ಶಿರಸಿ : ಪೌಷ್ಟಿಕ ಆಹಾರದ ಸೇವನೆಯು ಕ್ಷಯ ರೋಗಿಗಳ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ, ಔಷಧಿಗಳ ಪರಿಣಾಮಕಾರಿತ್ವವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಹಿರಿಯ ಕ್ಷಯ ರೋಗ ಚಿಕಿತ್ಸಾ ಮೇಲ್ವಿಚಾರಕರಾದ ಶ್ರೀ ಉದಯಶಂಕರ ಭಂಡಾರಿರವರು ಅಭಿಪ್ರಾಯ ಪಟ್ಟರು. ಅವರು ಸಿರಸಿಯ ಹೆಗಡೆಕಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಾನಿಗಳಿಂದ ನೀಡಲ್ಪಟ್ಟ ಪೌಷ್ಟಿಕ ಆಹಾರದ ಕಿಟ್ ವಿತರಿಸಿ ಮಾತನಾಡಿದರು.


ತಾಲೂಕಿನ ಕ್ಷಯ ರೋಗ ನಿರ್ಮೂಲನಾ ಕಾರ್ಯಕ್ರಮವು ತಾಲೂಕಾ ಆರೋಗ್ಯಾಧಿಕಾರಿಗಳಾದ ಡಾ. ಮಧುಕರ ಪಾಟೀಲರವರ ನೇತೃತ್ವದಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಸರಿಯಾದ ಪೋಷಣೆಯು ದೇಹದ ತೂಕವನ್ನು ಹೆಚ್ಚಿಸಿಕೊಳ್ಳಲು, ಕಾಯಿಲೆಯಿಂದ ಆಗುವ ದೌರ್ಬಲ್ಯವನ್ನು ಕಡಿಮೆ ಮಾಡಲು ಮತ್ತು ಶೀಘ್ರ ಗುಣಮುಖರಾಗಲು ಸಹಾಯ ಮಾಡುತ್ತದೆ ಹಾಗಾಗಿ ನಿಕ್ಷಯ ಮಿತ್ರ ಯೋಜನೆ ಅಡಿಯಲ್ಲಿ ಪೌಷ್ಟಿಕ ಆಹಾರದ ಕಿಟ್ ಒದಗಿಸಲು ಹೆಚ್ಚಿನ ಪ್ರಮಾಣದಲ್ಲಿ ದಾನಿಗಳು ಮುಂದೆ ಬರಬೇಕೆಂದು ಅವರು ಕರೆ ನೀಡಿದರು.

ದಾನಿಗಳಾದ ಹೆಗಡೆಕಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿ ಶ್ರೀಮತಿ ಲತಾ ಆಚಾರಿ ರವರು ಮಾತನಾಡಿ ಸೂಕ್ತ ಚಿಕಿತ್ಸೆಯ ಜೊತೆಗೆ ಪೌಷ್ಟಿಕ ಆಹಾರದ ಸೇವನೆ ಕ್ಷಯ ರೋಗಿಯನ್ನು ಶೀಘ್ರ ಗುಣಮುಖವಾಗುವಂತೆ ಮಾಡುತ್ತದೆ. ಇದು ಕ್ಷಯ ಮುಕ್ತ ಭಾರತದ ನಿರ್ಮಾಣಕ್ಕೆ ಪೂರಕವಾಗಿದೆ, ಕ್ಷಯ ನಿವಾರಣೆಯಲ್ಲಿ ಪ್ರತಿಯೊಬ್ಬರ ಪಾತ್ರ ಅತಿ ಮುಖ್ಯವಾದದ್ದು ಈ ದಿಶೆಯಲ್ಲಿ ಪ್ರತಿಯೊಬ್ಬರೂ ಮುಂದೆ ಬರಬೇಕು ಎಂದರು.

ಆರೋಗ್ಯ ನಿರೀಕ್ಷಕರಾದ ವಿ. ಎಂ. ಸುಧಾಕರ್ ರವರು ಮಾತನಾಡಿ ಪೌಷ್ಟಿಕ ಆಹಾರದ ಬೆಂಬಲ ಕ್ಷಯ ರೋಗಿಗಳಿಗೆ ನಿಜವಾದ ಬಲವಾಗಿದೆ ಈ ನಿಟ್ಟಿನಲ್ಲಿ ದಾನಿಗಳು ಮುಂದೆ ಬರುವುದು ಶ್ಲಾಘನೀಯವಾದದ್ದು ಎಂದು ಹೇಳಿ ಕ್ಷಯ ರೋಗಿಗಳು ಪಾಲಿಸಬೇಕಾದ ವಿಧಾನಗಳನ್ನು ವಿವರಿಸಿದರು.
ಈ ಸಮಯದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಕ್ಷಯ ರೋಗಿಗಳಿಗೆ ಪೌಷ್ಟಿಕಾಂಶದ ಕಿಟ್ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಸುರೇಖಾ ಚಾಪೋಲೆಕರ್ ಸ್ವಾಗತಿಸಿದರೆ, ರೇಣುಕಾ ಗಡ್ಕರಿ ಹಾಗೂ ಫಾರ್ಮಸಿ ಅಧಿಕಾರಿ ದೀಪ್ತಿ ನಿರೂಪಿಸಿದರು. ಸಮುದಾಯ ಆರೋಗ್ಯ ಅಧಿಕಾರಿ ದಿವ್ಯಾ ಪ್ರಾಸ್ತಾವಿಕವಾಗಿ ಮಾತನಾಡಿದರೆ ಚಂದ್ರಕಲಾ ಪಟಗಾರ ವಂದಿಸಿದರು. ಕಾರ್ಯಕ್ರಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳು,ಆಶಾ ಕಾರ್ಯಕರ್ತೆಯರು, ಹಾಗೂ ಇತರರು ಉಪಸ್ಥಿತರಿದ್ದರು.

More Stories
ವಿಜಯನಗರ ಜಿಲ್ಲೆಯ ಮನೆಮನೆಗೆ ತಲುಪಲಿದೆ ಗೀತಾ ಸಂದೇಶ: ಸ್ವರ್ಣವಲ್ಲೀ ಶ್ರೀಗಳ ನೇತೃತ್ವದಲ್ಲಿ ಬೃಹತ್ ಅಭಿಯಾನ
ರೊಟೇರಿಯನ್ ಮ್ಯುಸಿಷಿಯನ್ ಐಡಲ್: ಅರುಣ್ ನಾಯಕ್ ಹಾಗೂ ರಾಘವೇಂದ್ರ ಸಕಲಾತಿ ಸಾಧನೆ
ಶಿರಸಿ ಬಸ್ ನಿಲ್ದಾಣದ ಸರಣಿ ಕಳ್ಳತನದ ಜಾಲ ಭೇದಿಸಿದ ಪೊಲೀಸರು: ಅಂತರ ಜಿಲ್ಲಾ ಮಹಿಳಾ ಕದೀಮೆ ಬಂಧನ, ₹9 ಲಕ್ಷದ ಚಿನ್ನಾಭರಣ ವಶ