ಭಟ್ಕಳ: ಗೊಂಡ ಸಮುದಾಯದವರಿಗೆ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣಪತ್ರ ಹಾಗೂ ಸಿಂಧುತ್ವ ಪ್ರಮಾಣಪತ್ರ ವಿತರಿಸಬೇಕು ಎಂದು ಆಗ್ರಹಿಸಿ ಗೊಂಡ ಸಮಾಜದವರು ಸೋಮವಾರ ಪಟ್ಟಣದಲ್ಲಿ ಮೌನ ಮೆರವಣಿಗೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಗೊಂಡ ಸಮಾಜ ಅಭಿವೃದ್ಧಿ ಸಂಘದ ಭಟ್ಕಳ ತಾಲೂಕು ಅಧ್ಯಕ್ಷ ರಾಘವೇಂದ್ರ ಎಸ್. ಗೊಂಡ ನೇತೃತ್ವದಲ್ಲಿ ನಡೆದ ಮೆರವಣಿಗೆ ಕೋಕ್ತಿ ಬೈಲ್‌ನಿಂದ ಆರಂಭಗೊAಡು ಬಂದರ ರಸ್ತೆ 2ನೇ ಕ್ರಾಸ್, ವೆಂಕಟರಮಣ ದೇವಸ್ಥಾನ ರಸ್ತೆ, ನೂರು ಮಸೀದಿ ಪಕ್ಕದ ರಾಷ್ಟ್ರೀಯ ಹೆದ್ದಾರಿ 66 ಮೂಲಕ ತಾಲೂಕು ಸೌಧದವರೆಗೆ ಸಾಗಿತು.

ತಾಲೂಕು ಸೌಧದ ಎದುರು ಪ್ರತಿಭಟನಾಕಾರರು ಕೆಲಕಾಲ ಧರಣಿ ನಡೆಸಿದರು. ಸಹಾಯಕ ಆಯುಕ್ತರು ಹಾಗೂ ತಹಶೀಲ್ದಾರ್ ಗೈರಾಗಿದ್ದ ಹಿನ್ನೆಲೆಯಲ್ಲಿ ಶಿರಸ್ತೇದಾರ್ ಪ್ರವೀಣ್ ಕುಮಾರ್ ಅವರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.
ಮನವಿಯಲ್ಲಿ, ಭಟ್ಕಳ ತಾಲೂಕಿನಾದ್ಯಂತ ಸುಮಾರು 15 ಸಾವಿರಕ್ಕೂ ಅಧಿಕ ಗೊಂಡ ಬುಡಕಟ್ಟು ಜನರು ವಾಸವಿದ್ದು, ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಹಿಂದುಳಿದ ಸ್ಥಿತಿಯಲ್ಲಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಹೆಚ್ಚಿನವರು ಗುಡ್ಡಗಾಡು ಪ್ರದೇಶಗಳಲ್ಲಿ ವಾಸವಾಗಿದ್ದು, ತಮ್ಮದೇ ಆದ ಆಚರಣೆ, ಸಂಪ್ರದಾಯ ಹಾಗೂ ಧಾರ್ಮಿಕ ವಿಧಿವಿಧಾನಗಳನ್ನು ತಲೆಮಾರುಗಳಿಂದ ಪಾಲಿಸಿಕೊಂಡು ಬರುತ್ತಿದ್ದಾರೆ ಎಂದು ವಿವರಿಸಲಾಗಿದೆ.

ಗೊಂಡ ಬುಡಕಟ್ಟು ಸಮುದಾಯವು ಭಟ್ಕಳ ತಾಲೂಕಿನಲ್ಲಿ ಕೇಂದ್ರಿಕೃತಗೊAಡಿದ್ದು, ಉಡುಪಿ ಜಿಲ್ಲೆಯ ಬೈಂದೂರು ಹಾಗೂ ಶಿವಮೊಗ್ಗ ಜಿಲ್ಲೆಯ ಸಾಗರವರೆಗೂ ವಿಸ್ತರಿಸಿಕೊಂಡಿದೆ. ಜಾತಿಗೊಂಡ, ಸೀಮೆಗೊಂಡ, ಒಕ್ಕೂಟಗೊಂಡ ಹಾಗೂ ಊರಿನಗೊಂಡ ಎಂಬ ವಿವಿಧ ಆಯಾಮಗಳ ಮುಖಂಡ ವ್ಯವಸ್ಥೆಯ ಮೂಲಕ ಸಮಾಜ ನಡೆದುಕೊಂಡು ಬಂದಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
1950ರಲ್ಲಿ ಹೊರಡಿಸಲಾದ ಪರಿಶಿಷ್ಟ ಪಂಗಡ ಆದೇಶದಲ್ಲಿ ಗೊಂಡ ಬುಡಕಟ್ಟಿನ ಜನರಿಗೆ ಪರಿಶಿಷ್ಟ ಪಂಗಡದ ಸ್ಥಾನಮಾನ ನೀಡಲಾಗಿದೆ. 1956ರ ಡಿಸೆಂಬರ್ 10ರಂದು ಮೈಸೂರು ಸರ್ಕಾರ ಹೊರಡಿಸಿದ ಗಜೆಟ್ ಪ್ರಕಟಣೆಯಲ್ಲೂ ಉತ್ತರ ಕನ್ನಡ ಜಿಲ್ಲೆಯ ಗೊಂಡ ಬುಡಕಟ್ಟಿನವರು ಪರಿಶಿಷ್ಟ ಪಂಗಡಕ್ಕೆ ಸೇರಿದವರು ಎಂದು ಉಲ್ಲೇಖಿಸಲಾಗಿದೆ ಎಂದು ಮನವಿಯಲ್ಲಿ ಪ್ರಸ್ತಾಪಿಸಲಾಗಿದೆ.

ಇತ್ತೀಚಿನ ದಿನಗಳಲ್ಲಿ ಗೊಂಡ ಮತ್ತು ಗೊಂಡ್ ಎಂಬ ಹೆಸರಿನ ವ್ಯತ್ಯಾಸದ ಆಧಾರದ ಮೇಲೆ ಜಾತಿ ಪ್ರಮಾಣಪತ್ರ ಹಾಗೂ ಸಿಂಧುತ್ವ ಪ್ರಮಾಣಪತ್ರ ನೀಡಲು ತೊಂದರೆ ಉಂಟುಮಾಡಲಾಗುತ್ತಿದೆ ಎಂದು ಸಮುದಾಯದವರು ಆರೋಪಿಸಿದ್ದಾರೆ. ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳ ಸ್ಪಷ್ಟೀಕರಣ ಆದೇಶದಲ್ಲಿ ಗೊಂಡ ಹಾಗೂ ಗೊಂಡ್ ಎರಡೂ ಒಂದೇ ಎಂದು ತಿಳಿಸಿದ್ದರೂ ತಹಶೀಲ್ದಾರ್ ಕಚೇರಿಯಿಂದ ಪ್ರಮಾಣಪತ್ರ ನೀಡಲು ನಿರಾಕರಣೆ ನಡೆಯುತ್ತಿದೆ ಎಂದು ದೂರಿದ್ದಾರೆ.

ಶಾಲಾ ದಾಖಲಾತಿಗಳಲ್ಲಿ ತಪ್ಪುಗಳಿದ್ದಲ್ಲಿ ಅಥವಾ ದಾಖಲೆಗಳೇ ಲಭ್ಯವಿರದಿದ್ದಲ್ಲಿ ಸ್ಥಳೀಯ ಮಟ್ಟದಲ್ಲಿ ಪರಿಶೀಲನೆ ನಡೆಸಿ ಜಾತಿ ಪ್ರಮಾಣಪತ್ರ ನೀಡಬೇಕು. ಜಾತಿ ಹಾಗೂ ಸಿಂಧುತ್ವ ವಿಚಾರದಲ್ಲಿ ಮೂರನೇ ವ್ಯಕ್ತಿಗಳ ತಕರಾರುಗಳನ್ನು ಪರಿಗಣಿಸಬಾರದು. ಗೊಂಡ ಸಮುದಾಯದ ಜಾತಿಯನ್ನು ಓಟಿಸಿ ಕ್ರಮದಲ್ಲಿ ಅಳವಡಿಸಿ ತಕ್ಷಣ ಪ್ರಮಾಣಪತ್ರ ವಿತರಣೆ ಪ್ರಕ್ರಿಯೆ ಆರಂಭಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಮೌನ ಮೆರವಣಿಗೆಯಲ್ಲಿ ಗೊಂಡ ಸಮುದಾಯದ ಮುಖಂಡರು, ಮಹಿಳೆಯರು, ಯುವಕರು ಹಾಗೂ ವಿವಿಧ ಗ್ರಾಮಗಳ ಸಮುದಾಯದ ಸದಸ್ಯರು ಭಾಗವಹಿಸಿದ್ದರು.

More Stories
ಬಕ್ರೀದ್ ಹಿನ್ನೆಲೆ ಭಟ್ಕಳದಲ್ಲಿ ಕಟ್ಟೆಚ್ಚರ: ಮೇ 30ರವರೆಗೆ ಅಧಿಕಾರಿಗಳಿಗೆ ಕೇಂದ್ರ ಸ್ಥಾನದಲ್ಲೇ ಇರಲು ಸೂಚನೆ
ಮನೆ ಕಳ್ಳತನ ಪ್ರಕರಣ: 8 ಗಂಟೆಯೊಳಗೆ ಆರೋಪಿಗಳ ಬಂಧನ
ಎಲ್ಲರ ಮೆಚ್ಚುಗೆಗೆ ಪಾತ್ರವಾದ ಬಿಬಿಎ ವಿಭಾಗದ ಬಿಜ್ ಲೀಡ್ ಎಕ್ಸ್ 2025-26 ಗ್ರ್ಯಾಂಡ್ ಫಿನಾಲೆ