ಹೊನ್ನಾವರ: ತಾಲೂಕಿನ ಖರ್ವಾ ಗ್ರಾಮ ಪಂಚಾಯಿತಿಯಲ್ಲಿ ಸುದೀರ್ಘ 35 ವರ್ಷಗಳಿಂದ ವಾಟರ್‌ಮ್ಯಾನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಹಿರಿಯ ಸಿಬ್ಬಂದಿ ಗೋಪಾಲ ವೆಂಕ್ಟ ನಾಯ್ಕ (55) ಅವರು ಶುಕ್ರವಾರ ಸಾಯಂಕಾಲ ವಲ್ಕಿ ಸಮೀಪದ ಗುಂಡಬಾಳ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಖರ್ವಾ ಗ್ರಾಮದ ಜಡ್ಡಿತ್ಲ ನಿವಾಸಿಯಾದ ಗೋಪಾಲ ನಾಯ್ಕ ಅವರು ಕಳೆದ ಗುರುವಾರ ಮಧ್ಯಾಹ್ನದಿಂದ ನಿಗೂಢವಾಗಿ ನಾಪತ್ತೆಯಾಗಿದ್ದರು. ಇವರ ಪತ್ತೆಗಾಗಿ ಕುಟುಂಬಸ್ಥರು, ಸ್ಥಳೀಯರು ಹಾಗೂ ಗ್ರಾಮಸ್ಥರು ರಾತ್ರಿಯಿಡೀ ಸುತ್ತಮುತ್ತಲಿನ ಗುಡ್ಡ-ಬೆಟ್ಟ, ಗ್ರಾಮದ ಮೂಲೆ ಮೂಲೆಗಳಲ್ಲಿ ತೀವ್ರ ಹುಡುಕಾಟ ನಡೆಸಿದ್ದರೂ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಈ ಹಿನ್ನೆಲೆಯಲ್ಲಿ ಕುಟುಂಬಸ್ಥರು ಹೊನ್ನಾವರ ಪೊಲೀಸ್ ಠಾಣೆಗೆ ನಾಪತ್ತೆ ದೂರು ದಾಖಲಿಸಿದ್ದರು.
ನದಿಯಲ್ಲಿ ತೇಲುತ್ತಿದ್ದ ಶವ:
ಶುಕ್ರವಾರ ಪೊಲೀಸರು ಮತ್ತು ಸ್ಥಳೀಯರು ಜಂಟಿಯಾಗಿ ತೀವ್ರ ಶೋಧ ಕಾರ್ಯ ಮುಂದುವರಿಸಿದ್ದ ಸಂದರ್ಭದಲ್ಲಿ, ಸಾಯಂಕಾಲ ವಲ್ಕಿ ಬಳಿಯ ಗುಂಡಬಾಳ ನದಿಯ ದಡದ ಸಮೀಪ ಶವವೊಂದು ತೇಲುತ್ತಿರುವುದನ್ನು ಸ್ಥಳೀಯರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಹೊನ್ನಾವರ ಪಿಎಸ್‌ಐ ಮಂಜುನಾಥ್ ನೇತೃತ್ವದ ಪೊಲೀಸ್ ತಂಡ ಸ್ಥಳಕ್ಕೆ ಧಾವಿಸಿ, ಸಾರ್ವಜನಿಕರ ಸಹಾಯದಿಂದ ಶವವನ್ನು ನದಿಯಿಂದ ಮೇಲೆತ್ತಿದೆ. ಮೃತ ದೇಹವು ನಾಪತ್ತೆಯಾಗಿದ್ದ ಗೋಪಾಲ ನಾಯ್ಕ ಅವರದ್ದೇ ಎಂದು ಗುರುತಿಸಲಾಗಿದ್ದು, ಅಂಬುಲೆನ್ಸ್ ಮೂಲಕ ಹೊನ್ನಾವರ ತಾಲೂಕು ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.

ಗ್ರಾಮಸ್ಥರ ಪ್ರೀತಿಯ ಒಡನಾಡಿ; ಕಂಬನಿ ಮಿಡಿದ ಪಿಡಿಒ ಹಾಗೂ ಸಿಬ್ಬಂದಿ
ಮೃತ ಗೋಪಾಲ ನಾಯ್ಕ ಅವರು ಕಳೆದ ಮೂರು ದಶಕಗಳಿಂದ ಗ್ರಾಮದಲ್ಲಿ ವಾಟರ್‌ಮ್ಯಾನ್ ಆಗಿ ಅತ್ಯಂತ ಪ್ರಾಮಾಣಿಕವಾಗಿ ಹಾಗೂ ದಕ್ಷತೆಯಿಂದ ಸೇವೆ ಸಲ್ಲಿಸುವ ಮೂಲಕ ಇಡೀ ಖರ್ವಾ ಗ್ರಾಮದ ಜನರ ಪ್ರೀತಿ ಹಾಗೂ ವಿಶ್ವಾಸಕ್ಕೆ ಪಾತ್ರರಾಗಿದ್ದರು. ಅವರ ನಿಗೂಢ ಸಾಲಿನ ಸುದ್ದಿ ತಿಳಿಯುತ್ತಿದ್ದಂತೆ ಇಡೀ ಗ್ರಾಮವೇ ಕಂಬನಿ ಮಿಡಿದಿದೆ. ಖರ್ವಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (PDO) ಗಿರೀಶ್ ನಾಯ್ಕ ಹಾಗೂ ಪಂಚಾಯಿತಿಯ ಸಮಸ್ತ ಸಿಬ್ಬಂದಿ ವರ್ಗದವರು ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ.
ಕುಟುಂಬದ ಆಧಾರಸ್ತಂಭ ನೆಲಸಮ:
ಮೃತರು ಪತ್ನಿ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಮನೆಯ ಏಕೈಕ ಆಧಾರಸ್ತಂಭವಾಗಿದ್ದ ಗೋಪಾಲ ನಾಯ್ಕ ಅವರ ಆಕಸ್ಮಿಕ ಮರಣದಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ನಿಗೂಢ ಸಾವಿನ ಕುರಿತು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ವರದಿ ; ವಿಶ್ವನಾಥ ಸಾಲ್ಕೋಡ ಹೊನ್ನಾವರ

More Stories
ಹೊನ್ನಾವರ ತಾಲೂಕು ಆಸ್ಪತ್ರೆ: ವರ್ಗಾವಣೆಗೊಂಡ ವೈದ್ಯರು, ಸಿಬ್ಬಂದಿಗಳಿಗೆ ಆತ್ಮೀಯ ಬೀಳ್ಕೊಡುಗೆ
ವಿದ್ಯುತ್ ವಲಯ ಖಾಸಗೀಕರಣ ವಿರೋಧಿಸಿ ತಹಶೀಲ್ದಾರರಿಗೆ ವಿವಿಧ ಸಂಘಟನೆಗಳಿಂದ ಮನವಿ
ಹೊನ್ನಾವರ ತಾಲೂಕಿನಾದ್ಯಂತ 57ಕ್ಕೂ ಹೆಚ್ಚು ಕಡೆ ‘ದಶ ಲಕ್ಷ ಗಿಡ ನೆಡುವ ಅಭಿಯಾನ’ಕ್ಕೆ ಅರಣ್ಯವಾಸಿಗಳಿಂದ ಭರ್ಜರಿ ಚಾಲನೆ!