ಅಥಣಿ: ಸಮಾಜವನ್ನು ಕಾಡುತ್ತಿರುವ ಪ್ರಮುಖ ಪಿಡುಗುಗಳಾದ ಬಾಲ್ಯ ವಿವಾಹ ಹಾಗೂ ವರದಕ್ಷಿಣೆ ಪದ್ಧತಿಯನ್ನು ಸಂಪೂರ್ಣ ನಿರ್ಮೂಲನೆ ಮಾಡಲು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಅತ್ಯಗತ್ಯ ಎಂದು ಬೆಳಗಾವಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ಅಣ್ಣಪ್ಪ ಹೆಗಡೆ ಹೇಳಿದರು.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಹಿಳಾ ಸಬಲೀಕರಣ ಘಟಕ, ಶಿಶು ಅಭಿವೃದ್ಧಿ ಯೋಜನೆ ಅಥಣಿ ಹಾಗೂ ಭರವಸೆ ಬೆಳಕು ಫೌಂಡೇಶನ್ ಇವರ ಸಂಯುಕ್ತ ಆಶ್ರಯದಲ್ಲಿ ವರದಕ್ಷಿಣೆ ನಿಷೇಧ ಕಾಯ್ದೆ ಹಾಗೂ ಬಾಲ್ಯ ವಿವಾಹ ನಿಷೇಧ ಕಾಯ್ದೆ ಕುರಿತ ಕಾನೂನು ಅರಿವು ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅಣ್ಣಪ್ಪ ಹೆಗಡೆ ಅವರು, ಸಮಾಜದಲ್ಲಿ ಇಂತಹ ಸಾಮಾಜಿಕ ಅನಿಷ್ಠಗಳನ್ನು ತೊಡೆದುಹಾಕಲು ಕಾನೂನು ಅರಿವು ಬಹಳ ಮುಖ್ಯ ಎಂದು ಹೇಳಿದರು.
ಕಾನೂನು ಅರಿವಿನಿಂದ ಸಮಾಜದ ಸುಧಾರಣೆ ಸಾಧ್ಯ
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಅಥಣಿಯ ಖ್ಯಾತ ವಕೀಲ ಅಮೋಘಸಿದ್ದ ಕೊಬ್ರಿ ಮಾತನಾಡಿ, ಕಾನೂನು ಕೇವಲ ಪುಸ್ತಕಗಳಲ್ಲಿ ಉಳಿಯದೇ ಪ್ರತಿಯೊಬ್ಬ ನಾಗರಿಕನಿಗೂ ತಲುಪಬೇಕು. ಬಾಲ್ಯ ವಿವಾಹ ಮತ್ತು ವರದಕ್ಷಿಣೆ ಸಾಮಾಜಿಕ ಅಪರಾಧಗಳಾಗಿದ್ದು, ಅವುಗಳ ವಿರುದ್ಧ ಸಾರ್ವಜನಿಕರು ಧ್ವನಿ ಎತ್ತಬೇಕು ಎಂದು ಕರೆ ನೀಡಿದರು. ಜಿಲ್ಲಾ ಮಹಿಳಾ ಸಬಲೀಕರಣ ಘಟಕದ ಸಂಯೋಜಕಿ ಕವಿತಾ ಹೊಸಮನಿ ಹಾಗೂ ಅಥಣಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಂಜುನಾಥ ಸೌಂದಲಗೇಕರ ಇಲಾಖೆಯ ವಿವಿಧ ಯೋಜನೆಗಳು ಹಾಗೂ ಕಾಯ್ದೆಗಳ ಜಾರಿಗೆ ಸಂಬAಧಿಸಿದAತೆ ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೂಪಾ ಕಾಂಬಳೆ ವಹಿಸಿದ್ದರು. ಸಾಮಾಜಿಕ ಜಾಗೃತಿ ಮೂಡಿಸುವ ಕಾರ್ಯದಲ್ಲಿ ಫೌಂಡೇಶನ್ ಸದಾ ಮುಂಚೂಣಿಯಲ್ಲಿರುತ್ತದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಅಥಣಿ ಪಿಎಸ್‌ಐ ಗಿರಿಮಲ್ಲಪ್ಪ ಉಪ್ಪಾರ, ಮಾನವ ಹಕ್ಕುಗಳ ಆಯೋಗದ ಜಿಲ್ಲಾ ಅಧ್ಯಕ್ಷ ಅಶೋಕ ಕೆಂಗನ್ನವರ, ತಾಲೂಕು ಅಧ್ಯಕ್ಷೆ ಗೀತಾ ಮಡ್ಡಿ, ತಾಲೂಕು ಉಪಾಧ್ಯಕ್ಷೆ ಸವಿತಾ ಕಾಂಬಳೆ ಸೇರಿದಂತೆ ಹಲವು ಗಣ್ಯರು, ಇಲಾಖೆಯ ಸಿಬ್ಬಂದಿ ಹಾಗೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ವರದಿ: ಮಹೇಶ್ ಶರ್ಮಾ

More Stories
ಅಥಣಿ ಸಹಕಾರಿ ರಂಗದಲ್ಲಿ ಹೊಸ ಇತಿಹಾಸ PKPS ಸೊಸೈಟಿಗಳಿಗೆ ಡಿಸಿಸಿ ಬ್ಯಾಂಕ್ ನಿರ್ದೇಶಕಿ ಸುನಿತಾ ಐಹೋಳೆ ಭೇಟಿ, ರೈತರ ಸಮಸ್ಯೆಗಳಿಗೆ ಸ್ಪಂದನೆ
ಅಥಣಿಯಲ್ಲಿ ಪ್ರತಿಭಾ ಪುರಸ್ಕಾರ ಸಮಾರಂಭ
ಅಥಣಿ ಪಟ್ಟಣದಲ್ಲಿ ಬಿರುಗಾಳಿ ಮರಗಳು, ವಿದ್ಯುತ್ ಕಂಬಗಳು ನೆಲಕ್ಕುರುಳಿ ಆತಂಕ