July 15, 2026

ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆಯಲ್ಲಿ ತಾಲೂಕು ಮಟ್ಟದ ಪಲ್ಸ್ ಪೋಲಿಯೋ ಅಭಿಯಾನಕ್ಕೆ ಅದ್ದೂರಿ ಚಾಲನೆ

ಚಿಕ್ಕೋಡಿ: ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ದಿನಾಂಕ ೨೮.೦೬.೨೦೨೬ರ ಭಾನುವಾರದಂದು ತಾಲೂಕು ಮಟ್ಟದ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮಕ್ಕೆ ಅತ್ಯಂತ ಯಶಸ್ವಿಯಾಗಿ ಚಾಲನೆ ನೀಡಲಾಯಿತು.
ಅಪರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ. ಎಸ್.ಎಸ್. ಗಡೆದ ಅವರು ಮಗುವಿಗೆ ಪೋಲಿಯೋ ಹನಿಗಳನ್ನು ಹಾಕುವ ಮೂಲಕ ಈ ಬೃಹತ್ ಅಭಿಯಾನವನ್ನು ಉದ್ಘಾಟಿಸಿದರು.

೫೨,೪೦೭ ಮಕ್ಕಳಿಗೆ ಲಸಿಕೆ ಹಾಕುವ ಮಹತ್ತರ ಗುರಿ:

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಡಾ. ಎಸ್.ಎಸ್. ಗಡೆದ ಅವರು, “ಚಿಕ್ಕೋಡಿ ತಾಲೂಕಿನಲ್ಲಿ ಈ ಬಾರಿ ೦ ಯಿಂದ ೫ ವರ್ಷದೊಳಗಿನ ಒಟ್ಟು ೫೨,೪೦೭ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವ ಮಹತ್ತರ ಗುರಿಯನ್ನು ಹೊಂದಲಾಗಿದೆ. ಇದಕ್ಕಾಗಿ ತಾಲೂಕಿನಾದ್ಯಂತ ೨೯೨ ಲಸಿಕಾ ಬೂತ್‌ಗಳನ್ನು ಸ್ಥಾಪಿಸಲಾಗಿದ್ದು, ೧೧೬೪ ಲಸಿಕಾ ಕಾರ್ಯಕರ್ತರು ಹಾಗೂ ಉಸ್ತುವಾರಿಗಾಗಿ ೬೪ ಮೇಲ್ವಿಚಾರಕರನ್ನು ನಿಯೋಜಿಸಲಾಗಿದೆ. ಭಾರತವನ್ನು ಸಂಪೂರ್ಣ ಪೋಲಿಯೋಮುಕ್ತ ದೇಶವನ್ನಾಗಿಸಲು ಪ್ರತಿಯೊಬ್ಬ ನಾಗರಿಕರು ಸರ್ಕಾರದ ಈ ಯೋಜನೆಯ ಸದುಪಯೋಗ ಪಡಿಸಿಕೊಳ್ಳಬೇಕು,” ಎಂದು ಕರೆ ನೀಡಿದರು.

ಮೂರು ದಿನಗಳ ಕಾಲ ಅಭಿಯಾನ:

ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗಳಾದ ಡಾ. ಮಹೇಶ ನಾಗರಬೆಟ್ಟ ಅವರು ಮಾತನಾಡಿ, “ಭಾನುವಾರದಿಂದ ಆರಂಭವಾಗಿ ಒಟ್ಟು ಮೂರು ದಿನಗಳ ಕಾಲ ಈ ಪಲ್ಸ್ ಪೋಲಿಯೋ ಕಾರ್ಯಕ್ರಮವು ಜಾರಿಯಲ್ಲಿರಲಿದೆ. ಮೊದಲ ದಿನ ಬೂತ್‌ಗಳಲ್ಲಿ ಲಸಿಕೆ ಹಾಕಲಾಗುತ್ತಿದ್ದು, ಬಾಕಿ ಉಳಿದ ಮಕ್ಕಳಿಗಾಗಿ ಮುಂದಿನ ದಿನಗಳಲ್ಲಿ ಮನೆ ಮನೆಗೆ ತೆರಳಿ ಲಸಿಕೆ ನೀಡಲಾಗುವುದು. ಸಾರ್ವಜನಿಕರು ಆರೋಗ್ಯ ಇಲಾಖೆಯೊಂದಿಗೆ ಕೈಜೋಡಿಸಿ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಸಹಕರಿಸಬೇಕು,” ಎಂದು ವಿನಂತಿಸಿದರು.                                             

ಈ ಪ್ರಮುಖ ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತ್ ಇಒ ಬಿ.ಡಿ. ನಾಯಕವಾಡಿ, ತಾಲೂಕಾ ಆರೋಗ್ಯಾಧಿಕಾರಿ (THO) ಡಾ. ರಾಜೇಂದ್ರ ಖನದಾಳೆ, ತಹಶೀಲ್ದಾರ್ ಎನ್.ಆರ್. ಜೋಗಳ್, ಪ್ರಮುಖ ವೈದ್ಯರಾದ ಡಾ. ರವೀಂದ್ರ ಅಂಟಿನ, ಸಂತೋಷ ಕಾಂಬಳೆ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಮುಖಂಡರಾದ ಸಂಜು ಬರಿಗೇರ, ಸಮಾಜ ಸೇವಕ ಚಂದ್ರಕಾಂತ ಹುಕ್ಕೇರಿ, ರೋಟರಿ ಕ್ಲಬ್ ಅಧ್ಯಕ್ಷರು ಸೇರಿದಂತೆ ಸ್ಥಳೀಯ ಮುಖಂಡರು, ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿ ಉಪಸ್ಥಿತರಿದ್ದರು.
ವರದಿ: ಮಹೇಶ್ ಶರ್ಮಾ

About The Author

error: Content is protected !!