July 15, 2026

ಅಥಣಿ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಪಲ್ಸ್ ಪೋಲಿಯೋ ಅಭಿಯಾನಕ್ಕೆ ಚಾಲನೆ: ಶಾಸಕ ಲಕ್ಷ್ಮಣ ಸವದಿ ಉದ್ಘಾಟನೆ

ಅಥಣಿ: “ಐದು ವರ್ಷದೊಳಗಿನ ಮಕ್ಕಳಿಗೆ ನೀಡುವ ಎರಡು ಹನಿ ಪೋಲಿಯೋ ಲಸಿಕೆಯು ಮಗುವಿನ ಭವಿಷ್ಯವನ್ನು ಶಾಶ್ವತವಾಗಿ ಅಂಗವೈಕಲ್ಯದಿಂದ ರಕ್ಷಿಸುವ ಅಮೂಲ್ಯ ಕವಚವಾಗಿದೆ” ಎಂದು ಮಾಜಿ ಉಪ ಮುಖ್ಯಮಂತ್ರಿಗಳು ಹಾಗೂ ಅಥಣಿ ಕ್ಷೇತ್ರದ ಶಾಸಕರಾದ ಶ್ರೀ ಲಕ್ಷ್ಮಣ ಸವದಿ ಅವರು ಹೇಳಿದರು.


ಅಥಣಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಪೋಲಿಯೋ ಲಸಿಕೆ ಕಾರ್ಯಕ್ರಮವನ್ನು ಜ್ಯೋತಿ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿ, ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಶಾಸಕರು ಐದು ವರ್ಷದೊಳಗಿನ ಮುದ್ದು ಮಕ್ಕಳಿಗೆ ಪೋಲಿಯೋ ಹನಿಗಳನ್ನು ಹಾಕುವ ಮೂಲಕ ಅಭಿಯಾನಕ್ಕೆ ಚುರುಕು ನೀಡಿದರು.

ಮಕ್ಕಳ ಆರೋಗ್ಯವಂತ ಭವಿಷ್ಯಕ್ಕೆ ಪಾಲಕರು ನಾಂದಿ ಹಾಡಬೇಕು:

ಬಳಿಕ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಶಾಸಕ ಲಕ್ಷ್ಮಣ ಸವದಿ ಅವರು, “ತಾಲೂಕಿನ ಪ್ರತಿಯೊಬ್ಬ ಪಾಲಕರು ತಮ್ಮ ಐದು ವರ್ಷದೊಳಗಿನ ಮಕ್ಕಳಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಅಥವಾ ತಮ್ಮ ಸಮೀಪದ ಪೋಲಿಯೋ ಬೂತ್‌ಗಳಲ್ಲಿ ತಪ್ಪದೇ ಪೋಲಿಯೋ ಹನಿಯನ್ನು ಹಾಕಿಸಬೇಕು. ಆ ಮೂಲಕ ಮಕ್ಕಳ ಆರೋಗ್ಯವಂತ ಭವಿಷ್ಯಕ್ಕೆ ನಾಂದಿ ಹಾಡಬೇಕು,” ಎಂದು ಕರೆ ನೀಡಿದರು.                                   

ಈ ಮಹತ್ವದ ಸಂದರ್ಭದಲ್ಲಿ ವೇದಿಕೆಯ ಮೇಲೆ ತಾಲೂಕು ವೈದ್ಯಾಧಿಕಾರಿಗಳಾದ (THO) ಬಸನಗೌಡ ಕಾಗೆ, ಪುರಸಭೆ ಅಧ್ಯಕ್ಷರಾದ ಶಿವಲೀಲಾ ಬುಟಾಳಿ, ಪ್ರಮುಖರಾದ ಅರುಣ್ ಯಲಗುದ್ರಿ, ಭುವನೇಶ್ವರಿ ಯಂಕಚ್ಚಿ, ದತ್ತಾ ವಾಸ್ಟರ್, ಸೈಯದ್ ಅಮ್ಮಿನ್ ಗದ್ಯಾಳ್, ರಾಜಶೇಖರ್ ಗುಡೋಡಗಿ ಹಾಗೂ ಮಲ್ಲೇಶ್ ಹುದ್ದಾರ್ ಸೇರಿದಂತೆ ಪುರಸಭೆಯ ವಿವಿಧ ಸದಸ್ಯರು ಉಪಸ್ಥಿತರಿದ್ದರು.


ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಆಸ್ಪತ್ರೆಯ ಸಮಸ್ತ ಸಿಬ್ಬಂದಿ ವರ್ಗ ಹಾಗೂ ಸ್ಥಳೀಯ ನಾಯಕರು ಮತ್ತು ಸಾರ್ವಜನಿಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ವರದಿ: ಮಹೇಶ್ ಶರ್ಮಾ

About The Author

error: Content is protected !!