June 7, 2026

ಸ್ನೇಹ ಜ್ಯೋತಿ ಅಂಗವಿಕಲರ ತರಬೇತಿ ಕೇಂದ್ರದಲ್ಲಿ ಪರಿಸರ ದಿನಾಚರಣೆ; ಸಸಿ ನೆಟ್ಟು ಪರಿಸರ ರಕ್ಷಣೆಗೆ ಕರೆ

ಅಥಣಿ (ಬೆಳಗಾವಿ): ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿ ಕರ್ನಾಟಕ ಪೊಲೀಸ್ ಕಲ್ಯಾಣ ಅಭಿವೃದ್ಧಿ ಸಂಸ್ಥೆಯ ವತಿಯಿಂದ, ಸಂಸ್ಥೆಯ ರಾಜ್ಯಾದ್ಯಕ್ಷರಾದ ಬಿ. ಎಚ್. ಜಮಾದಾರ ಅವರ ಆದೇಶದ ಮೇರೆಗೆ ‘ಸ್ನೇಹ ಜ್ಯೋತಿ ಅಂಗವಿಕಲರ ತರಬೇತಿ ಕೇಂದ್ರ’ದಲ್ಲಿ ಸಸಿಗಳನ್ನು ಹಚ್ಚುವ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಮರಗಳನ್ನು ಹಚ್ಚಿ ಬೆಳೆಸುವುದು ಇಂದಿನ ತುರ್ತು ಅಗತ್ಯ: ಪ್ರವೀಣ ನಾಯಿಕ
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅಥಣಿ ತಾಲೂಕ ಕರ್ನಾಟಕ ಪೊಲೀಸ್ ಕಲ್ಯಾಣ ಅಭಿವೃದ್ಧಿ ಸಂಸ್ಥೆಯ ಮುಖ್ಯಸ್ಥರಾದ ಪ್ರವೀಣ ನಾಯಿಕ ಅವರು, “ನಮ್ಮ ಜಲ ಮತ್ತು ನೆಲ ಸುರಕ್ಷಿತವಾಗಿ ಉಳಿಯಬೇಕೆಂದರೆ ಪ್ರತಿಯೊಬ್ಬರೂ ಕಡ್ಡಾಯವಾಗಿ ಮರಗಳನ್ನು ಹಚ್ಚಿ ಬೆಳೆಸಬೇಕು. ಪ್ರಸ್ತುತ ಎದುರಾಗುತ್ತಿರುವ ತೀವ್ರವಾದ ಬಿಸಿಲಿನಿಂದ ರಕ್ಷಣೆ ಪಡೆಯಲು ಮತ್ತು ಮಳೆಯನ್ನು ಆಕರ್ಷಿಸಲು ಸಾರ್ವಜನಿಕರಿಗೆ ಹಾಗೂ ರೈತರಿಗೆ ಸೂಕ್ತವಾದ ಗಿಡಮರಗಳನ್ನು ವಿತರಿಸುವುದು ಇಂದಿನ ತುರ್ತು ಅಗತ್ಯವಾಗಿದೆ. ದಟ್ಟವಾದ ಎಲೆಗಳನ್ನು ಹೊಂದಿರುವ ಮರಗಳು ಬೇಸಿಗೆಯಲ್ಲಿ ತಂಪಾದ ನೆರಳು ನೀಡುವುದಲ್ಲದೆ, ಭೂಮಿಯ ತಾಪಮಾನವನ್ನು ಕಡಿಮೆ ಮಾಡಲು ಸಹಕಾರಿಯಾಗುತ್ತವೆ,” ಎಂದು ಅಭಿಪ್ರಾಯಪಟ್ಟರು.

ಪರಿಸರ ನಮ್ಮ ಕಣಕಣದಲ್ಲೂ ಇರಬೇಕು: ಪ್ರಾಚಾರ್ಯ ಬಾಳು ಕಾಂಬಳೆ
ಸ್ನೇಹ ಜ್ಯೋತಿ ಅಂಗವಿಕಲರ ತರಬೇತಿ ಕೇಂದ್ರದ ಪ್ರಾಚಾರ್ಯರಾದ ಬಾಳು ಕಾಂಬಳೆ ಅವರು ಕಾರ್ಯಕ್ರಮಕ್ಕೆ ಆಗಮಿಸಿದ ಕರ್ನಾಟಕ ಪೊಲೀಸ್ ಕಲ್ಯಾಣ ಅಭಿವೃದ್ಧಿ ಸಂಸ್ಥೆಯ ಮುಖ್ಯಸ್ಥರು, ಪದಾಧಿಕಾರಿಗಳು, ಮುಖಂಡರು ಹಾಗೂ ಮಾಧ್ಯಮ ಘಟಕದ ಅಧ್ಯಕ್ಷರಿಗೆ ತುಂಬು ಹೃದಯದ ಸ್ವಾಗತ ಕೋರಿದರು. ಬಳಿಕ ಮಾತನಾಡಿದ ಅವರು, “ಪರಿಸರ ಎಂಬುದು ನಮ್ಮ ಜೀವವಾಗಿರಬೇಕು. ಪರಿಸರದ ಕಾಳಜಿ ನಮ್ಮ ಕಣಕಣದಲ್ಲೂ ಹರಡಿದಾಗ ಮಾತ್ರ ಜಲ-ನೆಲವನ್ನು ಉಳಿಸಲು ಸಾಧ್ಯ. ಕೇವಲ ಪರಿಸರ ದಿನದಂದು ಮಾತ್ರ ಗಿಡ ನೆಟ್ಟು ಕೈತೊಳೆದುಕೊಳ್ಳುವುದು ಬೇಡ, ಬದಲಿಗೆ ಪ್ರತಿನಿತ್ಯ ಆ ಗಿಡಗಳನ್ನು ಪ್ರೀತಿಯಿಂದ ರಕ್ಷಣೆ ಮಾಡಬೇಕು,” ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಕರ್ನಾಟಕ ಪೊಲೀಸ್ ಕಲ್ಯಾಣ ಅಭಿವೃದ್ಧಿ ಸಂಸ್ಥೆಯ ಪ್ರಮುಖರಾದ ಶರಣಪ್ಪ ಸಿಂಧೆ, ಕಿರಣ ಪಾಟೋಲೆ, ಅನಿಲ ಭಾಮನೆ, ಶಿವಾನಂದ ನಾವಿ, ಕವಿತಾ ಭೋಸಲೆ, ಸರಸ್ವತಿ ನ್ಯಾಮಗೌಡ, ಶಿವಲೀಲಾ ಪಟ್ಟಣಶೆಟ್ಟಿ ಹಾಗೂ ಎಂ. ಶರ್ಮಾ ಉಪಸ್ಥಿತರಿದ್ದರು. ಅಲ್ಲದೆ, ಸ್ನೇಹ ಜ್ಯೋತಿ ಅಂಗವಿಕಲರ ತರಬೇತಿ ಕೇಂದ್ರದ ನಿರ್ದೇಶಕರಾದ ಕೆ. ಎಸ್. ಚಾಕು, ಸಂಗೀತ ಶಿಕ್ಷಕ ಈರಪ್ಪ ತೇಲಿ, ರುಕ್ಮಿಣಿ ಹೊಸಮನಿ ಹಾಗೂ ಕೇಂದ್ರದ ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ವರದಿ: ಮಹೇಶ್ ಶರ್ಮಾ

About The Author

error: Content is protected !!