July 15, 2026

ಎಐಟಿಎಂನಲ್ಲಿ 43ನೇ ಪದವಿ ಪ್ರದಾನ ಹಾಗೂ 46ನೇ ವಾರ್ಷಿಕೋತ್ಸವ ಸಮಾರಂಭ ವಿಜೃಂಭಣೆಯಿಂದ ಸಂಪನ್ನ:

ಚಿನಾರ್ ಕ್ವಾಂಟಮ್ ಎಐ ಸಂಸ್ಥೆಯೊಂದಿಗೆ ಮಹತ್ವದ ಒಪ್ಪಂದ

ಭಟ್ಕಳ: ಇಲ್ಲಿನ ಪ್ರತಿಷ್ಠಿತ ಅಂಜುಮನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್‌ಮೆಂಟ್ (AITM) ಕಾಲೇಜಿನಲ್ಲಿ 43ನೇ ಪದವಿ ಪ್ರದಾನ ಸಮಾರಂಭ ಹಾಗೂ 46ನೇ ವಾರ್ಷಿಕೋತ್ಸವವನ್ನು ಅತ್ಯಂತ ಸಂಭ್ರಮ ಮತ್ತು ಸಡಗರದಿಂದ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಇಂಜಿನಿಯರಿಂಗ್, ಎಂ.ಬಿ.ಎ. ಹಾಗೂ ಎಂ.ಸಿ.ಎ. ವಿಭಾಗಗಳ ನೂರಾರು ಪದವೀಧರರಿಗೆ ಪದವಿ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.

ನವೋದ್ಯಮ ಮತ್ತು ತಂತ್ರಜ್ಞಾನಕ್ಕೆ ಒತ್ತು: ಮಹತ್ವದ Mou

ಈ ಸಮಾರಂಭದ ಪ್ರಮುಖ ಆಕರ್ಷಣೆಯಾಗಿ, ಎಐಟಿಎಂ ಕಾಲೇಜು ಮತ್ತು ಜಾಗತಿಕ ಮಟ್ಟದ ಪ್ರಮುಖ ತಂತ್ರಜ್ಞಾನ ಸಂಸ್ಥೆಯಾದ ಚಿನಾರ್ ಕ್ವಾಂಟಮ್ ಎಐ (Chinar Quantum AI) ನಡುವೆ ಪರಸ್ಪರ ಸಹಕಾರದ ತಿಳುವಳಿಕಾ ಒಪ್ಪಂದಕ್ಕೆ (MoU) ಅಧಿಕೃತವಾಗಿ ಸಹಿ ಹಾಕಲಾಯಿತು. ಈ ಒಪ್ಪಂದದ ಮೂಲಕ ಕಾಲೇಜಿನ ವಿದ್ಯಾರ್ಥಿಗಳಿಗೆ ಮುಂದಿನ ದಿನಗಳಲ್ಲಿ ಅತ್ಯಾಧುನಿಕ ತರಬೇತಿ, ಉದ್ಯಮ ಆಧಾರಿತ ಇಂಟರ್ನ್‌ಶಿಪ್, ಉನ್ನತ ಸಂಶೋಧನೆ ಹಾಗೂ ಜಾಗತಿಕ ಮಟ್ಟದ ಉದ್ಯೋಗಾವಕಾಶಗಳು ಸುಲಭವಾಗಿ ದೊರೆಯಲಿವೆ.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಚಿನಾರ್ ಕ್ವಾಂಟಮ್ ಎಐ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ (CEO) ಶಾಹಿದ್ ಅಬ್ಬಾಸ್ ಮಿರ್ ಮಾತನಾಡಿ, “ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ತಂತ್ರಜ್ಞಾನದ ವೇಗಕ್ಕೆ ತಕ್ಕಂತೆ ವಿದ್ಯಾರ್ಥಿಗಳು ಸನ್ನದ್ಧರಾಗಬೇಕು. ನವೋದ್ಯಮ (Startup) ಮತ್ತು ಉದ್ಯಮಶೀಲತೆಯ ಮನೋಭಾವವೇ ಭವಿಷ್ಯದ ಯಶಸ್ಸಿನ ಕಾವಲು” ಎಂದು ಕರೆ ನೀಡಿದರು.


ಗೌರವ ಅತಿಥಿಯಾಗಿದ್ದ ಸಂಸ್ಥೆಯ ಮುಖ್ಯ ನವೋದ್ಯಮ ಅಧಿಕಾರಿ (CSO) ಗೋಕುಲ್ ಬಿ. ಅಲೆಕ್ಸ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ನಿರಂತರ ಕಲಿಕೆಯ ಹಸಿವು ಇರಬೇಕೆಂದು ಆಶಿಸಿದರು.

ಸಾಧಕರಿಗೆ ಸನ್ಮಾನ ಮತ್ತು ಪ್ರಮಾಣ ವಚನ.   ಕಾಲೇಜಿನ ಪ್ರಾಂಶುಪಾಲರಾದ ಡಾ. ಕೆ. ಫಜ್ಲುರ್ ರಹಮಾನ್ ಅವರು ವಾರ್ಷಿಕ ವರದಿ ಮಂಡಿಸಿ, ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ವಚನ ಬೋಧಿಸಿದರು. ಇದೇ ಸಂದರ್ಭದಲ್ಲಿ ಶೈಕ್ಷಣಿಕ ಸಾಧನೆ, ನವೋದ್ಯಮ ಯೋಜನೆ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಕಾಲೇಜಿಗೆ ಕೀರ್ತಿ ತಂದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಅಂಜುಮನ್ ಹಾಮಿ-ಎ-ಮುಸ್ಲಿಮೀನ್‌ನ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಇಸ್ಹಾಕ್ ಶಾಬಂದ್ರಿ ಮತ್ತು ಎಐಟಿಎಂ ಕಾಲೇಜು ಆಡಳಿತ ಮಂಡಳಿಯ ಕಾರ್ಯದರ್ಶಿ ಮೊಹಮ್ಮದ್ ಅನ್ಸಾರ್ ದಮ್ದಾ ಅಬು ಅವರು ವಿದ್ಯಾರ್ಥಿಗಳನ್ನು ಅಭಿನಂದಿಸಿ, ಸಂಸ್ಥೆಯ ಬೆಳವಣಿಗೆಗೆ ಶ್ರಮಿಸುತ್ತಿರುವ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ಸೇವೆಯನ್ನು ಶ್ಲಾಘಿಸಿದರು.

ಅಧ್ಯಕ್ಷತೆ ವಹಿಸಿದ್ದ ಅಂಜುಮನ್ ಹಾಮಿ-ಎ-ಮುಸ್ಲಿಮೀನ್‌ನ ಉಪಾಧ್ಯಕ್ಷ ಜನಾಬ್ ಮೊಹಮ್ಮದ್ ಸಾದಿಕ್ ಪಿಲ್ಲೂರ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ತಾಂತ್ರಿಕ ಶಿಕ್ಷಣ ಹಾಗೂ ಸಮಗ್ರ ವ್ಯಕ್ತಿತ್ವ ವಿಕಸನ ನೀಡಲು ಸಂಸ್ಥೆ ಸದಾ ಕಟಿಬದ್ಧವಾಗಿದೆ ಎಂದರು. ವೇದಿಕೆಯಲ್ಲಿ ಎಎಚ್‌ಎಂ ಉಪಾಧ್ಯಕ್ಷ ಡಾ. ಜುಬೈರ್ ಕೋಲಾ, ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಇಸ್ಮಾಯಿಲ್ ಜುಕಾಕು ಸೇರಿದಂತೆ ಹಲವು ಗಣ್ಯರು, ವಿವಿಧ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು.


ಕಾಲೇಜಿನ ರಿಜಿಸ್ಟ್ರಾರ್ ಪ್ರೊ. ಜಾಹಿದ್ ಖರೂರಿ ಅತಿಥಿಗಳನ್ನು ಪರಿಚಯಿಸಿದರು. ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಹಾಗೂ ಕಾರ್ಯಕ್ರಮದ ಸಂಚಾಲಕ ಡಾ. ಕಿರಣ್ ವಿ. ಶಾನಭಾಗ್ ವಂದಿಸಿದರು. ಪ್ರೊ. ಶ್ರೀಶೈಲ ಭಟ್, ಮೊಹಮ್ಮದ್ ಇಯಾದ್ ಹಾಗೂ ಮೊಹಮ್ಮದ್ ಜೈದ್ ಕಾರ್ಯಕ್ರಮ ನಿರೂಪಿಸಿದರು. ರಾಷ್ಟ್ರಗೀತೆಯೊಂದಿಗೆ ಸಮಾರಂಭ ಮುಕ್ತಾಯಗೊಂಡಿತು.

About The Author

error: Content is protected !!