July 15, 2026

ನಾಟಿ ವೈದ್ಯ ಕರಿಯಾ ಗೊಂಡರವರಿಗೆ ಪ್ರತಿಷ್ಠಿತ ಡಾ. ಆರ್. ವಿ. ಸರಾಫ್ ಸಂಸ್ಮರಣ ಪ್ರಶಸ್ತಿ ಪ್ರಧಾನ

ಭಟ್ಕಳ/ಶಿರಾಲಿ: ತಲೆಮಾರುಗಳಿಂದ ನಿಸ್ವಾರ್ಥ ಭಾವನೆಯಿಂದ ನಾಟಿ ವೈದ್ಯ ಪದ್ಧತಿಯನ್ನು ಉಳಿಸಿಕೊಂಡು ಬಂದಿರುವ ಕಟಗಾರ ಕೊಪ್ಪದ ಹಿರಿಯ ನಾಟಿ ವೈದ್ಯರಾದ ಕರಿಯಾ ಗೊಂಡ ಅವರಿಗೆ ಶಿರಾಲಿಯ ಡಾ. ಆರ್. ವಿ. ಸರಾಫ್ ಹೆಸರಿನ ಸಂಸ್ಮರಣ ಪ್ರಶಸ್ತಿಯನ್ನು ಅವರ ಮನೆಗೇ ತೆರಳಿ ಅತ್ಯಂತ ಗೌರವಪೂರ್ವಕವಾಗಿ ಪ್ರದಾನ ಮಾಡಲಾಯಿತು.

ನಾಟಿ ವೈದ್ಯಕೀಯ ಪರಂಪರೆ ಉಳಿಯಬೇಕು: ಬಿ.ಎನ್. ವಾಸರೆ

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಿ.ಎನ್. ವಾಸರೆ, “ನಾಟಿ ವೈದ್ಯಕೀಯ ಪರಂಪರೆ ಇಂದಿನ ದಿನಗಳಲ್ಲಿ ನಾಶವಾಗುತ್ತಿರುವುದು ಕಳವಳಕಾರಿ. ಇಂತಹ ಸಂದರ್ಭದಲ್ಲಿ ಯಾವುದೇ ಹಣದ ಆಸೆ ಇಲ್ಲದೆ ಹಾವು, ಚೇಳು ಸೇರಿದಂತೆ ವಿವಿಧ ವಿಷಜಂತುಗಳು ಕಡಿದಾಗ ಹಾಗೂ ಚರ್ಮ ರೋಗಗಳಿಂದ ಬಳಲುತ್ತಿರುವ ನೂರಾರು ರೋಗಿಗಳಿಗೆ ಚಿಕಿತ್ಸೆ ನೀಡಿ ಗುಣಪಡಿಸುತ್ತಿರುವ ಕರಿಯಾ ಗೊಂಡ ಅವರ ಸೇವೆ ಶ್ಲಾಘನೀಯ. ನಮ್ಮ ಜೀವಪರ ನಾಟಿ ವೈದ್ಯ ಪದ್ಧತಿ, ಜನಪದ ಕಲೆ ಹಾಗೂ ಗ್ರಾಮೀಣ ಸಂಸ್ಕೃತಿಯನ್ನು ಮುಂದಿನ ತಲೆಮಾರಿಗೆ ಉಳಿಸಬೇಕಾಗಿದೆ. ಈ ಕುಲಕಸುಬನ್ನು ಕರಿಯಾ ಗೊಂಡ ಅವರ ಕುಟುಂಬದ ಇತರ ಸದಸ್ಯರೂ ಅರಿತು ಮುಂದುವರಿಸಿಕೊಂಡು ಹೋಗಬೇಕು” ಎಂದು ಮನವಿ ಮಾಡಿದರು. ಬಡವರ ಆಶ್ರಯದಾತರಾಗಿದ್ದ ಡಾ. ಸರಾಫ್ ಅವರ ಹೆಸರಿನ ಪ್ರಶಸ್ತಿ ಕರಿಯಾ ಗೊಂಡ ಅವರಿಗೆ ಲಭಿಸಿರುವುದು ಪಾರಂಪರಿಕ ವೈದ್ಯ ಪದ್ಧತಿಗೆ ಸಂದ ಗೌರವ ಎಂದರು.

ಬಡವರ ಪಾಲಿನ ದೈವಶಕ್ತಿ: ಮಾನಸುತ ಶಂಭು ಹೆಗಡೆ

ಪ್ರಶಸ್ತಿ ವಿತರಿಸಿದ ಪ್ರಸಿದ್ಧ ಸಾಹಿತಿ ಮಾನಸುತ ಶಂಭು ಹೆಗಡೆ ಮಾತನಾಡಿ, “ಸಾವಿರಾರು ಜನರ ಬದುಕಿಗೆ ಆಸರೆಯಾಗಿರುವ ನಾಟಿ ವೈದ್ಯ ಪದ್ಧತಿಯು ಬಡವರ ಪಾಲಿಗೆ ದೈವಶಕ್ತಿ ಇದ್ದಂತೆ” ಎಂದು ಹೇಳಿ, ಚುಟುಕು ವಾಚನದ ಮೂಲಕ ಕರಿಯಾ ಗೊಂಡ ಅವರನ್ನು ಅಭಿನಂದಿಸಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ನಾಟಿ ವೈದ್ಯ ಕರಿಯಾ ಗೊಂಡ, “ನಾನು ಹಣಕ್ಕಾಗಿ ಈ ಕೆಲಸ ಮಾಡುತ್ತಿಲ್ಲ. ನಮ್ಮ ಪೂರ್ವಜರು ನಡೆಸಿಕೊಂಡು ಬಂದ ಪದ್ಧತಿಯನ್ನು ಮುಂದುವರಿಸುತ್ತಿದ್ದೇನೆ. ನಾನು ನೀಡುವ ಔಷಧಿಯಿಂದ ಜನರ ನೋವು ನಿವಾರಣೆಯಾದರೆ ಅದೇ ನಮ್ಮ ಕುಟುಂಬಕ್ಕೆ ಸಿಗುವ ಅತಿ ದೊಡ್ಡ ಶಕ್ತಿ” ಎಂದು ಭಾವುಕರಾಗಿ ನುಡಿದರು.

ಇದೇ ಸಂದರ್ಭದಲ್ಲಿ ಕರಿಯಾ ಗೊಂಡ ಅವರಿಗೆ ಪ್ರಶಸ್ತಿ ಫಲಕ ಹಾಗೂ 5,000 ರೂ. ಗೌರವಧನ ನೀಡಿ ಸನ್ಮಾನಿಸಲಾಯಿತು. ಡಾ. ಆರ್. ವಿ. ಸರಾಫ್ ಅಭಿಮಾನಿ ಬಳಗದ ಅಧ್ಯಕ್ಷ ಪಿ. ಆರ್. ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿ, ಕರಿಯಾ ಗೊಂಡ ಅವರ ಸಮಾಜ ಸೇವೆಯಿಂದ ಪ್ರಶಸ್ತಿಯ ಮೌಲ್ಯ ಹೆಚ್ಚಿದೆ ಎಂದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಆರ್.ಎನ್.ಎಸ್. ಪಾಲಿಟೆಕ್ನಿಕ್ ಕಾಲೇಜಿನ ನಿವೃತ್ತ ಪ್ರಾಚಾರ್ಯ ಎಂ.ವಿ. ಹೆಗಡೆ, ಭಟ್ಕಳ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಘವೇಂದ್ರ ಹೆಬ್ಬಾರ, ಶಿಕ್ಷಕ ಸಂಘದ ಅಧ್ಯಕ್ಷ ಉಮೇಶ ಕೆರೆಕಟ್ಟೆ, ಸಾಹಿತಿಗಳಾದ ಸುರೇಶ ನಾಯ್ಕ, ರಾಮಾ ಗೊಂಡ, ನಿವೃತ್ತ ಶಿಕ್ಷಕ ಎಸ್.ಎಂ. ಗೊಂಡ ಹಾಗೂ ಊರಿನ ಪ್ರಮುಖರಾದ ರವಿತ ನಾಗಯ್ಯ ಗೊಂಡ, ತಿಮ್ಮಪ್ಪ ಗೊಂಡ, ದಯಾನಂದ ಗೊಂಡ, ಮಂಜು ಗೊಂಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಬಳಗದ ಕಾರ್ಯದರ್ಶಿ ಶ್ರೀಧರ ಶೇಟ್ ಸ್ವಾಗತಿಸಿದರು, ಸಂಚಾಲಕ ಗಂಗಾಧರ ನಾಯ್ಕ ವಂದಿಸಿದರು.

About The Author

error: Content is protected !!