭಾಜ್ಯ ಅಂಗಗಳಾಗಿದ್ದು, ಸರಳ ವ್ಯಕ್ತಿತ್ವ, ಸಮಾಜಮುಖಿ ಚಿಂತನೆ ಮತ್ತು ಕನ್ನಡದ ಮೇಲಿನ ಅಪಾರ ಅಭಿಮಾನದಿಂದ ಜನಮನ ಗೆದ್ದಿದ್ದರು.ಕೊಂಕಣಿ ಮಾತೃ ಭಾಷೆಯಾಗಿದ್ದರೂ ಭಟ್ಕಳದಲ್ಲಿ ಕನ್ನಡದ ಸಾಹಿತ್ಯದೀಪ ಬೆಳಗಿದ್ದರು.
ಭಟ್ಕಳ ಲಯನ್ಸ್ ಕ್ಲಬ್ ನ ಅಧ್ಯಕ್ಷರಾಗಿ ಸಾಮಾಜಿಕ ಸೇವೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.
ಅವರ ನಿಧನಕ್ಕೆ ಭಟ್ಕಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಶಿರಾಲಿಯ ಕಲಾಸಿರಿ ಪ್ರತಿಷ್ಠಾನ, ಶಿರಾಲಿಯ ಗುರು ನಮನ ಬಳಗ ಹಾಗೂ ಇನ್ನಿತರ ಸಾಂಸ್ಕೃತಿಕ ಹಾಗೂ ಸಾಮಾಜಿಕ ವಲಯದ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಅವರ ಅಗಲಿಕೆ ಭಟ್ಕಳದ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ.

More Stories
ಬಕ್ರೀದ್ ಹಿನ್ನೆಲೆ ಭಟ್ಕಳದಲ್ಲಿ ಕಟ್ಟೆಚ್ಚರ: ಮೇ 30ರವರೆಗೆ ಅಧಿಕಾರಿಗಳಿಗೆ ಕೇಂದ್ರ ಸ್ಥಾನದಲ್ಲೇ ಇರಲು ಸೂಚನೆ
ಮನೆ ಕಳ್ಳತನ ಪ್ರಕರಣ: 8 ಗಂಟೆಯೊಳಗೆ ಆರೋಪಿಗಳ ಬಂಧನ
ಎಲ್ಲರ ಮೆಚ್ಚುಗೆಗೆ ಪಾತ್ರವಾದ ಬಿಬಿಎ ವಿಭಾಗದ ಬಿಜ್ ಲೀಡ್ ಎಕ್ಸ್ 2025-26 ಗ್ರ್ಯಾಂಡ್ ಫಿನಾಲೆ