May 27, 2026

ಹೊನ್ನಾವರದಲ್ಲಿ ಶಾಸಕ ದಿನಕರ ಶೆಟ್ಟಿ ಹೇಳಿಕೆಮೂರಿನಕಟ್ಟೆ ಪುನರ್ ನಿರ್ಮಾಣ ಶತಸಿದ್ಧ, ಹೋರಾಟ ಮುಂದುವರಿಯಲಿದೆ

ಹೊನ್ನಾವರ: ನೆರೆಯ ಭಟ್ಕಳ ತಾಲೂಕಿನ ಮೂರಿನಕಟ್ಟೆ ಧ್ವಂಸ ಘಟನೆಗೆ ಸಂಬAಧಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕುಮಟಾ-ಹೊನ್ನಾವರ ಕ್ಷೇತ್ರದ ಶಾಸಕ ದಿನಕರ ಶೆಟ್ಟಿ, ಮೂರಿನಕಟ್ಟೆ ಪುನರ್ ನಿರ್ಮಾಣ ಶತಸಿದ್ಧ. ಈ ಕುರಿತು ರಾಜ್ಯ ಬಿಜೆಪಿ ನಾಯಕರೊಂದಿಗೆ ಚರ್ಚೆ ನಡೆಸಿ ಮುಂದಿನ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ತಾಲೂಕಿನ ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕರು ಹಾಗೂ ಕಾರ್ಯಕರ್ತರ ಅಹವಾಲು ಆಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾನೂನು-ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ ಎಂದು ಆರೋಪಿಸಿದರು. ವೆಂಕಟಾಪುರ ನದಿಯಲ್ಲಿ 11 ಮಂದಿ ಮೃತಪಟ್ಟಿರುವ ದುರ್ಘಟನೆಯ ಶೋಕದ ಮಧ್ಯೆಯೇ ಭಟ್ಕಳದ ಮೂರಿನಕಟ್ಟೆ ಧ್ವಂಸಗೊಳಿಸಿರುವ ಘಟನೆ ಹಿಂದು ಸಮಾಜಕ್ಕೆ ನೋವುಂಟು ಮಾಡಿದೆ ಎಂದರು.

ಐಆರ್‌ಬಿ ರಸ್ತೆ ಅಗಲೀಕರಣದ ವೇಳೆ ಸ್ಥಳಾಂತರಗೊAಡಿದ್ದ ಕಟ್ಟೆಯನ್ನು ಬಳಿಕ ಸಮೀಪದಲ್ಲೇ ಪುನರ್ ನಿರ್ಮಿಸಲಾಗಿತ್ತು. ಆದರೆ ಅದನ್ನೂ ಹಾನಿಗೊಳಿಸಲಾಗಿದೆ. ತಡೆಯಲು ಯತ್ನಿಸಿದ ಪೊಲೀಸರ ಮೇಲೆಯೇ ಉದ್ರಿಕ್ತ ಗುಂಪು ಹಲ್ಲೆ ನಡೆಸಿದೆ ಎಂದು ಆರೋಪಿಸಿದರು.

ಹಿಂದುಗಳು ಬೇರೆ ಧರ್ಮಗಳ ಆಚರಣೆಗೆ ತೊಂದರೆ ಕೊಟ್ಟಿಲ್ಲ. ಆದರೆ ನಿರಂತರವಾಗಿ ಹಿಂದು ಧಾರ್ಮಿಕ ಆಚರಣೆಗಳಿಗೆ ಅಡ್ಡಿಪಡಿಸುವ ಘಟನೆಗಳು ನಡೆಯುತ್ತಿವೆ. ಸರ್ಕಾರದ ತುಷ್ಟೀಕರಣ ಮತ್ತು ಓಲೈಕೆ ರಾಜಕೀಯದಿಂದ ಸಮಾಜವಿರೋಧಿ ಶಕ್ತಿಗಳಿಗೆ ಧೈರ್ಯ ಬಂದಿದೆ ಎಂದು ಅವರು ಟೀಕಿಸಿದರು.

ಈ ಘಟನೆ ಹಿಂದುಗಳ ಭಾವನೆಗೆ ಧಕ್ಕೆಯಾಗಿದೆ. ಹಿಂದು ಸಮಾಜದವರು ಒಟ್ಟಾಗಿ ಕಟ್ಟೆ ನಿರ್ಮಾಣ ಮಾಡಲಿದ್ದಾರೆ. ಜಿಲ್ಲೆಯಲ್ಲಿ ಬಿಜೆಪಿಯ ಏಕೈಕ ಶಾಸಕನಾಗಿರುವ ಕಾರಣ ರಾಜ್ಯ ನಾಯಕರೊಂದಿಗೆ ಚರ್ಚಿಸಿ, ಅಧಿವೇಶನದಲ್ಲೂ ವಿಷಯ ಪ್ರಸ್ತಾಪಿಸುವುದಾಗಿ ಹೇಳಿದರು. ಪೊಲೀಸರು ಎಷ್ಟೇ ಪ್ರಕರಣ ದಾಖಲಿಸಿದರೂ ಹಿಂದಕ್ಕೆ ಸರಿಯುವ ಪ್ರಶ್ನೆಯೇ ಇಲ್ಲ ಎಂದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧವೂ ವಾಗ್ದಾಳಿ ನಡೆಸಿದ ಶಾಸಕ ದಿನಕರ ಶೆಟ್ಟಿ, ಅಧಿಕಾರಕ್ಕಾಗಿ ಮುಸ್ಲಿಂ ಸಮುದಾಯದ ಓಲೈಕೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಪರೇಶ್ ಮೇಸ್ತ ಪ್ರಕರಣದಲ್ಲಿ ಅನೇಕ ಯುವಕರ ಮೇಲೆ ಹಾಗೂ ತಮ್ಮ ಮೇಲೂ ಪ್ರಕರಣ ದಾಖಲಾಗಿತ್ತು ಎಂದು ನೆನಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಂಡಲಾಧ್ಯಕ್ಷ ಯೋಗೇಶ ಮೇಸ್ತ, ಪ್ರಧಾನ ಕಾರ್ಯದರ್ಶಿ ಗೋವಿಂದ ಗೌಡ, ಪರಮೇಶ್ವರ ನಾಯ್ಕ ಹಳದೀಪುರ, ಮಾಜಿ ಉಪಾಧ್ಯಕ್ಷ ಸುರೇಶ ಹೊನ್ನಾವರ, ಸದಸ್ಯ ಸುಭಾಷ ಹರಿಜನ ಹಾಗೂ ಇತರ ಮುಖಂಡರು ಉಪಸ್ಥಿತರಿದ್ದರು.

ಭಟ್ಕಳ ದುರಂತಕ್ಕೆ ಸಂತಾಪ
ಭಟ್ಕಳದ ತಟ್ಟಿಹಕ್ಕಲು ಸಮೀಪ ನಡೆದ ದುರಂತದಲ್ಲಿ 11 ಮಂದಿ ಮೃತಪಟ್ಟಿರುವ ಘಟನೆಗೆ ಶಾಸಕ ದಿನಕರ ಶೆಟ್ಟಿ ಸಂತಾಪ ಸೂಚಿಸಿದರು. ಮೃತರ ಕುಟುಂಬಗಳಿಗೆ ಕೇಂದ್ರ ಸರ್ಕಾರದಿಂದ ತಲಾ ರೂ.2 ಲಕ್ಷ ಪರಿಹಾರ ಹಾಗೂ ಗಾಯಾಳುಗಳಿಗೆ ರೂ.50 ಸಾವಿರ ಪರಿಹಾರ ಘೋಷಿಸಲಾಗಿದೆ ಎಂದು ತಿಳಿಸಿದರು. ಮೃತರ ಕುಟುಂಬಗಳಿಗೆ ದುಃಖ ಭರಿಸುವ ಶಕ್ತಿ ದೇವರು ನೀಡಲಿ ಎಂದು ಪ್ರಾರ್ಥಿಸಿದರು.

About The Author

error: Content is protected !!