May 23, 2026

ಬರ್ಗಿಯಲ್ಲಿ ಮನ್ನಣೆಯ ಮಣೆಯೇರಿದ ಗಾಯತ್ರಿ ಗೌಡ

ಕುಮಟಾ : ತಾಲ್ಲೂಕಿನ ಬರ್ಗಿಯ ಸರ್ಕಾರಿ ಪ್ರೌಢ ಶಾಲೆಗೆ ಸಂಸ್ಕೃತ ಶಿಕ್ಷಕರ ಹುದ್ದೆಯು ಮಂಜೂರಾಗಿ ಗ್ರಾಮೀಣ ಬಡ ವಿದ್ಯಾರ್ಥಿಗಳು ಸಂಸ್ಕೃತ ವಿಷಯವನ್ನು ಆಯ್ದು ಕಲಿಯಲು ಪೂರಕವಾಗಿ ಸಂಸ್ಕೃತ ಭಾಷೆಯು ಬೋಧನೆಗೊಳ್ಳುವಲ್ಲಿ ಬಹು ಮುಖ್ಯವಾದ ಪಾತ್ರವನ್ನು ವಹಿಸಿದ್ದ ಉತ್ತರ ಕನ್ನಡ ಜಿಲ್ಲಾ ಪಂಚಾಯತದ ನಿಕಟಪೂರ್ವ ಜನಪ್ರಿಯ ಸದಸ್ಯರಾದ ಪ್ರದೀಪ ನಾಯಕ ದೇವರಬಾವಿ ಹಾಗೂ ಗಾಯತ್ರಿ ಮಂಜುನಾಥ ಗೌಡ – ಇವರಿಬ್ಬರಲ್ಲಿ ಪ್ರದೀಪ ನಾಯಕರ ಮುಖ್ಯ ಪ್ರಾಯೋಜಕತ್ವದಲ್ಲಿ ಬರ್ಗಿಯ ಶ್ರೀ ಮಹಾಲಿಂಗೇಶ್ವರ ವಿದ್ಯಾಪೀಠವು ವಿವಿಧ ಸಂಘಟನೆಗಳ ಸಹಯೋಗದಲ್ಲಿ ಸಂಘಟಿಸಿದ ಬರ್ಗಿ ಸಂಸ್ಕೃತೋತ್ಸವದಲ್ಲಿ ಗಾಯತ್ರಿ ಗೌಡರವರನ್ನು ಆಪ್ತವಾಗಿ ಮಾನಿಸಲಾಯಿತು. ಅವರಿಗೆ ಈ ಸುಸಂದರ್ಭದಲ್ಲಿ “ಸಂಸ್ಕಾರ ಗಾಯತ್ರಿ” – ಎಂಬ ಉಪಾದಿಯನ್ನು ಪ್ರದತ್ತಗೊಳಿಸಲಾಯಿತು.

ಅವರ ಅಭಿನಂದನೆಯ ಕುರಿತಂತೆ ಪ್ರಸ್ತಾವಿಕವಾಗಿ ಮಾತನ್ನಾಡಿದ ಬರ್ಗಿ ಪ್ರೌಢ ಶಾಲೆಯ ಸಂಸ್ಕೃತ ಅಧ್ಯಾಪಕರಾದ ಮಂಜುನಾಥ ಗಾಂವಕರ್ ಬರ್ಗಿಯವರು, ಉನ್ನತವಾದ ವಿದ್ಯಾರ್ಹತೆಯನ್ನು ಹೊಂದಿರುವ ಗಾಯತ್ರಿ ಗೌಡರವರು ಸಮಾಜದ ಕುರಿತಂತೆಯೂ ಅಪಾರವಾದ ಕಳಕಳಿಯನ್ನು ಹೊಂದಿರುವ ಸಜ್ಜನಿಕೆಯ ಧೀಮಂತ ವ್ಯಕ್ತಿಯಾಗಿದ್ದು, ಅವರಿಗೆ ಶಿಕ್ಷಣ, ಸಾಹಿತ್ಯ, ಸಂಸ್ಕೃತದ ಕುರಿತಂತೆ ಇರುವ ಅಭಿಮಾನವು ವಿಶೇಷವಾಗಿದ್ದು, ಬರ್ಗಿಯಲ್ಲಿ ಸಂಸ್ಕೃತವು ಬೆಳಕುಗೊಳ್ಳಲು ತೈಲವಾಗಿ ತಮ್ಮನ್ನು ತೆತ್ತುಕೊಂಡ ಅವರನ್ನು ಬರ್ಗಿಯ ಸಂಸ್ಕೃತೋತ್ಸವದಲ್ಲಿ ಮಾನಿಸುವಲ್ಲಿ ಧನ್ಯತೆ ಇದೆ ಎಂದರು.

ಸನ್ಮಾನವನ್ನು ಸ್ವೀಕರಿಸಿದ ಗಾಯತ್ರಿ ಗೌಡರವರು ಮಾತನಾಡುತ್ತ,ಗ್ರಾಮೀಣ ಪ್ರದೇಶವಾದ ಬರ್ಗಿಯಲ್ಲಿನ ಸರ್ಕಾರಿ ಪ್ರೌಢ ಶಾಲೆಯನ್ನು ಮುನ್ನಡೆಸುವಲ್ಲಿ ಇಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ಥಳೀಯರಾದ ಸಂಸ್ಕೃತ ಅಧ್ಯಾಪಕರಾಗಿರುವ ಮಂಜುನಾಥ ಬರ್ಗಿಯವರ ಕೊಡುಗೆಯು ಅನನ್ಯವಾಗಿದ್ದು, ಅವರ ಪ್ರತಿಭಾ ಸಂಪನ್ನವಾದ ವಿದ್ವತ್ತಿನ ಪಾಠವನ್ನು ಕೇಳುವ ವಿದ್ಯಾರ್ಥಿಗಳೇ ಭಾಗ್ಯಶಾಲಿಗಳು ಎಂದರು.
ಈ ಕಾರ್ಯಕ್ರಮವನ್ನು ಬರ್ಗಿಯ ಶ್ರೀ ಮಹಾಲಿಂಗೇಶ್ವರ ವಿದ್ಯಾ ಪೀಠವು ನಾಗನೆಲೆಯ ಕನ್ನಡ ಭಾರತೀ ಪ್ರಪಂಚ, ಡಾ. ಗಜಾನನ ನಾಯಕ ಅಭಿಮಾನಿ ಬಳಗ, ಬರ್ಗಿಯ ಸರ್ಕಾರಿ ಪ್ರೌಢ ಶಾಲೆಯ ಶ್ರೀ ಘಟಬೀರ ಪ್ರಸಾದಿತ ಹಳೆಯ ವಿದ್ಯಾರ್ಥಿಗಳ ಸಂಘ, ಕರ್ನಾಟಕ ಸಂಸ್ಕೃತ ಪರಿಷತ್, ಕರ್ನಾಟಕ ರಣಧೀರ ವೇದಿಕೆ, ತೊರ್ಕೆಯ ಆನಂದ ಕವರಿ ಪ್ರತಿಷ್ಠಾನ ಹಾಗೂ ಉತ್ತರ ಕನ್ನಡ ಜಿಲ್ಲಾ ಪಂಚಾಯತದ ಪ್ರದೀಪ ನಾಯಕ ದೇವರಬಾವಿಯವರ ಸಹಯೋಗದಲ್ಲಿ ಸಂಘಟಿಸಿತ್ತು.

ಸಮಾರಂಭವನ್ನು ಕರ್ನಾಟಕ ರಣಧೀರ ವೇದಿಕೆಯ ಕುಮಟಾ ತಾಲ್ಲೂಕಾ ಘಟಕದ ಅಧ್ಯಕ್ಷರಾದ ಮಿರ್ಜಾನಿನ ಕನ್ನಡದ ಸಮೀರರು ಉದ್ಘಾಟಿಸಿದರು. ಪ್ರದೀಪ ನಾಯಕ ದೇವರಬಾವಿಯವರು ಸಭಾಧ್ಯಕ್ಷತೆಯನ್ನು ವಹಿಸಿದ್ದರು. ವಿಶ್ವಖ್ಯಾತಿಯ ಕ್ರಿಕೆಟ್ ಕೋಚರ್ ರಾಘವೇಂದ್ರ ದಿವಗಿಯವರ ತೀರ್ಥರೂಪರಾದ ಮೋಹನ ಭಂಡಾರಿ ಮಾಸ್ತರರು, ಬರ್ಗಿ ಪ್ರೌಢ ಶಾಲೆಯ ಹಳೆಯ ವಿದ್ಯಾರ್ಥಿಗಳ ಸಂಘದ ಪ್ರಧಾನ ಕಾರ್ಯದರ್ಶಿ ರಮೇಶ ನಾಯ್ಕ, ಕರ್ನಾಟಕ ರಾಜ್ಯ ಬೋಧಕರ ಸಂಘದ ರಾಜ್ಯ ಕೋಶಾಧ್ಯಕ್ಷರಾದ ಶಿವಚಂದ್ರ ಹಾಗೂ ಕನ್ನಡ ಭಾರತಿ ಪ್ರಪಂಚದ ಸಂಚಾಲಕರಾದ ನಾರಾಯಣ ನಾಗು ನಾಯಕ ಮೊದಲಾದವರಿದ್ದರು.

About The Author

error: Content is protected !!