

ಅಥಣಿ (ಬೆಳಗಾವಿ): ತಾಲೂಕಿನ ಶಿವಯೋಗಿ ನಗರದ ಮೂಲಕ ಹಾದುಹೋಗುವ ಬಿಜಾಪುರ ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯಲ್ಲಿ ಮೂಲಭೂತ ಸೌಕರ್ಯಗಳ ತೀವ್ರ ಅಭಾವ ಎದ್ದು ಕಾಣುತ್ತಿದ್ದು, ಸಾರ್ವಜನಿಕರು ಹಾಗೂ ಶಾಲಾ ವಿದ್ಯಾರ್ಥಿಗಳು ಪ್ರತಿನಿತ್ಯ ಜೀವಭಯದಲ್ಲೇ ಕಾಲ ಕಳೆಯುವಂತಾಗಿದೆ.

ಈ ಕುರಿತು ಮಾತನಾಡಿರುವ ಕರ್ನಾಟಕ ಪರಿಶಿಷ್ಟ ಜಾತಿ–ಪರಿಶಿಷ್ಟ ಪಂಗಡ ಮಹಿಳಾ ಸಬಲೀಕರಣ ಹೋರಾಟ ಸಮಿತಿಯ (ರಿ.) ರಾಜ್ಯ ಮಾಧ್ಯಮ ವಕ್ತಾರ ಹಾಗೂ ಸಾಮಾಜಿಕ ಹೋರಾಟಗಾರ ಮಹೇಶ್ ಎಮ್ ಶರ್ಮಾ, “ಮಾಧ್ಯಮ ಹಾಗೂ ಪತ್ರಿಕೆಗಳು ನಿರಂತರ ವರದಿ ಮಾಡುತ್ತಿದ್ದರೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಕಣ್ಣು ಕಾಣದಂತೆ ವರ್ತಿಸುತ್ತಿದ್ದಾರೆ. ಚುನಾವಣೆ ಬಂದಾಗ ಅಭಿವೃದ್ಧಿ ಜಪ ಮಾಡುವ ಅಭ್ಯರ್ಥಿಗಳು, ಚುನಾವಣೆ ಮುಗಿದ ಮೇಲೆ ಈ ಭಾಗದತ್ತ ತಿರುಗಿಯೂ ನೋಡುತ್ತಿಲ್ಲ,” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಪಘಾತಗಳ ಭಯ – ‘ಸ್ಪೀಡ್ ಬ್ರೇಕರ್’ಗೆ ಪಟ್ಟು: ಶಿವಯೋಗಿ ನಗರ ಬಳಿಯ ಬಿಜಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ‘ಮೋಟಗಿ ತೋಟ ಶಾಲೆ’ಯಿದ್ದು, ನಿತ್ಯ ನೂರಾರು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ರಸ್ತೆ ದಾಟಬೇಕಿದೆ. ಹೆದ್ದಾರಿಯಲ್ಲಿ ವಾಹನಗಳು ಅತಿ ವೇಗವಾಗಿ ಸಂಚರಿಸುತ್ತಿದ್ದು, ಯಾವುದೇ ವೇಗ ನಿಯಂತ್ರಕಗಳಿಲ್ಲದೆ ಈಗಾಗಲೇ ಹಲವು ಅಪಘಾತಗಳು ಸಂಭವಿಸಿ ಗಂಭೀರ ಗಾಯಗಳಾಗಿವೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ರೋಡ್ ಬ್ರೇಕರ್ ಹಾಕಲು ಬರುವುದಿಲ್ಲವೆಂದು ಅಧಿಕಾರಿಗಳು ನೆಪ ಹೇಳುತ್ತಿದ್ದಾರೆ, ಆದರೆ ಇಲ್ಲಿ ಅನಾಹುತ ಸಂಭವಿಸಿದರೆ ಹೊಣೆ ಯಾರು ಎಂದು ನಿವಾಸಿಗಳು ಪ್ರಶ್ನಿಸಿದ್ದಾರೆ.

ಮೋಟಗಿ ತೋಟ ಶಾಲೆ ಮೇಲ್ದರ್ಜೆಗೇರಿಸಲು ಮನವಿ: ಶಿವಯೋಗಿ ನಗರ ಹಾಗೂ ಸುತ್ತಮುತ್ತಲಿನ ಬಡ ಮತ್ತು ಮಧ್ಯಮ ವರ್ಗದ ಹೆಣ್ಣುಮಕ್ಕಳು ಹಾಗೂ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ, ಪ್ರಸ್ತುತ ಇರುವ ‘ಮೋಟಗಿ ತೋಟ ಶಾಲೆ’ಯಲ್ಲಿ ನೂತನವಾಗಿ 9 ಮತ್ತು 10ನೇ ತರಗತಿಗಳನ್ನು ಪ್ರಾರಂಭಿಸಬೇಕೆಂಬುದು ಸ್ಥಳೀಯರ ಪ್ರಮುಖ ಬೇಡಿಕೆಯಾಗಿದೆ.


ರಸ್ತೆ ಮೇಲೆಯೇ ಹರಿಯುವ ಕೊಳಚೆ ನೀರು: ಬಡಾವಣೆಯ ರಸ್ತೆಯ ಒಂದು ಬದಿಯಲ್ಲಿ ಮಾತ್ರ ಗಟಾರ್ ನಿರ್ಮಿಸಲಾಗಿದೆ. ಎರಡೂ ಬದಿಗಳಲ್ಲಿ ಶಾಶ್ವತ ಚರಂಡಿ ಇಲ್ಲದಿರುವುದರಿಂದ ಕಲುಷಿತ ನೀರು ರಸ್ತೆಯ ಮೇಲೆಯೇ ಹರಿಯುತ್ತಿದ್ದು, ದುರ್ನಾತ ಹಾಗೂ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ.
ಬೀದಿ ದೀಪಗಳ ಕೊರತೆ: ಬಡಾವಣೆಯ ಕೆಲವೇ ಭಾಗಗಳಲ್ಲಿ ಬೀದಿ ದೀಪಗಳಿದ್ದು, ಉಳಿದೆಡೆ ಕತ್ತಲು ಆವರಿಸಿದೆ. ಇದರಿಂದಾಗಿ ರಾತ್ರಿ ವೇಳೆ ಮಹಿಳೆಯರು ಹಾಗೂ ಸಾರ್ವಜನಿಕರು ಸಂಚರಿಸಲು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ಶಿವಯೋಗಿ ನಗರದ ನಿವಾಸಿಗಳಾದ ಮೈಬೂಬ್ ಭಗವಾನ್ ಹಾಗೂ ಇರ್ಷಾದ್ ಮುಕ್ಕೇರಿ ಮಾತನಾಡಿ,
“ವಾಹನಗಳ ವೇಗಕ್ಕೆ ಮಿತಿಯಿಲ್ಲದೆ ನಿರಂತರ ಅಪಘಾತಗಳು ಸಂಭವಿಸುತ್ತಿವೆ. ಶಾಲಾ ಮಕ್ಕಳ ಹಿತದೃಷ್ಟಿಯಿಂದ ‘ಸ್ಪೀಡ್ ಬ್ರೇಕರ್’ ಅಳವಡಿಸಬೇಕು. ಮೋಟಗಿ ತೋಟ ಶಾಲೆಯಲ್ಲಿ 9 ಮತ್ತು 10ನೇ ತರಗತಿಗಳನ್ನು ತಕ್ಷಣವೇ ಆರಂಭಿಸಬೇಕು. ರಸ್ತೆಯ ಎರಡೂ ಬದಿ ಚರಂಡಿ ನಿರ್ಮಿಸಿ ನೈರ್ಮಲ್ಯ ಕಾಪಾಡಬೇಕು ಹಾಗೂ ಬೀದಿ ದೀಪಗಳ ವ್ಯವಸ್ಥೆ ಕಲ್ಪಿಸಬೇಕು,” ಎಂದು ತಾಲೂಕು ಹಾಗೂ ಜಿಲ್ಲಾಡಳಿತಕ್ಕೆ ಆಗ್ರಹಿಸಿದ್ದಾರೆ.
ಸಂಬಂಧಪಟ್ಟ ತಾಲೂಕು ಆಡಳಿತ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ, ಶಿವಯೋಗಿ ನಗರದ ಈ ಎಲ್ಲಾ ಮೂಲಭೂತ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸಬೇಕಿದೆ.
ವರದಿ: ವಿಶೇಷ ವರದಿಗಾರರು, ಮಹೇಶ್ ಶರ್ಮಾ
About The Author




More Stories
ಅಥಣಿಯಲ್ಲಿ 80ನೇ ಸ್ವಾತಂತ್ರ್ಯೋತ್ಸವ ಸಂಭ್ರಮ: ರಾಜು ಡವರಿ ಅವರಿಂದ ಧ್ವಜಾರೋಹಣ
ಮದಭಾವಿಯಲ್ಲಿ ಸಡಗರದ ಸ್ವಾತಂತ್ರ್ಯ ದಿನಾಚರಣೆ: ವೀರಯೋಧರಿಂದ ಜಂಟಿ ಧ್ವಜಾರೋಹಣ
ದೊಡ್ಡನಾಗಮಂಗಲದ ‘ಮುತ್ತಪ್ಪ ಕಾವಲು’ ನಿವಾಸಿಗಳಿಗೆ ಮೂಲಭೂತ ಸೌಕರ್ಯ ಒದಗಿಸಲು ಪುರಸಭೆಗೆ ಮನವಿ!